ರಾಜ್ಯ ಸರಕಾರಕ್ಕೆ ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದುಪಡಿಸುವ ಅಧಿಕಾರವಿಲ್ಲ : ಯು.ಟಿ ಖಾದರ್

8:03 PM, Thursday, January 14th, 2021
Share
1 Star2 Stars3 Stars4 Stars5 Stars
(No Ratings Yet)
Loading...

ut Khader ಮಂಗಳೂರು : ಸುಳ್ಯ ಶಾಸಕ ಎಸ್. ಅಂಗಾರ ಸಚಿವರಾಗಿರುವುದು ಸಂತೋಷದ ವಿಷಯ. ಕೋಟ ಶ್ರೀನಿವಾಸ ಪೂಜಾರಿ ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅವರನ್ನೇ ಉಸ್ತುವಾರಿ ಸಚಿವರನ್ನಾಗಿ ಮುಂದುವರಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಅವರನ್ನು ಉಡುಪಿಯ ಬದಲು ದ.ಕ. ಜಿಲ್ಲೆಗೆ ಉಸ್ತುವಾರಿಯನ್ನಾಗಿ ಮಾಡಿರುವುದರ ಉದ್ದೇಶವೇನು ಎಂಬುದನ್ನು ಸರಕಾರ ಸ್ಪಷ್ಟಪಡಿಸಲಿ ಎಂದು ಶಾಸಕ ಯು.ಟಿ  ಖಾದರ್  ಪ್ರಶ್ನಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ಸುನೀಲ್ ಕುಮಾರ್ ಕೂಡಾ ‘ನನಗೆ ಪಕ್ಷ ನಿಷ್ಠೆ ಗೊತ್ತು, ಬ್ಲಾಕ್ ಮೇಲ್ ಗೊತ್ತಿಲ್ಲ’ ಹೇಳುತ್ತಾರೆ. ಇದರರ್ಥ ಏನು?, ಅಂದರೆ ಬ್ಲಾಕ್ ಮೇಲ್  ಮಾಡಿದವರಿಗೆ ಸಚಿವ ಸ್ಥಾನ ಸಿಕ್ಕುತ್ತದೆ ಎಂದು ಅವರು ಪರೋಕ್ಷವಾಗಿ ಹೇಳುತ್ತಿದ್ದಾರೆ ಎಂದರು.

ಶಾಸಕ ಬಸವನಗೌಡ ಯತ್ನಾಳ್‌ರ ಸಿ.ಡಿ ಬಾಂಬ್ ಆರೋಪಕ್ಕೆ ಪ್ರತಿಕ್ರಿಯಿಸಿದ ಖಾದರ್, ಎಲ್ಲ ವಿಚಾರಗಳನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಹೇಳಿದರು.

ಪಂಚಾಯತ್ ರಾಜ್ ಕಾಯ್ದೆಯ 73ನೇ ತಿದ್ದುಪಡಿ ವಿಷಯದಲ್ಲಿ ಮಾತನಾಡಿದ ಖಾದರ್, ತ್ರಿಸ್ತರ ಪದ್ಧತಿಯಲ್ಲಿ ರಾಜ್ಯ ಸರಕಾರಕ್ಕೆ ತಾಪಂ ವ್ಯವಸ್ಥೆಯನ್ನು ರದ್ದು ಮಾಡುವ ಅಧಿಕಾರವಿಲ್ಲ ಎಂದು  ಹೇಳಿದ್ದಾರೆ.

ಸರಕಾರವು ಪಂಚಾಯತ್ ರಾಜ್ ತಜ್ಞರ ಜತೆ ಚರ್ಚಿಸದೆ, ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಾಪಂ ವ್ಯವಸ್ಥೆಯನ್ನು ರದ್ದು ಮಾಡುವ ಬಗ್ಗೆ ಹೇಳಿಕೆ ನೀಡುತ್ತಿರುವುದು ಖಂಡನೀಯ. ಸರಕಾರಕ್ಕೆ ತ್ರಿಸ್ತರ ಪದ್ಧತಿ ವಿರುದ್ಧ ಹೋಗಲು ಸಾಧ್ಯವೇ? ಇದು ಅಸಾಂವಿಧಾನಿಕವಲ್ಲವೇ? ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು ರಾಜ್ಯದ ಜನತೆಗೆ ಸ್ಪಷ್ಟ ಉತ್ತರ ನೀಡಬೇಕು ಎಂದರು,

ತಾಪಂ ವ್ಯವಸ್ಥೆಯಡಿ 29 ಇಲಾಖೆಗಳು ಬರುತ್ತಿದ್ದು, ಅದರ ಬಗ್ಗೆ ನಿಗಾ ಇಡುವವರು ಯಾರು? ಎಲ್ಲವನ್ನೂ ಜಿಪಂ, ಶಾಸಕರು ನೋಡಲಿಕ್ಕೆ ಆಗುತ್ತದೆಯೇ? ಆಯಾಯ ತಾಲೂಕು ಮಟ್ಟದಲ್ಲಿ ಅಭಿವೃದ್ಧಿ ಮೇಲ್ವಿಚಾರಣೆಗೆ ತಾಪಂ ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ತಾಪಂ ರದ್ದುಪಡಿಸಬಾರದು. ಒಂದು ವೇಳೆ ತಾಪಂಗೆ ಅನುದಾನ ಕಡಿಮೆಯಿದ್ದರೆ ರಾಜ್ಯ ಸರಕಾರ ಅದರ ಮೊತ್ತ ಅಧಿಕಗೊಳಿಸಿ ಬಲಪಡಿಸಲಿ ಎಂದು ಖಾದರ್ ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English