ಧಾರವಾಡ : ದಾವಣಗೆರೆಯಿಂದ ಮುಂಜಾನೆ ಮೂರು ಗಂಟೆಗೆ ಹೊರಟಿದ್ದ ಮಿನಿಬಸ್ ಧಾರವಾಡ ಸಮೀಪ ಟಿಪ್ಪರ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ 6 ಜನ ಸಾವನ್ನಪ್ಪಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಐದು ಮಂದಿ ಅಸುನೀಗಿದರು. ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ದಾವಣಗೆರೆಯ ವಿದ್ಯಾನಗರ, ಎಂಸಿಸಿ ಎ ಬ್ಲಾಕ್ ಮತ್ತು ಎಂಸಿಸಿ ಬಿ ಬ್ಲಾಕ್ ನಿವಾಸಿಯ ಕೆಲ ಮಹಿಳೆಯರು ಒಂದೆಡೆ ಸೇರಿ ಎಂಜಾಯ್ ಮಾಡಲು ಗೋವಾದ ಪಣಜಿಗೆ ಖಾಸಗಿ ಮಿನಿ ಬಸ್ವೊಂದನ್ನು ಬುಕ್ ಮಾಡಿ ಪ್ರವಾಸ ಕೈಗೊಂಡಿದ್ದರು.
ಇಂದು ಬೆಳಗ್ಗೆ ಸರಿಸುಮಾರು 3 ಗಂಟೆ ಆಸು – ಪಾಸು ದಾವಣಗೆರೆಯಿಂದ ಹೊರಟು ಬೆಳಗಿನ ಜಾವ ಹಾವೇರಿ, ಹುಬ್ಬಳ್ಳಿ ಮೂಲಕ ಧಾರವಾಡಕ್ಕೆ ಸಮೀಪಿಸುತ್ತಿದ್ದಂತೆ 6.30ರಿಂದ 7 ಗಂಟೆಯ ಸುಮಾರಿಗೆ ಮಿನಿ ಬಸ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತು.
ಮಾಜಿ ಶಾಸಕ ಗುರುಸಿದ್ದನಗೌಡರ ಸೊಸೆ, ಆರೈಕೆ ಆಸ್ಪತ್ರೆಯ ಡಾ. ರವಿಕುಮಾರ್ ಅವರ ಪತ್ನಿ ಪ್ರೀತಿ ರವಿಕುಮಾರ್, ಸ್ತ್ರೀರೋಗ ತಜ್ಞೆ ಡಾ. ವೀಣಾ ಪ್ರಕಾಶ್ ಸೇರಿ ಒಟ್ಟು 16 ಮಹಿಳೆಯರು ಪಣಜಿಗೆ ಹೊರಟಿದ್ದರು. ಬಸ್ನಲ್ಲಿ ಕ್ಲೀನರ್ ಮತ್ತು ಡ್ರೈವರ್ ಸೇರಿದಂತೆ ಒಟ್ಟು 18 ಮಂದಿ ಪ್ರಯಾಣ ಬೆಳೆಸುತ್ತಿದ್ದರು.
ಡಿಕ್ಕಿ ರಭಸಕ್ಕೆ ಎರಡು ವಾಹನಗಳೂ ಸಂಪೂರ್ಣವಾಗಿ ಜಖಂಗೊಂಡಿವೆ. ಕ್ರೇನ್ ಸಹಾಯದಿಂದ ಮಗುಚಿ ಬಿದ್ದಿದ್ದ ವಾಹನವನ್ನು ಎತ್ತಿ ಮೃತದೇಹಗಳನ್ನು ಹೊರತೆಗೆಯಲಾಗಿತ್ತು.
ಗಾಯಗೊಂಡ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ.
ಪ್ರವಾಸಕ್ಕೆ ಹೊರಡುವ ಸಂದರ್ಭ ದಾವಣಗೆರೆಯಲ್ಲಿ ತೆಗೆದುಕೊಂಡ ಸೆಲ್ಫಿ ಈಗ ಎಲ್ಲಡೆ ಹರಿದಾಡುತ್ತಿದೆ. ಆದರೆ ಆ ಖುಷಿ ಕೆಲವೇ ಕ್ಷಣಗಳಲ್ಲಿ ಇಲ್ಲವಾಗಿದೆ. ಪ್ರವಾಸಕ್ಕೆಂದು ಹೊರಟವರು ಸಾವಿನ ಮನೆ ಸೇರುವಂತಾಗಿದೆ.
ಮೃತಪಟ್ಟವರನ್ನು ಪ್ರವೀಣ್, ಆಶಾ, ಮೀರಾಬಾಯಿ, ಪರಂಜ್ಯೋತಿ, ರಾಜೇಶ್ವರಿ, ಶಕುಂತಲಾ, ಉಷಾ, ವೇದಾ, ವೀಣಾ, ಮಂಜುಳಾ, ನಿರ್ಮಲಾ, ರಜನೀಶಿ, ಪ್ರೀತಿ ಎಂದು ಗುರುತಿಸಲಾಗಿದೆ. ಚಾಲಕನ ಹೆಸರು ತಿಳಿದು ಬಂದಿಲ್ಲ.
ಮೃತರೆಲ್ಲರೂ ದಾವಣಗೆರೆ ಮೂಲದವರಾಗಿದ್ದು, 16 ಮಹಿಳೆಯರು ಲೇಡಿಸ್ ಕ್ಲಬ್‌ನಿಂದ ಸಂತೋಷ ಕೂಟಕ್ಕಾಗಿ ಗೋವಾಕ್ಕೆ ಹೊರಟಿದ್ದರು ಎಂದು ಗಾಯಗೊಂಡವರ ಪೈಕಿ ಮಹಿಳೆಯೊಬ್ಬರು ಹೇಳಿಕೆ ನೀಡಿದ್ದಾರೆ.
ಅಪಘಾತ ಸಂಭವಿಸಿ 11 ಮಹಿಳೆಯರು ಸಾವನ್ನಪ್ಪಿದ್ದ ಸುದ್ದಿ ತಿಳಿದ ಕುಟುಂಬಸ್ಥರು ಕಿಮ್ಸ್ ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಆಸ್ಪತ್ರೆ ಮುಂಭಾಗ ಮೃತರ ಸಂಬಂಧಿಕರು, ಪೋಷಕರ ರೋದನೆ ಮುಗಿಲು ಮುಟ್ಟಿದೆ.
ಪ್ರವಾಸಕ್ಕೆ ತೆರಳಿದವರೆಲ್ಲರೂ ಸೆಂಟ್ ಪೌಲ್ಸ್ ಶಾಲೆಯಲ್ಲಿ ಓದಿದವರಾಗಿದ್ದಾರೆ. ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಇವರು ಚಿಕ್ಕ ವಯಸ್ಸಿನಿಂದಲೇ ಸ್ನೇಹಿತರು. ಒಂದಿಲ್ಲ ಒಂದು ಕೆಲಸದಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಈ ಸಂಕ್ರಾಂತಿ ಹಬ್ಬಕ್ಕೆ ಗೋವಾ ಪ್ರವಾಸದ ಯೋಜನೆ ಹಾಕಿಕೊಂಡಿದ್ದರು. ಹೀಗಾಗಿ ಇಂದು ಬೆಳಗ್ಗೆ ಪ್ರವಾಸ ಕೈಗೊಂಡಿದ್ದರು.
ಈ ಅಪಘಾತ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English