ಮೊಬೈಲ್ ಕಂಪೆನಿಗಳ ಹೆಸರಲ್ಲಿ ಬಹುಮಾನ ಬಂದಿದೆ ಎಂದು ಪಾಕ್ ಸಿಮ್ ಬಳಸಿ ವಂಚನೆ

11:35 PM, Wednesday, January 13th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

fraud callಮಂಗಳೂರು : ಮೊಬೈಲ್ ಕಂಪೆನಿಗಳ ಹೆಸರಲ್ಲಿ 25 ಲಕ್ಷ ರೂ ಬಹುಮಾನ ಬಂದಿದೆ ಎಂದು ಪಾಕ್ ಸಿಮ್ ಬಳಸಿ ಕಾರ್ಯಾಚರಿಸುತ್ತಿರುವ ಜಾಲವೊಂದು ಸಕ್ರಿಯವಾಗಿದೆ

ಕೌನ್‌ ಬನೇಗಾ ಕರೋಡ್‌ಪತಿ(ಕೆಬಿಸಿ) ಹೆಸರಲ್ಲಿ ಅದರ ಕೆಲವು ಕ್ಲಿಪ್ ಗಳನ್ನು ಉಪಯೋಗಿಸುವ ಮೂಲಕ ವಂಚನೆ ಮಾಡುತ್ತಿರುವ ಜಾಲವೊಂದು ಅಮಾಯಕ ಜನರ ಹಣ ದೋಚಲು ಹೊಂಚು ಹಾಕುತ್ತಿದೆ.

ಮಂಗಳೂರಿನ ಸರ್ಕಾರಿ ನೌಕರರೊಬ್ಬರು ಇಂಥದ್ದೊಂದು ಜಾಲದ ಸುಳಿಗೆ ಸಿಲುಕಿ ಸಾವಿರಾರು ಕಳೆದುಕೊಂಡಿದ್ದಾರೆ. ಪಾಕಿಸ್ತಾನದ ಮೂಲದ್ದೂ ಎನ್ನಲಾದ ಅನಾಮಿಕ ಕರೆ(+923059296144)ಯೊಂದು ಇವರನ್ನು ವಂಚನೆಯ ಖೆಡ್ಡಾಕ್ಕೆ ಬೀಳಿಸಿದೆ.

ಮಂಗಳೂರಿನ ಈ ಸಿಬ್ಬಂದಿ ಮೊಬೈಲ್‌ಗೆ ಜ.6ರಂದು ಮಧ್ಯಾಹ್ನದ ವೇಳೆಗೆ ವಾಟ್ಸಾಪ್‌ ಕರೆ ಬಂದಿದೆ. ಇವರ ಪುತ್ರ ಕರೆ ಸ್ವೀಕರಿಸಿದಾಗ ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿ ಏರ್‌ಟೆಲ್‌ ಸ್ಪರ್ಧೆಯಲ್ಲಿ ನಿಮ್ಮ ಸಿಮ್‌ ಗೆದ್ದಿದ್ದು, 25 ಲಕ್ಷ ಬಹುಮಾನ ಸಿಗಲಿದೆ. ನಗದು ಪಾವತಿಸಬೇಕಾದರೆ ತಕ್ಷಣ ನಿಗದಿತ ಮೊತ್ತ ಪಾವತಿಸುವಂತೆ ಅವಸರ ಮಾಡಿದ್ದರು. ಇವರನ್ನು ನಂಬಿಸಲು ಭಾರತ ಸರ್ಕಾರದ ಮೊಹರು, ರಾಷ್ಟ್ರಧ್ವಜ, ಸಂಸತ್‌ಭವನ, ಪ್ರಧಾನಿಯೂ ಒಳಗೊಂಡಂತೆ ಇರುವ, ಮೇಲ್ನೋಟಕ್ಕೆ ಅಸಲಿಯಂತೆ ಕಾಣುವ ಪತ್ರವನ್ನು ಕಳುಹಿಸಿದ್ದರು. ನಗದು ಮೊತ್ತವನ್ನು ಪಂಜಾಬ್‌ನ ರಾಣಾ ಪ್ರತಾಪ್‌ ಎಂಬವರ ಹೆಸರಿಗೆ ಪಾವತಿಸುವಂತೆ ಸೂಚಿಸಿದ್ದರು.

ಸತ್ಯ ಇರಬಹುದೆಂದು ನಂಬಿ ವಂಚಕರು ನೀಡಿದ ಮೊಬೈಲ್‌ ನಂಬರಿಗೆ 8,200 ಫೋನ್‌ ಪೇ ಮಾಡಿದ್ದರು. ಬಳಿಕ ಬ್ಯಾಂಕ್‌ ಖಾತೆಯ ಪಾಸ್‌ವರ್ಡ್‌ ತೆರೆಯಲು 25 ಸಾವಿರ ಪೀಕಿಸಿದ್ದರು. ಅದೂ ಸಾಲದು ಎಂಬಂತೆ 25 ಲಕ್ಷ ಬಹುಮಾನ ಮೊತ್ತ ನೀಡಬೇಕಾದರೆ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಿ ಮತ್ತೊಮ್ಮೆ 45 ಸಾವಿರ ಕಬಳಿಸಿದ್ದಾರೆ.

ನಂತರ ಈ ಸಿಬ್ಬಂದಿ ಹೆಸರಿನಲ್ಲಿ 25 ಲಕ್ಷ ಮೊತ್ತಕ್ಕೆ ನಕಲಿ ಚೆಕ್‌ ಹಾಳೆ ಮುದ್ರಿಸಿ ಅದನ್ನು ಸ್ಕ್ಯಾನ್ ಮಾಡಿ ಕಳುಹಿಸಿದ್ದರು. ಇದು ನಗದೀಕರಣವಾಗಬೇಕಾದರೆ ಹಳೆ ಸಿಮ್‌ ಕಾರ್ಡ್‌ನ ನಂಬರು ಕೊಡಿ, ಇಲ್ಲವೇ 75 ಸಾವಿರ ಕೂಡಲೇ ಪಾವತಿಸುವಂತೆ ಹೇಳಿದ್ದರು. ಆಗಲೇ ಮೂರು ಕಂತಿನಲ್ಲಿ ಒಟ್ಟು 78,200 ಮೊತ್ತ ಪಾವತಿಸಲಾಗಿತ್ತು. ಇದು ವಂಚನಾ ಜಾಲ ಎಂದು ಗೊತ್ತಾದ ಬಳಿಕ ಆ ನಂಬರಿಗೆ ಕರೆ ಮಾಡಿದರೆ, ಪಾವತಿಸಿದ ಮೊತ್ತ ವಾಪಸ್‌ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೀಗ ಸಂತ್ರಸ್ತರು ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English