ಮಂಗಳೂರು : ದ.ಕ ಜಿಲ್ಲೆಯ 214.22 ಕೋಟಿ ರೂ. ವೆಚ್ಚದ 5 ಅಭಿವೃದ್ಧಿ ಕಾಮಗಾರಿಗಳಿಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವರ್ಚುವಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನಲ್ಲಿರುವ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ 69.02 ಕೋಟಿ ರೂ. ವೆಚ್ಚದ ನೂತನ ಷಟ್ಪಥ ಕೂಳೂರು ಸೇತುವೆ, ರಾಷ್ಟ್ರೀಯ ಹೆದ್ದಾರಿ 275ರಲ್ಲಿರುವ ಸಂಪಾಜೆ ಘಾಟ್ನ ತಡೆಗೋಡೆ ಹಾಗೂ ರಸ್ತೆ 2.53 ಕಿ.ಮೀ. ಕಾಮಗಾರಿಗೆ 58.84 ಕೋಟಿ ರೂ., ಶಿರಾಡಿ ಘಾಟ್ ಹೆದ್ದಾರಿ ಕಣಿವೆಯ 26 ಕಿ.ಮೀ. ಮಾರ್ಗಕ್ಕೆ 36.5 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ 169ರಲ್ಲಿರುವ 1.17 ಕಿ.ಮೀ. ಉದ್ದದ 39.42 ಕೋಟಿ ರೂ. ವೆಚ್ಚದ ಗುರುಪುರ ಸೇತುವೆ ನಿರ್ಮಾಣ, ಬಂಟ್ವಾಳ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿರುವ 39.11 ಕಿ.ಮೀ. ಉದ್ದದ ರಸ್ತೆಗೆ 30.50 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ನಿತಿನ್ ಗಡ್ಕರಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಗುರುಪುರ ನೂತನ ಸೇತುವೆಯ ಉದ್ಘಾಟನೆ ಸೇರಿ ದ.ಕ ಜಿಲ್ಲೆಯ ಒಟ್ಟು 214.22 ಕೋಟಿ ರೂ. ವೆಚ್ಚದ ಐದು ಕಾಮಗಾರಿಗಳಿಗೆ ಕೇಂದ್ರದಿಂದ ಚಾಲನೆ ದೊರಕಿದೆ ಎಂದರು.
ಮಂಗಳೂರಿನಲ್ಲಿ ನಿರಂತರವಾಗಿ ಚರ್ಚೆಯಲ್ಲಿದ್ದ ಎರಡು ಯೋಜನೆಗಳಾದ ಬಿ.ಸಿ. ರೋಡ್ – ಅಡ್ಡಹೊಳೆ ರಸ್ತೆ ಹಾಗೂ ಕುಲಶೇಖರ – ಕಾರ್ಕಳ ಹೆದ್ದಾರಿ ಯೋಜನೆಗಳಿಗೆ ಮೂರು ತಿಂಗಳಿನಲ್ಲಿ ಟೆಂಡರ್ ಪೂರ್ತಿಗೊಳಿಸಿ ಕಾಮಗಾರಿ ಆರಂಭಿಸುವ ಭರವಸೆ ದೊರಕಿದೆ ಎಂದು ಹೇಳಿದರು.
Click this button or press Ctrl+G to toggle between Kannada and English