ಗೋಣಿ ಚೀಲದಲ್ಲಿ ತುಂಬಿಸಿ ಬಾಲಕನ ಅಪಹರಣ ಯತ್ನ, ಪ್ರಾಂಕ್ ಮಾಡಿದ ಮೂವರ ಬಂಧನ

4:29 PM, Saturday, January 16th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Kidnap ಮಂಗಳೂರು : ಕೊಂಚಾಡಿಯ ವೆಂಕಟರಮಣ ಮಹಾಲಸಾ ದೇವಾಲಯದಿಂದ ವಾಪಸ್ಸಾಗುತ್ತಿದ್ದ ಬಾಲಕರನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಾವೂರಿನ ರಕ್ಷಕ್ ಶೆಟ್ಟಿ (22), ಬೊಂದೆಲ್‌ನ ಅಲಿಸ್ಟರ್ ತಾವ್ರೋ (21), ಕಾವೂರು ಕೈಒಸಿಎಲ್ ಕ್ವಾರ್ಟರ್ಸ್‌ನ ರಾಹುಲ್ ಸಿನ್ಹಾ (21) ಬಂಧಿತ ಆರೋಪಿಗಳು.

ಈ ಬಗ್ಗೆ ಮಾಹಿತಿ ನೀಡಿದ  ನಗರದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಜ.13ರಂದು ಸಂಜೆ 7 ಗಂಟೆ ಸುಮಾರಿಗೆ ನಾಲ್ವರು ಬಾಲಕರು ಕೊಂಚಾಡಿ ದೇವಸ್ಥಾನಕ್ಕೆ ಹೋಗಿ ಮರಳಿ ಮನೆಯತ್ತ ತೆರಳುತ್ತಿದ್ದರು. ಮೂವರು ಬಾಲಕರು ದೇವಳ ಪ್ರಾಂಗಣ ದಾಟಿ ಎದುರು ರಸ್ತೆಯಲ್ಲಿ ತೆರಳುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ರಸ್ತೆ ಬದಿ ನಿಂತಿದ್ದರು. ಆ ಪೈಕಿ ಓರ್ವ ಎದುರಿನಲ್ಲಿ ಹೋಗುತ್ತಿದ್ದ ಬಾಲಕನಿಗೆ ಗೋಣಿ ಚೀಲ ಮುಸುಕು ಹಾಕಲು ಯತ್ನಿಸಿದ್ದಾನೆ. ಬಾಲಕ ಆತನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದನು. ಬಳಿಕ ದುಷ್ಕರ್ಮಿಯು ಕೂಡಲೇ ಇನ್ನೊಬ್ಬ ಬಾಲಕನಿಗೆ ಮುಸುಕು ಹಾಕಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಹಿಂದಿನಿಂದ ಬರುತ್ತಿದ್ದ ಮತ್ತೋರ್ವ ಬಾಲಕ ಅಪಹರಣಕಾರರತ್ತ ಕಲ್ಲು ಹೆಕ್ಕಿ ಎಸೆದ್ದಾನೆ. ಅಷ್ಟರಲ್ಲಿ ಅಪಾಯ ಅರಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು ಎಂದರು.

ಆರೋಪಿಗಳು  ‘ಪ್ರಾಂಕ್’ ಮಾಡಲು ಬಾಲಕರ ಅಪಹರಣ ಯತ್ನ ನಡೆಸಿದೆವು ಎಂದು ಹೇಳಿಕೊಂಡಿದ್ದಾರೆ. ಆದರೆ ಪೊಲೀಸರ ಹಲವು ಪ್ರಶ್ನೆಗಳಿಗೆ ಅವರು ಇಲ್ಲಿಯವರೆಗೂ ಸಮರ್ಪಕ ಉತ್ತರ ನೀಡಿಲ್ಲ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ ಎಂದರು.

ಬಾಲಕರ ಅಪಹರಣ ಯತ್ನ ಪ್ರಕರಣದಲ್ಲಿನ ಬಂಧಿತರಿಗೆ ಅಪರಾಧದ ಹಿನ್ನೆಲೆ ಇದೆ. ರಕ್ಷಕ್ ಶೆಟ್ಟಿ ವಿರುದ್ಧ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಹಲವು ಪ್ರಕರಣಗಳಿವೆ. ಇನ್ನೋರ್ವ ಆರೋಪಿ ಅಲಿಸ್ಟರ್ ತಾವ್ರೋ ವಿರುದ್ಧ ಕಾವೂರು ಠಾಣೆಯಲ್ಲಿ ಮೂರು ಎನ್‌ಡಿಪಿಎಸ್ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರನೇ ಆರೋಪಿ ರಾಹುಲ್ ವಿರುದ್ಧವೂ ಕಾವೂರು ಠಾಣೆಯಲ್ಲಿ ಕೇಸು ಇದೆ. ಎಲ್ಲ ಆರೋಪಿಗಳಿಗೆ ಗಾಂಜಾ ಜಾಲದ ನಂಟಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅಪರಾಧದ ಹಿನ್ನೆಲೆಯೂ ಇದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳು ಯೂಟ್ಯೂಬರ್ಸ್ ಎಂದು ಹೇಳಿಕೊಂಡಿದ್ದು  ‘ಪ್ರಾಂಕ್’ ಮಾಡಲು ಈ ರೀತಿ ಮಾಡಿದ್ದಾಗಿ ಹೇಳಿದ್ದಾರೆ ಎಂದು ಹೇಳಿದರು.

ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪ್ರಾಂಕ್ ಮಾಡುವುದು ಅಪರಾಧವಾಗಿದೆ. ಪ್ರಾಂಕ್ ಮಾಡುವ ಸಂದರ್ಭ ಮಕ್ಕಳು ಹೆದರಿ ಏನಾದರೂ ಅನಾಹುತ ಸಂಭವಿಸಿದರೆ ಯಾರೂ ಜವಾಬ್ದಾರಿ ಎಂದು ಪ್ರಶ್ನಿಸಿದ ಪೊಲೀಸ್ ಆಯುಕ್ತರು, ಪ್ರಾಂಕ್ ಮಾಡುವಾಗ ಸ್ನೇಹಿತರೇ ಕೂಡಿಕೊಂಡು ಮಾಡಿದ್ದಲ್ಲಿ ಸಮಸ್ಯೆ ಬರುವುದಿಲ್ಲ; ಆದರೆ ಸಾರ್ವಜನಿಕರನ್ನು ಬಳಸಿಕೊಳ್ಳುವುದು ಅಕ್ಷಮ್ಯ. ಮುಂದೆಯೂ ಇಂತಹ ಘಟನೆ ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English