ಮಂಗಳೂರು: ಮಲ್ಲಿಕಟ್ಟೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು 9 ವರ್ಷದ ಬಾಲಕನ ಸಹಿತ ಕಾರನ್ನು ಸಂಚಾರ ಪೊಲೀಸರು ಟೋಯಿಂಗ್ ಮಾಡಿ ಠಾಣೆಗೆ ಎಳೆದೊಯ್ದ ಘಟನೆ ಗುರುವಾರ ನಡೆದಿದೆ.
ಕಾರನ್ನು ವಸತಿ ಸಮುಚ್ಚಯವೊಂದರ ಪಕ್ಕದಲ್ಲಿ ನಿಲ್ಲಿಸಿ ಮಿಜಾರಿನ ದಿವ್ಯಾ ಮತ್ತು ಅವರ ಓರ್ವ ಮಗ ಅಂಗಡಿಗೆ ತೆರಳಿದ್ದರು. ಚಾಲಕ ಮತ್ತು ದಿವ್ಯಾ ಅವರ ಕಿರಿಯ ಪುತ್ರ, ನಾಲ್ಕನೇ ತರಗತಿ ವಿದ್ಯಾರ್ಥಿ ಪ್ರಖ್ಯಾತ್ ಕಾರಿನಲ್ಲೇ ಇದ್ದ. ದಿವ್ಯಾ ಅವರು ಮೊಬೈಲನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದನ್ನು ಗಮನಿಸಿದ ಚಾಲಕ ಅದನ್ನು ದಿವ್ಯಾರಿಗೆ ನೀಡಲೆಂದು ತೆರಳಿದ್ದಾಗ ಪೊಲೀಸರು ಮಗುವಿನ ಸಹಿತ ಕ್ಷಣಮಾತ್ರದಲ್ಲಿ ಕಾರನ್ನು ಟೋಯಿಂಗ್ ಮಾಡಿದ್ದರು ಎನ್ನಲಾಗಿದೆ.
ಗಾಬರಿಗೊಂಡ ಚಾಲಕ ಮತ್ತು ದಿವ್ಯಾ ಹಲವೆಡೆ ಮಗುವಿಗಾಗಿ ಹುಡುಕಾಡಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಕದ್ರಿ ಪೊಲೀಸರು ಟೋಯಿಂಗ್ ಮಾಡಿರುವುದು ಗೊತ್ತಾಯಿತು. ಪೊಲೀಸರ ವರ್ತನೆಗೆ ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.
ಉಜಿರೆಯಲ್ಲಿ ಇತ್ತೀಚೆಗೆ ನಡೆದ ಬಾಲಕನ ಅಪಹರಣ ಪ್ರಕರಣದ ಬಗ್ಗೆ ನನ್ನ ಮಕ್ಕಳಿಗೆ ಹೇಳಿದ್ದೆ. ಅಪರಿಚಿತರು ಬಂದರೆ ಹೇಗಿರಬೇಕು ಎಂದು ತಿಳಿಸಿದ್ದೆ. ಅದರಂತೆಯೇ ನನ್ನ ಮಗ ಕಾರಿನ ಬಾಗಿಲು ತೆರೆಯಲಿಲ್ಲ. ನಾವು ಕೂಡ ಭಯಭೀತರಾದೆವು. ಪೊಲೀಸರು ಅವರಿಗೆ ಖುಷಿ ಬಂದಂತೆ ಮಾಡುತ್ತಿದ್ದಾರೆ. ದಂಡ ಪಾವತಿಸಲು ಹೇಳಿದ್ದಾರೆ. ಆದರೆ ನಾನು ದಂಡ ಕಟ್ಟಲು ನಿರಾಕರಿಸಿದ್ದೇನೆ ಎಂದು ದಿವ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English