ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರತನ್ ಕುಮಾರ್ ಕಟ್ಟೇಮಾರ್ ನಿಧನ

1:04 PM, Monday, November 9th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Rathan Kumarಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರತನ್ ಕುಮಾರ್ ಕಟ್ಟೇಮಾರ್ (82) ಅವರು ಭಾನುವಾರ  ನಿಧನ ಹೊಂದಿದರು.

1967ರಿಂದ 1972ರವರೆಗೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ರತನ್ ಕುಮಾರ್ ಕಟ್ಟೇಮಾರ್ ಅವರು ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ ನ ಬಿ.ಗಂಗಾಧರ ದಾಸ್ ವಿರುದ್ಧ ಜಯ ಗಳಿಸಿದ್ದರು. ನಂತರ 1972 ರ ಚುನಾವಣೆಯಲ್ಲಿ ಅವರು ಸುರತ್ಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಜನಪ್ರತಿನಿಧಿಯಾಗಿ ಭೂ ಮಸೂದೆಯ ವಿರುದ್ಧ ಸದಾ ದನಿಯೆತ್ತಿದ್ದ ಅವರು ಪ್ರತ್ಯೇಕ ತುಳು ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದ ಮೊದಲ ಶಾಸಕರಾಗಿ ಗುರುತಿಸಿಕೊಂಡಿದ್ದರು.

ಬೈಕ್‍ಗಳೇ ಅಪರೂಪವೆನಿಸಿದ್ದ ಎಪ್ಪತ್ತರ ದಶಕದಲ್ಲಿ ತಮ್ಮ ಜಾವಾ ಬೈಕ್‍ನಲ್ಲಿಯೇ ಬೆಂಗಳೂರು, ಮದ್ರಾಸ್, ತಿರುಪತಿ, ಕೊಚ್ಚಿ ಹೀಗೆ ದೂರದ ರಾಜ್ಯಗಳಿಗೂ ಸುತ್ತಾಡಿ ಗಮನ ಸೆಳೆದಿದ್ದರು.

1968ರಲ್ಲಿ ಮೈಸೂರಿನಲ್ಲಿ ಆನೆಗಳನ್ನು ಸೆರೆಹಿಡಿಯುವ ಖೆಡ್ಡಾದ ಕಾರ್ಯಾಚರಣೆ ವೀಕ್ಷಿಸಲು ತೆರಳಿದ್ದ ಸಂದರ್ಭದಲ್ಲಿ ಫೈರಿಂಗ್‍ನಿಂದಾಗಿ ಅವರ ಎಡಕಣ್ಣಿಗೆ ಗಂಭೀರವಾಗಿ ಹಾನಿಯಾಗಿತ್ತು. ಎಂಭತ್ತರ ದಶಕದಲ್ಲಿ ರಾಜ್ಯದ ಗಮನ ಸೆಳೆದಿದ್ದ ಮೂಡುಬಿದಿರೆಯ ಅಂಕಸಾಲೆ ಚಾಮುಂಡಿಬೆಟ್ಟದ ದೇವಿ ಆರಾಧನಾ ಸ್ಥಳ ವಿವಾದದಲ್ಲಿ ಪರವಾಗಿದ್ದ ಬಣದಲ್ಲಿ ಕಟ್ಟೇಮಾರ್ ಗುರುತಿಸಿಕೊಂಡಿದ್ದರು. ಭೂಸೇನೆಯ ಸ್ಥಾಪಕ ಕಾರ್ಯದರ್ಶಿ, ರೈತವಾರೀ ಭೂಮಾಲೀಕರ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಅವರು ಜಯಪ್ರಕಾಶ್ ನಾರಾಯಣರ ಚಳವಳಿಯಲ್ಲಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ್ದರು.

1986ರ ಬಳಿಕ ಅಧ್ಯಾತ್ಮಿಕವಾಗಿ ತೊಡಗಿಕೊಂಡು ಮಂಗಳೂರಿನ ತಮ್ಮ ನಿವಾಸದಲ್ಲಿ ದೇವಿ ಧರ್ಮಧೂತರೆಸಿಕೊಂಡು ಕಾರ್ಯನಿರತರಾಗಿದ್ದರು. ಕಟ್ಟೆಮಾರ್ ಅವರ ನಿಧನಕ್ಕೆ ಮೂಡುಬಿದಿರೆ ಜೈನಮಠದ ಭಟ್ಟಾರಕ ಶ್ರೀಗಳವರು ಸಂತಾಪ ವ್ಯಕ್ತಪಡಿದ್ದಾರೆ.

ರತನ್ ಕುಮಾರ್ ಕಟ್ಟೇಮಾರ್ ನಿಧನಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ, ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English