ಬೆಂಗಳೂರು: ಗ್ರಾಪಂ ಚುನಾವಣೆಗೆ ಆಯೋಗ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮೂರು ವಾರಗಳಲ್ಲಿ ವೇಳಾಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್ ಆದೇಶಿಸಿದೆ. ಅದರಂತೆ ಕ್ರಮಕೈಗೊಳ್ಳಲಾಗುವುದು. ಪ್ರತಿ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಡಾ. ಬಿ. ಬಸವರಾಜು ಹೇಳಿದ್ದಾರೆ.
ನವೆಂಬರ್ ಕೊನೇ ವಾರದಲ್ಲಿ ಚುನಾವಣೆಗೆ ದಿನಾಂಕ ಘೋಷಣೆ ಮಾಡುವುದಾಗಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದ ಸಂಭಾವ್ಯ ವೇಳಾಪಟ್ಟಿಯಲ್ಲಿ ಚುನಾವಣಾ ಆಯೋಗ ಹೇಳಿತ್ತು. ಈ ಮಧ್ಯೆ ಮೂರು ವಾರಗಳಲ್ಲಿ ಚುನಾವಣೆಗೆ ಅಧಿಸೂಚನೆ ಹೊರಡಿಸುವಂತೆ ಹೈಕೋರ್ಟ್ ನ.13ಕ್ಕೆ ಆದೇಶಿಸಿದೆ.
ಅದರಂತೆ ಡಿಸೆಂಬರ್ 4ಕ್ಕೆ ಮೂರು ವಾರಗಳು ಆಗಲಿವೆ. ಹೀಗಾಗಿ, ಮೂರು ವಾರಗಳಲ್ಲಿ ದಿನಾಂಕ ಪ್ರಕಟಿಸಬೇಕಾಗಿರುವುದರಿಂದ ಈ ತಿಂಗಳ ಅಂತ್ಯಕ್ಕೆಅಥವಾ ಡಿಸೆಂಬರ್ ಮೊದಲ ವಾರದಲ್ಲಿ 5,800ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ. ರಾಜ್ಯ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿ ಅಧಿಸೂಚನೆ ಹೊರಡಿಸಿದ ಒಂದು ವಾರದಲ್ಲಿ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ. ಹೈಕೋರ್ಟ್ ಆದೇಶದ ಬಳಿಕ ಆಯೋಗ ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನುಕೈಗೊಳ್ಳಬೇಕಾಗಿರುವುದರಿಂದ ಮತ್ತು ಸಾಮಾಜಿಕಅಂತರ ಪಾಲಿಸಬೇಕಾಗಿರುವುದರಿಂದ ಜನ ದಟ್ಟಣೆ ಕಡಿಮೆ ಮಾಡಲು ಮತ್ತು ಚುನಾವಣಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಯ ಸಂಚಾರ, ಪ್ರಯಾಣಕ್ಕೆ ಮಿತಿ ಹಾಕಲು ಜಿಲ್ಲೆಗಳ ಮಟ್ಟದಲ್ಲಿ 2 ಹಂತಗಳಲ್ಲಿ ತಾಲೂಕುಗಳನ್ನು ವಿಭಜಿಸಿ ಚುನಾವಣೆ ನಡೆಸಿದರೆ ಸೂಕ್ತ ಎಂದು ಜಿಲ್ಲಾಡಳಿತ ಅಭಿಪ್ರಾಯಟ್ಟಿದೆ. ಅದರಂತೆ ಜಿಲ್ಲೆಗಳ ಮಟ್ಟದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಆಯೋಗ ತೀರ್ಮಾನಿಸಿದೆ.
ಅಂದರೆ,ಒಂದು ಜಿಲ್ಲೆಯಲ್ಲಿಆರು ತಾಲೂಕುಗಳಿದ್ದರೆ, ಮೊದಲ ಹಂತದಲ್ಲಿ 3 ಮೂರು ಎರಡನೇ ಹಂತದಲ್ಲಿ ಮೂರು ತಾಲೂಕುಗಳಲ್ಲಿ ಚುನಾವಣೆ ನಡೆಯುತ್ತಿದೆ. ಅದರಂತೆ, ಎರಡೂ ಹಂತಗಳಲ್ಲೂ ಎಲ್ಲಾ 30 ಜಿಲ್ಲೆಗಳಲ್ಲೂ ಚುನಾವಣೆ ನಡೆಯುತ್ತದೆ ಎಂದು ಆಯೋಗದ ಅಧಿಕಾರಿಗಳು ವಿವರಿಸಿದ್ದಾರೆ.
2015ರಲ್ಲಿ 176 ತಾಲೂಕುಗಳ 5,855 ಗ್ರಾಪಂಗಳಿಗೆ 2 ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗಿತ್ತು. ಈಗ 226 ತಾಲೂಕುಗಳ 5,800 ಗ್ರಾಪಂಗಳ 35 ಸಾವಿರ ಕ್ಷೇತ್ರಗಳ 93 ಸಾವಿರಕ್ಕೂ ಹೆಚ್ಚು ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗಿದೆ. ಇದಕ್ಕಾಗಿ ಸಾಮಾನ್ಯ ಪರಿಸ್ಥಿತಿಯಲ್ಲಿ 40 ಸಾವಿರ ಮತಗಟ್ಟೆಗಳು ಸ್ಥಾಪಿಸಬೇಕಾಗುತ್ತದೆ. 2 ಲಕ್ಷ ಚುನಾವಣಾ ಸಿಬ್ಬಂದಿ ಬೇಕು. ಆದರೆ,ಕೋವಿಡ್ ಹಿನ್ನೆಲೆಯಲ್ಲಿ10 ಸಾವಿರ ಹೆಚ್ಚುವರಿ ಮತಗಟ್ಟೆಗಳು ಸ್ಥಾಪಿಸಬೇಕು, ಅದಕ್ಕೆ ತಕ್ಕಂತೆ 50 ಸಾವಿರ ಹೆಚ್ಚುವರಿ ಚುನಾವಣಾ ಸಿಬ್ಬಂದಿ, 10 ಸಾವಿರ ಪೊಲೀಸ್ ಸಿಬ್ಬಂದಿ, 50 ಸಾವಿರ ಆರೋಗ್ಯ ಕಾರ್ಯಕರ್ತೆಯರು ಬೇಕು. ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆಗೆ 35 ಕೋಟಿ, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಲು20ಕೋಟಿ ಹಾಗೂ ಸಾರಿಗೆ ವ್ಯವಸ್ಥೆಗೆ10ಕೋಟಿ ಸೇರಿ ಹೆಚ್ಚುವರಿಯಾಗಿ 65 ಕೋಟಿ ರೂ. ಬೇಕಾಗುತ್ತದೆ ಎಂದು ಆಯೋಗ ಲೆಕ್ಕಚಾರ ಹಾಕಿದೆ. ಚುನಾವಣೆ ನಡೆಸಲು ಅಯೋಗವು ಸರ್ಕಾರಕ್ಕೆ 250ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿತ್ತು.
Click this button or press Ctrl+G to toggle between Kannada and English