ನವದೆಹಲಿ : ಕೃಷಿ ತಜ್ಞರು, ಆರ್ಥಿಕ ತಜ್ಞರು ಮತ್ತು ಪ್ರಗತಿಪರ ರೈತರು ನೂತನ ಕೃಷಿ ಮಸೂದೆಗಳು ಜಾರಿಯಾಗಬೇಕು ಎಂದು ಬೇಡಿಕೆ ಸಲ್ಲಿಸಿದ್ದರಿಂದ ನಾವು ನೂತನ ಕೃಷಿ ಮಸೂದೆಯನ್ನು ಜಾರಿಗೆ ತಂದಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಅವರು ಇಂದು ಮಧ್ಯ ಪ್ರದೇಶದ ರೈಸನ್ ನಲ್ಲಿ ನಡೆದ ‘ಕಿಸಾನ್ ಕಲ್ಯಾಣ್’ ರೈತ ಸಮಾವೇಶವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡುತ್ತಾ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳು, ವಿರೋಧ ಪಕ್ಷಗಳ ಆರೋಪಗಳ ಬಗ್ಗೆ ಮಾತನಾಡಿದರು.
ರಾತ್ರಿ-ಹಗಲಾಗುವುದರ ಒಳಗೆ ತರಾತುರಿಯಲ್ಲಿ ಜಾರಿಗೆ ತಂದಿಲ್ಲ, ಈ ಸುಧಾರಿತ ಮಸೂದೆ ಬಗ್ಗೆ ಕಳೆದ 20-30 ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಸ್ತ್ರೃತವಾಗಿ ಚರ್ಚೆ ನಡೆಸುತ್ತಾ ಬಂದಿವೆ. ನಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ, ನಿಮ್ಮ ಹಳೆ ಚುನಾವಣಾ ಪ್ರಣಾಳಿಕೆಗಳ ಭರವಸೆ, ಆಶ್ವಾಸನೆಗಳನ್ನು ಇಂದು ನಾವು ಈಡೇರಿಸುತ್ತಿದ್ದೇವೆ. ರೈತರ ಜೀವನ ಸುಧಾರಣೆಯಾಗಬೇಕು, ಅವರು ಉದ್ಧಾರವಾಗಬೇಕೆಂಬುದೊಂದೇ ನನ್ನ ಬಯಕೆ, ರೈತರು ಉದ್ಧಾರವಾಗಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಮೂಲಕ ಆಧುನಿಕತೆ ಬರಬೇಕು ಎಂದು ಎಂಬುದು ನನ್ನ ಉದ್ದೇಶವೇ ಹೊರತು ಬೇರಾವ ಸ್ವ ಹಿತಾಸಕ್ತಿಯಿಲ್ಲ ಎಂದರು.
ನೂತನ ಕೃಷಿ ಮಸೂದೆ ಬಂದು ಆರೇಳು ತಿಂಗಳುಗಳಾಗಿವೆ. ಈಗ ಹಠಾತ್ತಾಗಿ ಪ್ರತಿಭಟನೆಗೆ ಏಕೆ ಇಳಿದಿದ್ದಾರೆ, ಅಂದರೆ ತಮ್ಮ ರಾಜಕೀಯ ಲಾಭಕ್ಕಾಗಿ ರೈತರ ಮೂಲಕ ಸುಳ್ಳುಗಳ ಸರಮಾಲೆಯನ್ನು ಹೆಣೆದು ಆಟವಾಡುತ್ತಿದ್ದಾರೆ ರೈತರನ್ನು ಹಾದಿತಪ್ಪಿಸುವ ಕೆಲಸ ಮಾಡುವುದನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕು ಎಂದು ವಿರೋಧ ಪಕ್ಷದವರನ್ನು ಪ್ರಧಾನಿ ಆಪಾದಿಸಿದರು.
ರೈತರ ಹೆಸರಿನಲ್ಲಿ ಈ ಪ್ರತಿಭಟನೆ ಆರಂಭಿಸಿದವರು ಅವರು ಸರ್ಕಾರ ನಡೆಸುತ್ತಿದ್ದಾಗ, ಅವರ ಆಡಳಿತಾವಧಿಯಲ್ಲಿ ಏನು ರೈತರಿಗೆ ಕೊಟ್ಟರು ಎಂಬುದನ್ನು ಈ ದೇಶದ ಜನ ಅರ್ಥ ಮಾಡಿಕೊಳ್ಳಬೇಕು, ಹಿಂದಿನ ಸರ್ಕಾರ ಮಾಡಿರುವ ಕೆಲಸಗಳನ್ನು ಇಂದು ದೇಶದ ಜನತೆ ಮುಂದೆ, ರೈತರ ಮುಂದೆ ತೋರಿಸಿಕೊಡುತ್ತಿದ್ದೇನೆ ಎಂದರು.
ನೂತನ ಕೃಷಿ ಮಸೂದೆಯಲ್ಲಿ ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ)ಯನ್ನು ತೆಗೆದುಹಾಕಬೇಕೆಂದರೆ ನಾವೇಕೆ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರಬೇಕಾಗಿತ್ತು? ಕನಿಷ್ಠ ಬೆಂಬಲ ಬೆಲೆ ಜಾರಿಯ ಬಗ್ಗೆ ನಮ್ಮ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ. ಅದು ಮುಂದುವರಿಯಲೇಬೇಕು. ಅದಕ್ಕಾಗಿ ನಾವು ಪ್ರತಿವರ್ಷ ಬಿತ್ತನೆ ಸಮಯಕ್ಕಿಂತ ಮೊದಲು ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತಾ ಬಂದಿದ್ದೇವೆ. ಇದರಿಂದ ತಮ್ಮ ಬೆಳೆಗಳಿಗೆ ಲೆಕ್ಕಾಚಾರ ಹಾಕಲು ರೈತರಿಗೆ ಸುಲಭವಾಗುತ್ತದೆ ಎಂದು ಪ್ರಧಾನಿ ಸಮರ್ಥಿಸಿಕೊಂಡರು.
ಇಂದು ಹಲವು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡನ್ನು ನೀಡಲಾಗಿದೆ. ಆ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಹಿಂದೆ ಎಲ್ಲಾ ರೈತರಿಗೆ ಈ ಸೌಲಭ್ಯ ಸಿಗುತ್ತಿರಲಿಲ್ಲ. ನಾವು ನಿಯಮ ಸರಳಗೊಳಿಸಿ ದೇಶದ ಎಲ್ಲಾ ರೈತರಿಗೆ ಸಿಗುವಂತೆ ಮಾಡಿದ್ದೇವೆ ಎಂದರು.
Click this button or press Ctrl+G to toggle between Kannada and English