ಉಗ್ರರ ಪರ ಗೋಡೆ ಬರಹ ಬರೆದ ಇಬ್ಬರು ಆರೋಪಿಗಳ ಬಂಧನ

9:26 PM, Saturday, December 5th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

vikasa kumarಮಂಗಳೂರು: ಬಿಜೈ ಮತ್ತು  ಕೋರ್ಟ್ ಆವರಣದಲ್ಲಿ ಉಗ್ರರ ಪರ ಗೋಡೆ ಬರಹ ಬರೆದ  ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ.

ತೀರ್ಥಹಳ್ಳಿ ಮೂಲದ ಮುಹಮ್ಮದ್ ಶಾರೀಕ್ (22) ಮತ್ತು ಮಾಝ್ ಮುನೀರ್ ಅಹಮ್ಮದ್ (21) ಬಂಧಿತ ಆರೋಪಿಗಳು.

ಪ್ರಚಾರ ಪಡೆಯುವ ಉದ್ದೇಶದಿಂದ ವಿವಾದಿತ ಪ್ರಚೋದನಕಾರಿ ಗೋಡೆ ಬರಹವನ್ನು ಬರೆದಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಬಳಿಕ ಪೊಲೀಸ್ ವಶಕ್ಕೆ ನೀಡಲಾಗುತ್ತದೆ. ಆ ಬಳಿಕ ಮತ್ತೆ ತನಿಖೆ ನಡೆಸಲಾಗುತ್ತದೆ. ಪ್ರಾಥಮಿಕ ತನಿಖೆಯಲ್ಲಿ ಈ ಇಬ್ಬರು ಮಾತ್ರ ಈ ಕೃತ್ಯದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮುಂದೆ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತದೆ ಎಂದರು.

ಮುಹಮ್ಮದ್ ಶಾರೀಕ್ ತೀರ್ಥಹಳ್ಳಿಯಲ್ಲಿರುವ ತನ್ನ ತಂದೆಯ ಬಟ್ಟೆ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಮಾಝ್ ಮುನೀರ್ ಅಹಮ್ಮದ್ ಮಂಗಳೂರಿನ ಕಾಲೇಜೊಂದರಲ್ಲಿ ಬಿಟೆಕ್ ಮೂರನೇ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಜೊಮ್ಯಾಟೊ ಫುಡ್ ಡೆಲಿವರಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ. ಮುಹಮ್ಮದ್ ಶಾರೀಕ್ ಹಾಗೂ ಮಾಝ್ ಮುನೀರ್ ಅಹಮ್ಮದ್ ಇಬ್ಬರೂ ಪರಿಚಿತರಾಗಿರುವುದರಿಂದ ಮಂಗಳೂರಿಗೆ ಬಂದು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಪ್ರಚಾರ ದೊರಕಬೇಕೆಂಬ ಉದ್ದೇಶದಿಂದ ಇಬ್ಬರೂ ಈ ಕೃತ್ಯದಲ್ಲಿ ತೊಡಗಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

ಈ ಕೃತ್ಯದ ಹಿಂದೆ ಇನ್ನೇನಾದರೂ ಉದ್ದೇಶವಿದೆಯೇ ಎಂಬುದರ ಬಗ್ಗೆ ಕೂಲಂಕಷವಾಗಿ ಮುಂದಿನ ಹಂತದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English