ಶಿಕ್ಷಣ ಮತ್ತು ಸಮೂಹ ಉದ್ಯಮ ಸಂಸ್ಥೆಗಳ ಸ್ಥಾಪಕ ಶ್ರೀ.ಆರ್.ಎನ್. ಶೆಟ್ಟಿ ಇನ್ನು ನೆನಪು ಮಾತ್ರ

6:34 PM, Friday, December 18th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

RN Shettyಕುಂದಾಪುರ  : ಆರ್.ಎನ್.ಎಸ್. ಶಿಕ್ಷಣ ಮತ್ತು ಉದ್ಯಮ ಸಮೂಹ ಸಂಸ್ಥೆಗಳ ಸ್ಥಾಪಕ ಶ್ರೀ.ಆರ್.ಎನ್. ಶೆಟ್ಟಿ (92) ಗುರುವಾರ  ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ ಆರ್.ಎನ್. ಶೆಟ್ಟಿ ಅವರು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈದ್ಯಕೀಯ, ಆತಿಥ್ಯ, ವಸತಿ, ಔದ್ಯಮಿಕ, ಔದ್ಯೋಗಿಕ, ವಾಣಿಜ್ಯ, ಶೈಕ್ಷಣಿಕ, ಮೂಲಸೌಕರ್ಯ, ವಿದ್ಯುತ್ ಹಾಗೂ ನೀರಾವರಿ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿದ್ದರು.

1961ರಲ್ಲಿ ಮೂಲಸೌಕರ್ಯ ಕಂಪನಿ ಹುಟ್ಟು ಹಾಕಿದ ಆರ್.ಎನ್. ಶೆಟ್ಟಿ ಅವರು, ಹಿಡಕಲ್ ಜಲಾಶಯ, ತಟ್ಟಿಹಳ್ಳ ಜಲಾಶಯ, ಸೂಪ ಜಲಾಶಯ, ಗೇರುಸೊಪ್ಪ ಜಲಾಶಯ, ಮಾಣಿ ಅಣೆಕಟ್ಟೆ, ವಾರಾಹಿ ಜಲ ವಿದ್ಯುತ್ ಯೋಜನೆ, ಕೊಂಕಣ ರೈಲು ಸುರಂಗ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವೇ ಮೊದಲಾದ ಹಲವು ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ಮುರುಡೇಶ್ವರದಲ್ಲಿ ಸಮುದ್ರ ತೀರದಲ್ಲಿ ಬೃಹತ್ ಶಿವನ ಮೂರ್ತಿ, ಎತ್ತರದ ರಾಜಗೋಪುರ ಸ್ಥಾಪಿಸಿ, ಮುರುಡೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಆ ಜಾಗವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಿದ ಹೆಗ್ಗಳಿಕೆಯೂ ಆರ್.ಎನ್. ಶೆಟ್ಟಿ ಅವರದ್ದೇ.

ಇವರು. ಡಿ.17ರ ನಸುಕಿನ 2 ಗಂಟೆ ಸುಮಾರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಉತ್ತರ ಹಳ್ಳಿಯ ಆರ್.ಎನ್. ಎಸ್. ತಾಂತ್ರಿಕ ವಿದ್ಯಾಲಯ ಕಾಲೇಜು ಆವರಣದಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಇರಿಸಲಾಗಿತ್ತು. ಸಂಜೆ ಅಂತ್ಯ ಸಂಸ್ಕಾರ ನಡೆಯಿತು.

ಆರ್.ಎನ್. ಶೆಟ್ಟಿ ನಿಧನಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದು, ನಾಡಿನ ಖ್ಯಾತ ಉದ್ಯಮಿ ಆರ್.ಎನ್.ಶೆಟ್ಟಿ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರು ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ಹೋಟೆಲ್ ಉದ್ಯಮ, ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಹಾಗೂ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English