ಮಂಗಳೂರು: ಕಳೆನಾಶಕವನ್ನು ಸೇವಿಸಿ ಗ್ರಾಪಂ ಸದಸ್ಯ ಹಾಗೂ ಹಾಲಿ ಅಭ್ಯರ್ಥಿಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದಲ್ಲಿ ನಡೆದಿದೆ.
ಕಾವಳಮುಡೂರು ಗ್ರಾಮದ ಅರ್ಗತ್ಯಾರು ನಿವಾಸಿ ಜಯಂತ ಪ್ರಭು (58) ಮೃತ ವ್ಯಕ್ತಿ.
ಡಿ. 21ರಂದು ರಾತ್ರಿ 11 ಗಂಟೆಯ ವೇಳೆ ಬಾಯಿ ಹುಣ್ಣಿಗೆಂದು ತೆಗೆದುಕೊಳ್ಳುತ್ತಿದ್ದ ಔಷಧದ ಬದಲಾಗಿ ಖಾಲಿಯಾಗಿದ್ದ ಔಷಧ ಬಾಟಲಿಯಲ್ಲಿ ಶೇಖರಿಸಿಟ್ಟಿದ್ದ ಟ್ರೈಕಾಟ್ ಎಂಬ ಹುಲ್ಲಿಗೆ ಸಿಂಪಡಣೆ ಮಾಡುವ ಕಳೆನಾಶಕ ಸೇವಿಸಿದ್ದರು. ಮರುದಿನ ಗ್ರಾಪಂ ಚುನಾವಣೆಯಲ್ಲಿ ಮತದಾನ ಮಾಡಿದ್ದರಲ್ಲದೆ ಮತಗಟ್ಟೆಯಲ್ಲೂ ಒಂದಷ್ಟು ಹೊತ್ತು ಕಳೆದು ಕೊನೆ ಕ್ಷಣ ಮತದಾರನ ಮನವೊಲಿಸುವಲ್ಲಿಯೂ ತೊಡಗಿದ್ದರು.
ರಾತ್ರಿ ವೇಳೆಗೆ ದಿಢೀರ್ ಅಸ್ವಸ್ಥಗೊಂಡ ಅವರನ್ನು, ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಅವರ ಪುತ್ರ ನೀಡಿರುವ ದೂರಿನಂತೆ ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಜಯಂತ ಪ್ರಭು ಅವರು ಡಿ. 22ರಂದು ನಡೆದ ಗ್ರಾಪಂ ಚುನಾವಣೆಗೆ ಕಾವಳಮೂಡೂರು ಪಂಚಾಯತ್ನ ವಾರ್ಡ್ ಸಂಖ್ಯೆ 3ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದರು. ಈ ಹಿಂದೆ ಎರಡು ಬಾರಿ ಸದಸ್ಯರಾಗಿದ್ದ ಜಯಂತ ಪ್ರಭು, ಒಂದು ಬಾರಿ ಗ್ರಾಪಂ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಇವರು ಸಾಮಾಜಿಕ, ಧಾರ್ಮಿಕ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ನೆಲ್ಲಿಗುಡ್ಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿದ್ದರು.
ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಜಿ.ಪಂ. ಸದಸ್ಯ ಬಿ.ಪದ್ಮಶೇಖರ ಜೈನ್ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.
Click this button or press Ctrl+G to toggle between Kannada and English