ತಲಪಾಡಿಯ ಶಾರದಾ ಆಸ್ಪತ್ರೆಯಲ್ಲಿ ಪೋಸ್ಟ್-ಕೋವಿಡ್ ಆಯುಷ್ ಕೇರ್ ಕೇಂದ್ರ ಲೋಕಾರ್ಪಣೆ

2:25 PM, Friday, November 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

sharadhaಮಂಗಳೂರು  : ಬಹು ನಿರೀಕ್ಷೆಯ ಪೋಸ್ಟ್-ಕೋವಿಡ್ ಆಯುಷ್ ಕೇರ್ ಕೇಂದ್ರವನ್ನು ನವೆಂಬರ್ 18 ರಂದು ಮಂಗಳೂರಿನ ತಲಪಾಡಿಯ ಶಾರದಾ ಆಯುರ್ಧಾಮ ಕ್ಯಾಂಪಸ್‌ನಲ್ಲಿ ಉದ್ಘಾಟಿಸಲಾಯಿತು.

ಕೋವಿಡ್19ನಿಂದ ಗುಣಮುಖರಾದರೂ ಹಲವರಲ್ಲಿ ಬಳಲಿಕೆ, ಮೈಕೈ ನೋವು, ಉಸಿರಾಟದ ತೊಂದರೆ, ಶ್ವಾಸಕೋಶದ ಸಮಸ್ಯೆ, ತಲೆನೋವು, ನರದೌರ್ಬಲ್ಯ, ಮಲಬದ್ಧತೆ, ಮತ್ತು ಮಾನಸಿಕವಾಗಿ ಒತ್ತಡ, ಆತಂಕ, ಖಿನ್ನತೆಯಂತಹ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕೋವಿಡ್ ನಂತರದ ಆರೈಕೆ ಸೇವೆಗಳ ಅಗತ್ಯವನ್ನು ಪರಿಗಣಿಸಿ, ಮಂಗಳೂರಿನ ತಲಪಾಡಿಯಲ್ಲಿರುವ ಶಾರದಾ ಆಯುರ್ವೇದ, ಪ್ರಕೃತಿಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಗಳು, ಈ ಕೇಂದ್ರವನ್ನು ತೆರೆದಿದ್ದು, ಕಡಿಮೆ ವೆಚ್ಚದಲ್ಲಿ ಸೂಕ್ತ ಚಿಕಿತ್ಸೆಗಳು ಒಳ/ಹೊರರೋಗಿ ಆಧಾರದಲ್ಲಿ ಲಭ್ಯವಿವೆ. ವಿವರಗಳಿಗಾಗಿ ಕೇಂದ್ರವನ್ನು 0824-2281231, 8971153232 ಸಂಪರ್ಕಿಸಬಹುದು.

ತಮ್ಮ ಉದ್ಘಾಟನಾ ಭಾಷಣದಲ್ಲಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ, “ಆಯುರ್ವೇದ, ಪ್ರಕೃತಿಚಿಕಿತ್ಸೆ ಮತ್ತು ಯೋಗಾಭ್ಯಾಸಗಳಂತಹ ಸಾಂಪ್ರದಾಯಿಕ ಔಷಧಿಗಳ ಮೂಲಕ ಮಾತ್ರ ದೇಹದಲ್ಲಿ ಇಮ್ಯೂನಿಟಿ ಹೆಚ್ಚಿಸಲು ಸಾಧ್ಯ. ಕೋವಿಡ್‌ನಿಂದ ಹೊರಬರಲು ನಾನು ಕೂಡ ಈ ಔಷಧಿಗಳನ್ನು ಮತ್ತು ಜೀವನಶೈಲಿ ಅಭ್ಯಾಸಗಳನ್ನು ಮಾಡಿಸಿದ್ದೇನೆ. ಕೋವಿಡ್ ನಂತರ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಿಗೆ, ಶಾರದಾ ಆಯುರ್ವೇದ, ಪ್ರಕೃತಿಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಗಳು ಟ್ರೀಟ್ಮೆಂಟ್ ಪ್ರೋಟೋಕಾಲ್‌ಗಳನ್ನು ಸಿದ್ಧಪಡಿಸಿ, ಚಿಕಿತ್ಸೆ ನೀಡಲು ಮುಂದೆ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಕೊರೋನಾ ಮುಕ್ತರ ಪುನಶ್ಚೇತನ ಕೇಂದ್ರದಲ್ಲಿ ಅವರು ನೀಡುವ ಎಲ್ಲಾ ಚಿಕಿತ್ಸೆಗಳು ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ ”ಎಂದು ಶುಭ ಹಾರೈಸಿದರು.

ಮಾಜಿ ಆರೋಗ್ಯ ಸಚಿವ ಮತ್ತು ಮಂಗಳೂರಿನ ಶಾಸಕರಾದ ಯು. ಟಿ. ಖಾದರ್ ಮಾತನಾಡಿ “ಶಾರದಾ ಸಂಸ್ಥೆಗಳ ಎಲ್ಲಾ ಕಾರ್ಯಗಳಲ್ಲಿ ಸಹ ಭಾಗಿಯಾಗಲು ನಾನು ಇಷ್ಟಪಡುತ್ತೇನೆ. ಏಕೆಂದರೆ ಅವರು ಮಾಡುವ ಪ್ರತಿಯೊಂದು ಕೆಲಸಗಳು ಉತ್ತಮ ಚಿಂತನೆಯಿಂದ ಕೂಡಿದ್ದು, ಜನಪರವಾಗಿರುತ್ತದೆ. ಪೋಸ್ಟ್-ಕೋವಿಡ್ ಆಯುಷ್ ಕೇರ್ ಕೇಂದ್ರ ಆರಂಭಿಸುವ ಈ ವಿಶಿಷ್ಟ ಪ್ರಯತ್ನದಲ್ಲಿ ಭಾಗಿಯಾಗಿರುವ ಪ್ರೊ. ಎಂ ಬಿ ಪುರಾಣಿಕ್ ಮತ್ತು ಅವರ ವೈದ್ಯರ ತಂಡವನ್ನು ನಾನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ. ಈ ರೀತಿಯ ಆರೋಗ್ಯ ಸೌಲಭ್ಯಗಳನ್ನು ಬೆಂಬಲಿಸುವುದು ಮತ್ತು ಉತ್ತೇಜಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಇದರಿಂದ ಹೆಚ್ಚಿನ ಜನರು ಪ್ರಯೋಜನವನ್ನು ಪಡೆಯುತ್ತಾರೆ ಎಂಬ ಭರವಸೆ ನನಗಿದೆ ” ಎಂದರು.

ಲಯನ್ಸ್ ಜಿಲ್ಲಾ ಗವರ್ನರ್ ಡಾ. ಗೀತಾಪ್ರಕಾಶ್ ಅವರು ಮಾತನಾಡಿ, “ರಾಜಕಾರಣಿಗಳು, ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳು, ಆಯುಷ್ ಮತ್ತು ಅಲೋಪತಿ ವೈದ್ಯರು, ಶಿಕ್ಷಣ ತಜ್ಞರು ಮತ್ತು ಮಾಧ್ಯಮಗಳನ್ನು ಒಳಗೊಂಡ ಈ ವೇದಿಕೆ, ವೈದ್ಯಕೀಯ ಸವಾಲುಗಳನ್ನು ಎದುರಿಸುವಲ್ಲಿ ಎಲ್ಲರ ಸಹಭಾಗಿತ್ವದ ಅಗತ್ಯವನ್ನು ತೋರಿಸುತ್ತದೆ. ತಮ್ಮ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಶಾರದಾ ಸಂಸ್ಥೆ, ಮಂಗಳೂರಿನ ಮೊತ್ತಮೊದಲ ಪೋಸ್ಟ್-ಕೋವಿಡ್ ಆಯುಷ್ ಕೇರ್ ಕೇಂದ್ರವನ್ನು ಆರಂಭಿಸುವ ಮೂಲಕ ತಮ್ಮ ಸಮಾಜಮುಖಿ ಕಾರ್ಯಗಳ ಆದ್ಯತೆಯನ್ನು ತೋರಿಸಿಕೊಟ್ಟಿದೆ. ಲಯನ್ಸ್ ಕ್ಲಬ್ ಮತ್ತು ವೈಯಕ್ತಿಕ ಮಟ್ಟದಲ್ಲಿ ನಾನು ಶಾರದಾ ಗ್ರೂಪ್‌ನೊಂದಿಗೆ ಸೇರಿ ಸೇವೆ ನೀಡುತ್ತಿರುವುದಕ್ಕೆ ಹೆಮ್ಮೆಪಡುತ್ತೇನೆ” ಎಂದರು.
ಶಾರದಾ ಸಮೂಹ ಸಂಸ್ಥೆಗಳ ಹಿರಿಯ ಟ್ರಸ್ಟಿ ಡಾ.ಸೀತಾರಾಮ ಭಟ್ ದಂಡತೀರ್ಥ ತಮ್ಮ ವೈದ್ಯಕೀಯ ಅನುಭವಗಳನ್ನು ಹಂಚಿಕೊಂಡರು ಮತ್ತು ನೈಸರ್ಗಿಕ ಆಹಾರ ಮತ್ತು ಜೀವನಶೈಲಿಯ ಅಗತ್ಯತೆಯನ್ನು ಸ್ಪಷ್ಟಪಡಿಸಿದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್, “ನಾನು ಒಬ್ಬ ಕೋವಿಡ್ ಮುಕ್ತನಾಗಿದ್ದು, ನನ್ನ ಆರೋಗ್ಯವನ್ನು ಮರಳಿ ಪಡೆಯುವಲ್ಲಿ ಆಯುರ್ವೇದ, ಪ್ರಕೃತಿಚಿಕಿತ್ಸೆ ಮತ್ತು ಯೋಗದ ಪ್ರಾಮುಖ್ಯತೆಯನ್ನು ಸ್ವತ: ಅರಿತಿದ್ದೇನೆ ಮತ್ತು ಅನುಭವಿಸಿದ್ದೇನೆ. ಭಾರತೀಯ ಔಷಧ ಪದ್ಧತಿಗಳು ಯಾವಾಗಲೂ ಸಂಪೂರ್ಣ ಸ್ವರೂಪದಲ್ಲಿರುತ್ತವೆ ಎಂಬುದಕ್ಕೆ ಇದೊಂದು ಪುರಾವೆ. ರಾಷ್ಟ್ರೀಯ ಆಯುರ್ವೇದ ದಿನ ಹಾಗೂ ರಾಷ್ಟ್ರೀಯ ಪ್ರಕೃತಿಚಿಕಿತ್ಸಾ ದಿನದ ಪ್ರಯುಕ್ತ ಲೋಕಾರ್ಪಣೆ ಗೊಂಡಿರುವ ಈ ಪೋಸ್ಟ್-ಕೋವಿಡ್ ಕೇಂದ್ರವನ್ನು ಬಳಸಿ ಜನರು ತಮ್ಮ ಆರೋಗ್ಯವನ್ನು ಮರಳಿ ಪಡೆಯಬೇಕಾಗಿ ನಾನು ಈ ಮೂಲಕ ಕೋರುತ್ತೇನೆ. ನಮ್ಮ ಈ ಪ್ರಯತ್ನದಲ್ಲಿ ಸಹವರ್ತಿಗಳಾಗಿರುವ ಜಿಲ್ಲಾಡಳಿತ, ನಮ್ಮ ಮಂಗಳೂರಿನ ಶಾಸಕರು ಮತ್ತು ಲಯನ್ಸ್ ಕ್ಲಬ್‌ಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದರು.

ಆಯುಷ್ ಇಲಾಖೆ ಮಂಗಳೂರಿನ ಡಾ. ಸಹನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಮತ್ತು ಮುಖ್ಯ ವೈದ್ಯಾಧಿಕಾರಿ ಡಾ.ರವಿಗಣೇಶ್ ಮೊಗ್ರ ಅವರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಶಾರದಾ ಇಮ್ಯುನಿಟಿ ಉತ್ಪನ್ನಗಳನ್ನು ಗಣ್ಯರಿಗೆ ಪರಿಚಯಿಸಲಾಯಿತು. ಶಾರದ ಯೋಗ ಮತ್ತು ಪ್ರಕೃತಿಚಿಕಿತ್ಸಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಅವರು ವಂದಿಸಿದರು. ಡಾ. ಶ್ರವ್ಯ ಅವರು ಪ್ರಾರ್ಥನೆಯನ್ನು ನೆರವೇರಿಸಿದರು. ಸಂಬಂಧಾಧಿಕಾರಿ, ಶ್ರೀ ವಿಕ್ರಮ್ ಕುಂಟಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಿಗಳು, ಮುಖ್ಯ ಆಡಳಿತಾಧಿಕಾರಿ, ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಗೂ ಆರೋಗ್ಯಾರ್ಥಿಗಳು ಭಾಗವಹಿಸಿದ್ದರು.

SunilKumar   vedavyas   HarishPoonja   SAngara   RajeshNaik   Mattaru   SanjeevaMatanduru

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English