ನಕಲಿ ಸಾರಿಗೆ ಸಂಚಾರ ನಿರೀಕ್ಷಕನ ಬಂಧನ

3:19 PM, Wednesday, December 12th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Fake traffic inspectorಮಂಗಳೂರು :ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರಾ ಪ್ರಯುಕ್ತ ಸಾರಿಗೆ ವ್ಯವಸ್ಥೆ ಸುಗಮಗೊಳಿಸಲು ಕಳುಹಿಸಿದ್ದಾರೆಂದು ನಕಲಿ ಗುರುತುಪತ್ರ ತೋರಿಸಿ ಕಳೆದೆರಡು ದಿನಗಳಿಂದ ತಪಾಸನಾಧಿಕಾರಿಯ ಸಮವಸ್ತ್ರ ಧರಿಸಿ, ಸುಬ್ರಹ್ಮಣ್ಯಕ್ಕೆ ಬರುವ ಎಲ್ಲಾ ಸರಕಾರಿ ಬಸ್ ಗಳ ತಪಾಸಣೆ ನಡೆಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ತಪಾಸಣಾಧಿಕಾರಿಯನ್ನು ಸೆರೆ ಹಿಡಿಯಲಾಗಿದೆ.

ತುಮಕೂರು ಬಿ.ಎಂ ಪಾಳ್ಯದ ಉರಿಡೆಗೆರೆ ರವಿಕುಮಾರ್(25) ಎಂಬಾತ ಆರೋಪಿಯಾಗಿದ್ದಾನೆ. ಇಲಾಖೆಯ ಜಾಗೃತ ದಳದವರು ಮಂಗಳವಾರ ಈತನನ್ನು ಹಿಡಿದು ಸುಬ್ರಹ್ಮಣ್ಯ ಪೋಲೀಸರಿಗೆ ಒಪ್ಪಿಸಿದ್ದಾರೆ. ಐಟಿಐ ತರಬೇತಿ ಹೊಂದಿರುವ ಈತ ಬೆಂಗಳೂರು ಕೇಂದ್ರ ಕಚೇರಿಯಿಂದ ಸುಬ್ರಹ್ಮಣ್ಯ ಜಾತ್ರೆ ನಿಮಿತ್ತ ಇಬ್ಬರನ್ನು ನಿಯುಕ್ತಿಗೊಳಿಸಿದ್ದು, ಒಬ್ಬ ಧರ್ಮಸ್ಥಳಕ್ಕೆ ತೆರಳಿದ್ದಾನೆ. ನಾನು ಇಲ್ಲಿಗೆ ನಿಯುಕ್ತಿ ಹೊಂದಿದ್ದೇನೆ ಎಂದು ಹೇಳಿ ಶನಿವಾರ ಸುಬ್ರಹ್ಮಣ್ಯ ಬಸ್ ನಿಲ್ದಾಣಕ್ಕೆ ಬಂದ ರವಿಕುಮಾರ್ ತನ್ನ ಕೆಲಸ ಆರಂಭಿಸಿದ. ಇಪ್ಪತ್ತೈದಕ್ಕೂ ಹೆಚ್ಚು ಬಸ್ ಗಳನ್ನು ತಪಾಸಣೆ ನಡೆಸಿದ ಈತ ತನ್ನ ಪ್ರಭಾವ ಬಳಸಿ ಉಚಿತ ವಸತಿ, ಊಟೋಪಚಾರ ಗಿಟ್ಟಿಸಿಕೊಂಡಿದ್ದಾನೆ.

ಈತನ ಚಲನ-ವಲನದ ಕುರಿತು ಸಂಶಯಗೊಂಡ ಸುಬ್ರಹ್ಮಣ್ಯದ ಸಾರಿಗೆ ನಿಯಂತ್ರಕರಾದ ಸುಬ್ರಹ್ಮಣ್ಯ ಭಟ್ ಮತ್ತು ಮಹಾಬಲ ರೈ ಅವರು ಪುತ್ತೂರು ಕಚೇರಿಗೆ ಮಾಹಿತಿ ತಿಳಿಸಿದರು. ಪುತ್ತೂರು ವಿಭಾಗದ ಭದ್ರತಾ ಮತ್ತು ಜಾಗೃತದಳದ ಕರೀಗೌಡ ಮತ್ತು ತಂಡದವರು ಸುಬ್ರಹ್ಮಣ್ಯ ಬಸ್ ನಿಲ್ದಾಣಕ್ಕೆ ಆಗಮಿಸಿ ರವಿಕುಮಾರ್‌ನನ್ನು ವಿಚಾರಣೆ ಮಾಡಿದಾಗ ಆತ ನಕಲಿ ತಪಾಸಣಾಧಿಕಾರಿ ಎನ್ನುವುದು ಖಾತ್ರಿಯಾಯಿತು. ಆತ ಧರಿಸಿದ್ದ ಸಮವಸ್ತ್ರವೂ ಬಾಡಿಗೆಯದ್ದೆಂದು ಬಹಿರಂಗವಾಯಿತು. ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಿಸಲಾಗಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English