ವಸ್ತು ನಿಷ್ಠ, ಮೌಲ್ಯಯುತ ವರದಿಗೆ ಆದ್ಯತೆ ಅಗತ್ಯ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

2:10 PM, Saturday, January 2nd, 2021
Share
1 Star2 Stars3 Stars4 Stars5 Stars
(No Ratings Yet)
Loading...

PaGo Awardಮಂಗಳೂರು: ಕಟ್ ಆ್ಯಂಡ್ ಫೇಸ್ಟ್ ಸುದ್ದಿಯ ಬದಲು ವಸ್ತು ನಿಷ್ಠ ಮೌಲ್ಯಯುತ ಜತೆಗೆ ವಿಮರ್ಶೆಯಿಂದ ಕೂಡಿದ ಪತ್ರಿಕಾ ವರದಿಗಳು ಜನಪರ ಆಡಳಿತ ನಡೆಸಲು ಪೂರಕವಾಗುತ್ತವೆ ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.

ಗುರುವಾರ ನಗರದ ಪತ್ರಿಕಾಭವನದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜರುಗಿದ 2019ನೇ ಸಾಲಿನ ಪ.ಗೋ.(ಪದ್ಯಾಣ ಗೋಪಾಲಕೃಷ್ಣ) ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಲಾಖೆಯಲ್ಲಿ ವರ್ಷಕ್ಕೆ ಒಂದು ಬಾರಿ ಅಡಿಟ್ ನಡೆಯುವ ಮೂಲಕ ಪಾರದರ್ಶಕತೆಯನ್ನು ಹೆಚ್ಚು ಮಾಡುವಂತೆ ದೈನಂದಿನ ವಿಚಾರಗಳಲ್ಲಿ ನಡೆಯುವ ಸರಿ ತಪ್ಪುಗಳನ್ನು ಪ್ರತಿನಿತ್ಯದ ಪತ್ರಿಕೋದ್ಯಮದ ವರದಿಗಳು ಸರಕಾರದ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿದೆಯೇ, ಜನರ ಭಾವನೆ ಹೇಗಿದೆ, ಆಡಳಿತ ವರ್ಗ ಯಾವ ರೀತಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿದುಕೊಳ್ಳಲು ವಿಮರ್ಶಾತ್ಮಕ ವರದಿಗಳು ಸಹಕಾರಿಯಾಗುತ್ತವೆ. ಜನರು ಮಾಧ್ಯಮಗಳ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗಲು ವಸ್ತುನಿಷ್ಠ ವರದಿಗಳ ಅಗತ್ಯವಿದೆ ಎಂದು ಡಾ.ರಾಜೇಂದ್ರ ಕೆ.ವಿ. ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದ.ಕ.ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಾಧ್ಯಮ ಮತ್ತು ಪೊಲೀಸ್ ಇಲಾಖೆಯ ನಡುವಿನ ಸಂಪರ್ಕ ಉತ್ತಮ ರೀತಿಯಲ್ಲಿದೆ. ಪೊಲೀಸರ ಬಗ್ಗೆ ಜನರಿಗೆ ಇರುವ ಭಯದ ವಾತಾವರಣ ಹೋಗಲಾಡಿಸಲು ಇಂತಹ ಸಂವಹನ ಅಗತ್ಯ. ಅಲ್ಲದೆ ಪಾರದರ್ಶಕ ಕಾರ್ಯನಿರ್ವಹಣೆಗೆ ಉತ್ತಮ ಸಂಪರ್ಕ ಅವಶ್ಯ. ಸಮಾಜ ಮತ್ತು ಪೊಲೀಸರ ನಡುವಿನ ಸಂಪರ್ಕಕೊಂಡಿಯಾಗಿಯೂ ಜಿಲ್ಲೆಯ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ ಎಂದರು.

ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ವಿನಯ್ ಗಾಂವ್ಕರ್ ಮಾತನಾಡಿ, ಪೊಲೀಸ್ ಮತ್ತು ಮಾಧ್ಯಮ ಜತೆಯಾಗಿ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ವಾತಾವರಣ ಮೂಡಲು ಸಾಧ್ಯ. ಪತ್ರಕರ್ತರು ತಾವು ಮಾಡುವ ವರದಿಯ ಮೂಲಕ ಪೊಲೀಸರಿಗೆ ಮಾಹಿತಿದಾರನಾಗಿ ಕೂಡ ಕೆಲಸ ಮಾಡುತ್ತಾರೆ. ಪೊಲೀಸ್ ಇಲಾಖೆಯಿಂದ ಮಾಹಿತಿಯನ್ನು ಪಡೆದು ಅದನ್ನು ಜನರಿಗೆ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಈ ಸಾಲಿನ ಪ.ಗೋ. ಪ್ರಶಸ್ತಿ ವಿಜೇತರಾದ ವಿಜಯ ಕರ್ನಾಟಕ ಮಂಗಳೂರು ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಪಡು,ಕೊಡಗಿನ ಕಾವೇರಿ ಟೈಮ್ಸ್‌ನ ಬೊಳ್ಳಜಿರ ಬಿ. ಅಯ್ಯಪ್ಪ ಅವರು ಪ್ರಶಸ್ತಿ ಹಾಗೂ ತಮ್ಮ ಪತ್ರಿಕೋದ್ಯಮದ ಅನುಭವಗಳನ್ನು ಹಂಚಿಕೊಂಡರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಪತ್ರಕರ್ತ ಜಗನ್ನಾಥ್ ಶೆಟ್ಟಿ ಬಾಳ ಮತ್ತು ಎ.ಆರ್.ಕುಟ್ಟಪ್ಪ ಕೊಡಗು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕೆ.ಆನಂದ ಶೆಟ್ಟಿ, ಪದ್ಯಾಣ ಗೋಪಾಲ ಕೃಷ್ಣ ಅವರ ಸುಪುತ್ರ ವಿಶ್ವೇಶ್ವರ ಪದ್ಯಾಣ, ಉಪಸ್ಥಿತರಿದ್ದರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು.

ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯೆ ಡಾ.ಜಯಶ್ರೀ ಬಿ.ಕದ್ರಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಂಘದ ಖಜಾಂಚಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English