ಪೇಶಾವರ್ : ವಾಯುವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಪರ್ವತ ಪ್ರಾಂತ್ಯದಲ್ಲಿ 1,300 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾದ ಶ್ರೀವಿಷ್ಣುವಿಗೆ ಸೇರಿದ ಹಿಂದೂ ದೇವಾಲಯವು ಪತ್ತೆಯಾಗಿದೆ. ಪಾಕಿಸ್ತಾನ ಹಾಗೂ ಇಟಾಲಿಯನ್ ಪುರಾತತ್ವ ತಜ್ಞರು ಈ ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ.
ಬ್ಯಾರಿಕೋಟ್ ಘುಂಡೈನಲ್ಲಿ ಉತ್ಖನನ ನಡೆಸಿದಾಗ ಈ ದೇವಾಲಯ ಪತ್ತೆಯಾಗಿದೆ.
ಇದೊಂದು ವಿಷ್ಣುವಿನ ದೇವಾಲಯವಾಗಿದ್ದು ಇದನ್ನು ಹಿಂದೂಶಾಹಿ ಅವಧಿಯಲ್ಲಿ1,300 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದಾಗಿ ಖೈಬರ್ ಪಖ್ತುನ್ಖ್ವಾ ಪುರಾತತ್ವ ವಿಭಾಗದ ಫಜಲ್ ಖಲೀಕ್ ಹೇಳಿದ್ದಾರೆ.
ಹಿಂದೂ ಶಾಹಿಸ್ ಅಥವಾ ಕಾಬೂಲ್ ಶಾಹಿಸ್ (ಕ್ರಿ.ಶ. 850 1026) ಕಾಬೂಲ್ ಕಣಿವೆ (ಪೂರ್ವ ಅಫ್ಘಾನಿಸ್ತಾನ), ಗಾಂಧಾರ (ಆಧುನಿಕ ಕಾಲದ ಪಾಕಿಸ್ತಾನ, ಅಫ್ಘಾನಿಸ್ತಾನ) ಮತ್ತು ಇಂದಿನ ವಾಯುವ್ಯ ಭಾರತವನ್ನು ಆಳಿದ ಹಿಂದೂ ರಾಜವಂಶ.
ತಮ್ಮ ಉತ್ಖನನದ ಸಮಯದಲ್ಲಿ, ಪುರಾತತ್ತ್ವಜ್ಞರು ದೇವಾಲಯದ ಸಮೀಪ ಕಂಟೋನ್ಮೆಂಟ್ ಮತ್ತು ವಾಚ್‌ಟವರ್‌ಗಳ ಕುರುಹುಗಳನ್ನು ಸಹ ಕಂಡುಕೊಂಡಿದ್ದಾರೆ. ದೇವಾಲಯದ ಸ್ಥಳದ ಬಳಿ ನೀರಿನ ಬಾವಿಯನ್ನು ತಜ್ಞರು ಕಂಡುಕೊಂಡರು, ಅದನ್ನು ದೇವಾಲಯದಲ್ಲಿ ದೇವರ ಪೂಜೆಗೆ ಮುನ್ನ ಸ್ನಾನಕ್ಕಾಗಿ ಬಳಸಲಾಗುತ್ತಿತ್ತು.
ಸ್ವಾತ್ ಜಿಲ್ಲೆಯು ಸಾವಿರ ವರ್ಷಗಳಷ್ಟು ಹಳೆಯದಾದ ಪುರಾತತ್ವ ಸ್ಥಳಗಳಿಗೆ ನೆಲೆಯಾಗಿದೆ ಮತ್ತು ಹಿಂದೂ ಶಾಹಿ ಕಾಲದ ಕುರುಹುಗಳು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಕಂಡುಬಂದಿವೆ ಎಂದು ಫಜಲ್ ಖಲೀಕ್ ಹೇಳಿದ್ದಾರೆ. ಸ್ವಾತ್ ಜಿಲ್ಲೆಯಲ್ಲಿ ಪತ್ತೆಯಾದ ಗಾಂಧಾರ ನಾಗರಿಕತೆಯ ಮೊದಲ ದೇವಾಲಯ ಇದಾಗಿದೆ ಎಂದು ಇಟಾಲಿಯನ್ ಪುರಾತತ್ವ ಕಾರ್ಯಾಚರಣೆಯ ಮುಖ್ಯಸ್ಥರಾದ ಡಾ. ಲೂಕ ಹೇಳಿದರು.
Click this button or press Ctrl+G to toggle between Kannada and English