ಅಕ್ರಮವಾಗಿ 67 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ, ಇಬ್ಬರ ಬಂಧನ

12:01 AM, Thursday, January 7th, 2021
Share
1 Star2 Stars3 Stars4 Stars5 Stars
(No Ratings Yet)
Loading...

Gold ಮಂಗಳೂರು:  ಅಕ್ರಮವಾಗಿ 67 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ ನಡೆಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು (ಡಿಆರ್ಐ) ಪತ್ತೆ ಹಚ್ಚಿದ್ದಾರೆ.

ದುಬೈನಿಂದ ಮಂಗಳೂರಿಗೆ ನಿನ್ನೆ ಮಧ್ಯರಾತ್ರಿ 12.30ಕ್ಕೆ ಸ್ಪೈಸ್ ಜೆಟ್ ಎಸ್ಜಿ ‌146 ವಿಮಾನದಲ್ಲಿ ಆಗಮಿಸಿ, ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಭಟ್ಕಳ ಮೂಲದ ವ್ಯಕ್ತಿಯೋರ್ವನನ್ನು ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಈತ ಅಂಟುವ ಗುಳಿಗೆಯ ಒಳಗೆ ಚಿನ್ನವನ್ನು ಮರೆಮಾಚಿ ಅದನ್ನು ತನ್ನ ಗುಪ್ತಾಂಗದಲ್ಲಿರಿಸಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ‌. ಒಟ್ಟು ಐದು ಗುಳಿಗೆಗಳ ಒಳಗೆ 809 ಗ್ರಾಂ ತೂಕದ (ಹೊರ ತೆಗೆದ ಬಳಿಕ 641.410 ಗ್ರಾಂ) ಚಿನ್ನ ಸಾಗಾಟ ಮಾಡುತ್ತಿದ್ದನಂತೆ.

ಇದೇ ವಿಮಾನದಲ್ಲಿ ಕಾಸರಗೋಡು ಮೂಲದ ವ್ಯಕ್ತಿಯು 646. 670 ಗ್ರಾಂ ಚಿನ್ನವನ್ನು ವಿಶೇಷ ಚೀಲ ಹೊಂದಿರುವ ಒಳ ಉಡುಪಿನಲ್ಲಿ ಮರೆ ಮಾಚಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ.

ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ತೆಯಾಗಿರುವ ಚಿನ್ನ 999 ಪರಿಶುದ್ಧತೆ ಹೊಂದಿದೆ. ಬಂಧಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English