ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ-ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ 2020 ಪ್ರದಾನ

9:48 PM, Sunday, January 24th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

kt Venugopala awardಮುಂಬಯಿ : ಪತ್ರಿಕಾವೃತ್ತಿ ಸಮಾಜದ ಸಮಸ್ಯೆ ಸವಾಲುಗಳ ಪರಿಹಾರಕ್ಕೆ ಸಂಜೀವಿನಿ ಆಗಿದೆ. ಆದ್ದರಿಂದ ಜರ್ನಲಿಸಂ ಎಂಬುದು ಸಮಾಜಕ್ಕೆ ಅತ್ಯಗತ್ಯ ಜೀವಸೆಲೆ ಎಂಬುದನ್ನು ಸರ್ವರೂ ಮನಗಂಡು ಪತ್ರಕರ್ತರ ಭಾವನೆಗಳಿಗೆ ಸ್ಪಂದಿಸುವ ಅಗತ್ಯವಿದೆ. ಸಮಾಜವನ್ನು ಹತೋಟಿಯಲ್ಲಿಡುವ ಶಕ್ತಿ ಪತ್ರಿಕೋದ್ಯಕ್ಕಿದ್ದು, ಇಂತಹ ಬೆಳವಣಿಗೆಗಳ ಸವಾಲುಗಳಿಗೆ ಗುಣಮಟ್ಟದ ಜರ್ನಲಿಸಂನಿಂದ ಮಾತ್ರ ಪರಿಹಾರ ಸಾಧ್ಯ. ಆದ್ದರಿಂದ ನಿಷ್ಠಾವಂತ ಪತ್ರಕರ್ತರ ವೃತ್ತಿನಿಷ್ಠೆಯನ್ನು ತಿದ್ದುವ ಕಾಯಕಕ್ಕೆ ಹೋಗದೆ ಪತ್ರಕರ್ತರನ್ನು ಪ್ರೋತ್ಸಹಿಸುವ ಪ್ರಯತ್ನ ಮಾಡಬೇಕು ಎಂದು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ತಿಳಿಸಿದರು.

ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿನ ಎಂವಿಎಂ ಶ್ರೀಮತಿ ಶಾಲಿನಿ ಜಿ.ಶಂಕರ್ ಸಭಾಗೃಹದಲ್ಲಿ ಇಂದಿಲ್ಲಿ ಭಾನುವಾರ ಪೂರ್ವಾಹ್ನ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಪ್ರದಾನಿಸಿದ ಸಂಘದ ದ್ವಿತೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನಿಸಿ ಗೋಪಾಲ ಶೆಟ್ಟಿ ಮಾತನಾಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೆ.ಎಲ್ ಬಂಗೇರ ಅತಿಥಿ ಅಭ್ಯಾಗತರಾಗಿದ್ದು, ಸಂಘದ ಸಲಹಾ ಸಮಿತಿ ಸದಸ್ಯೆಯೂ, ಪ್ರಶಸ್ತಿ ಆಯ್ಕೆ ಸಮಿತಿ ಕಾರ್ಯಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ ಉಪಸ್ಥಿತರಿದ್ದು ಪತ್ರಕರ್ತರ ಸಂಘ ಕೊಡಮಾಡುವ ಕೆ.ಟಿ ಸುಪುತ್ರ ವಿಕಾಸ್ ವೇಣುಗೋಪಾಲ್ (ಸ್ವರ್ಗೀಯ ತುಳಸೀ ವೇಣುಗೋಪಾಲ್) ಕುಟುಂಬದ ಪ್ರಧಾನ ಪ್ರಾಯೋಜಕತ್ವದ, ತಲಾ ರೂಪಾಯಿ 25,000/-ನಗದು, ಪುರಸ್ಕಾರ ಫಲಕ ಮತ್ತು ಪ್ರಶಸ್ತಿಪತ್ರ ಹೊಂದಿರುವ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-೨೦೨೦ ಪ್ರಶಸ್ತಿಯನ್ನು ಬೃಹನ್ಮುಂಬಯಿಯಲ್ಲಿನ ಹಿರಿಯ ಕನ್ನಡ ಪತ್ರಕರ್ತ, ಮೊಗವೀರ ಮಾಸಿಕದ ಮಾಜಿ ಸಂಪಾದಕ ಜಿ.ಕೆ ರಮೇಶ್ ಅವರಿಗೆ ಪ್ರದಾನಿಸಿ ಶಾಲು ಹೊದೆಸಿ ಫಲಪುಷ್ಪವನ್ನಿತ್ತು ಗೌರವಿಸಿ ಗೋಪಾಲ ಶೆಟ್ಟಿ ಅಭಿನಂದಿಸಿದರು.

kt Venugopala awardಊರಪರಊರ ತಮ್ಮತನವನ್ನು ಜೀವಂತವಾಗಿಸುವ ಮೂಲಕ ಎಲ್ಲಾ ಸಮಾಜಗಳನ್ನು ಒಗ್ಗೂಡಿಸುವಲ್ಲಿ ಮುಂಬಯಿ ಕನ್ನಡಿಗ ಪತ್ರಕರ್ತರ ಸೇವೆ ಮಹತ್ತರವಾದದು. ಕನ್ನಡಿಗರು ಊರುಬಿಟ್ಟು ಮುಂಬಯಿ ಸೇರಿದರೂ ಮರ್ಯದಾಸ್ಥಾನ ಅಲಂಕರಿಸಿ ಮೆರೆದವರು. ಇಲ್ಲಿನ ಜತೆಯ ಪ್ರೀತಿವಿಶ್ವಾಸಕ್ಕೆ ಪಾತ್ರರಾದವರು. ಕಾರಣ ನಮ್ಮ ಸಾಧನೆ, ವಸ್ತುನಿಷ್ಠ ಸೇವೆಗಳೇ ನಮ್ಮ ಮಾನದಂಡವಾಗಿದೆ. ಸದ್ಯದ ವ್ಯವಹಾರಿಕ ಪತ್ರಿಕೋದ್ಯಮದ ಮಧ್ಯೆಯೂ ನಿಷ್ಠಾವಂತಿಕೆಯ ಪತ್ರಿಕಾವೃತ್ತಿ ಮೈಗೂಡಿಸಿರುವ ಮುಂಬಯಿ ಕನ್ನಡಿಗ ಪತ್ರಕರ್ತರ ಸೇವೆ ಅನುಪಮವಾದದು. ಆದ್ದರಿಂದಲೇ ಕರುನಾಡ ಜನತೆ ಮರಾಠಿಭೂಮಿಯಲ್ಲಿ ಆತ್ಮೀಯ ಬಂಧುಗಳಾಗಿಯೇ ಸ್ಥಾನಮಾನ ಪಡೆದಿರುವರು ಎಂಬುವುದನ್ನೂ ಗೋಪಾಲ್ ಶೆಟ್ಟಿ ತಿಳಿಸಿದರು.

ಕೆ.ಎಲ್ ಬಂಗೇರ ಮಾತನಾಡಿ ಸುಮಾರು ಒಂದುವರೆ ಶತಮಾನದ ಹಿಂದೆ ಉದರ ಪೋಷಣೆಗೆ ಕನ್ನಡಿಗರು ಮರಾಠಿ ಮಣ್ಣಿನ ಮುಂಬಯಿ ಸೇರಿದರೂ ದೂರದೃಷ್ಠಿತ್ವವನ್ನು ಹೊಂದಿ ಸಾಧಕರೆಣಿಸಿದ್ದಾರೆ. ಇದೆಲ್ಲಾ ನಮ್ಮ ಕಠಿಣಶ್ರಮ, ನ್ಯಾಯಪರತೆ, ಪರಾಕ್ರಮ, ಸಮರ್ಪಣಾಭಾವ, ಸಮಗ್ರತೆಯ ಫಲಿತಾಂಶವಾಗಿದೆ. ಆ ಪೈಕಿ ಕನ್ನಡ ಪತ್ರಿಕೋದ್ಯಮದ ಸಾಧನೆಯೂ ಒಂದಾಗಿದೆ. ಸಮಾಜ ನಿರ್ಮಾಣದಲ್ಲಿ ಮಹಾರಾಷ್ಟ್ರದಲ್ಲಿ ಕನ್ನಡಿಗ ಪತ್ರಿಕಾರಂಗದ ಸಾಧನೆ ಹೊರತಾಗಿಲ್ಲ. ವರದಿಗಾರಿಕೆಯು ಒಂದು ಎದೆಗಾರಿಕೆಯ ವೃತ್ತಿಯಾಗಿದ್ದು ಎಲ್ಲರೂ ಪತ್ರಕರ್ತರಾಗಲು ಸಾಧ್ಯವಿಲ್ಲ. ಇದನ್ನೇ ಕನ್ನಡಿಗ ಪತ್ರಕರ್ತರು ಸಿದ್ಧಿಸಿ ಅದನ್ನು ಓರ್ವ ಶ್ರೇಷ್ಠಪತ್ರಕರ್ತನ ಹೆಸರ ಪ್ರಶಸ್ತಿಯೊಂದಿಗೆ ಭಾವೀ ಜನಾಂಗದ ಜರ್ನಲಿಸ್ಟ್‌ಗಳಿಗೆ ಮಾದರಿ ಆಗಿದ್ದಾರೆ ಎಂದರು.

ಸುನೀತಾ ಶೆಟ್ಟಿ ಪುರಸ್ಕಾರದ ಬಗ್ಗೆ ಮಾತನಾಡಿ ಅವಿಷ್ಕಾರ ಕಾಣದ ಅಂದಿನ ದಿನಗಳಲ್ಲಿ ಹೊರನಾಡಿನಲ್ಲಿದ್ದು ಒಳನಾಡಿನ ಓದುಗರಿಗೆ, ಪತ್ರಿಕೋದ್ಯಮಕ್ಕೆ ತನ್ನ ವಸ್ತುನಿಷ್ಠತಾ ವರದಿಗಾರಿಕೆಯಿಂದ ಸುದ್ದಿ ಮುಟ್ಟಿಸಿದ ಕೆಟಿ ವೇಣುಗೋಪಾಲ್ ಸಮರಣೀಯರಾದರೂ ಅವರ ನೆನಹು ಪ್ರಶಸ್ತಿ ಮುಖೇನ ಅಮರವಾಗಿಸುವುದು ಅಭಿಮಾನದ ಸಾಧನೆ. ಕನ್ನಡಿಗರ ಪತ್ರಕರ್ತರ ಈ ಯೋಜನೆ ಪ್ರಶಂಸನೀಯ. ಪತ್ರಕರ್ತರು ಮತ್ತು ಪತ್ರಿಕೋದ್ಯಮಕ್ಕೆ ಇಂತಹ ಸಾಧನೆ ಒಳ್ಳೆಯ ಯೋಗಾಯೋಗ. ಮುಂಬಯಿ ಅಂದರೆ ಕನ್ನಡಿಗರಿಗೆ ಅಖಂಡವಾದದು. ಇಲ್ಲಿ ಬಿಕ್ಕಟ್ಟುಕ್ಕಿಂತ ಒಗ್ಗಟ್ಟು ರೂಢಿಸಿಕೊಂಡ ಕನ್ನಡಿಗರು ಸಾಮರಸ್ಯತ್ವಕ್ಕೆ ಸಾಕ್ಷಿಯಾಗಿದ್ದಾರೆ. ಕನ್ನಡಿಗರ ಮುಂಬಯಿ ಇತಿಹಾಸಕ್ಕೆ ಈ ಪ್ರಶಸ್ತಿ ಮುಕುಟದ ವಜ್ರದಂತಿದೆ ಎಂದರು.

ಪತ್ರಿಕೋದ್ಯಮಕ್ಕೆ ವಿಶ್ವಾಂತ್ರಿಯನ್ನಿತ್ತು ನಿವೃತ್ತಿ ಜೀವನದಲ್ಲಿದ್ದ ನನ್ನನ್ನು ಈ ಪುರಸ್ಕಾರ ಮತ್ತೆ ಎಚ್ಚರಿಸಿದೆ. ಇದು ಜೀವಮಾನವಿಡೀ ನೆನಪಿಸಿಡುವ ಗೌರವ ನನ್ನದಾಗಿದೆ. ಓರ್ವ ನಿಷ್ಪಕ್ಷಪಾತ ಸೇವೆಯ ಪತ್ರಕರ್ತನನ್ನು ಜನ ಸದಾ ಜೀವಂತವಾಗಿಸಿಡುವರು ಅನ್ನುವುದಕ್ಕೆ ಈ ಪ್ರಶಸ್ತಿ ಸಾಕ್ಷಿಯಾಗಿದೆ. ವೃತ್ತಿನಿಷ್ಠೆಗೆ ಈ ಪ್ರಶಸಿ ಪ್ರತಿಷ್ಠೆಯನ್ನು ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ. ನನ್ನನ್ನು ನನ್ನ ಪರಮಾಪ್ತ ಪತ್ರಕರ್ತಮಿತ್ರ ಕೆಟಿವಿ ಸ್ಮರಣೆಯಲ್ಲಿ ಗುರುತಿಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಗೆ ವಂದಿಸುವೆ ಎಂದು ಪ್ರಶಸ್ತಿಗೆ ಉತ್ತರಿಸಿ ಜಿ.ಕೆ ರಮೇಶ್ ಎಂದರು.

ಪೆನ್ಶನ್‌ಕ್ಕಿಂತ ಟೆನ್ಶನ್‌ನಿಂದಲೇ ಬಾಳಬೇಕಾದ ಅನಿರ್ವಯತೆ ಪತ್ರಕರ್ತರಿಗೆ ಒದಗಿದ್ದು ದುರದೃಷ್ಟಕರ. ಸಮಾಜದ ಉನ್ನತಿಕರಣಕ್ಕೆ ಹುಟ್ಟು ಪಡೆದ ಪತ್ರಿಕೊದ್ಯಮದ ಸದ್ಯದ ನಡೆ ನೋಡಿದರೆ ಸಮಾಜದ ಸ್ವಾಸ್ಥ ಹಾಳುಗೆಡುವಲ್ಲಿ ತೊಡಗಿಸಿ ಕೊಳ್ಳುತ್ತಿದೆ ಎನ್ನುವ ಭಯ ಮೂಡುತ್ತಿದೆ. ಪತ್ರಿಕಾರಂಗ ಶಕ್ತಿಯುತವಾಗಿ ಸದೃಢವಾಗಿ ಉಳಿಯ ಬೇಕಾದರೆ ಮಾಧ್ಯಮಗಳು ಜನರ ವಿಶ್ವಾಸಕ್ಕೆ ದ್ರೋಹ ಬಗ್ಗೆಯದಂತೆ ನಡೆದು ಕೊಳ್ಳುವ ಅಗತ್ಯವಿದೆ. ಇದೇ ಪ್ರತಿಯೊಬ್ಬ ಪತ್ರಕರ್ತನ ಕರ್ತವ್ಯವಾಗಬೇಕು ಎಂದು ಅಧ್ಯಕ್ಷೀಯ ಭಾಷಣದಲ್ಲಿ ರೋನ್ಸ್ ಬಂಟ್ವಾಳ್ ತಿಳಿಸಿದರು.

ಪತ್ರಕರ್ತರ ಸಂಘದ ಹಿತೈಷಿಗಳಾಗಿದ್ದು ಇತ್ತೀಚೆಗೆ ಸ್ವರ್ಗೀಯರಾದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ, ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ದಿ| ಜಯ ಸಿ.ಸುವರ್ಣ, ಸಂಘದ ಪೋಷಕ ಸದಸ್ಯ ದಿ| ಎಂ.ಬಿ ಕುಕ್ಯಾನ್, ಸಂಘದ ಮಾಜಿ ಜೊತೆ ಕೋಶಾಧಿಕಾರಿ ದಿ| ಸುರೇಶ್ ಆಚಾರ್ಯ, ನಾಡಿನ ಹಿರಿಯ ಪತ್ರಕರ್ತ ದಿ| ಬನ್ನಂಜೆ ಗೋವಿಂದಾಚಾರ್ಯ ಮತ್ತು ಅಗಲಿದ ಎಲ್ಲಾ ಪತ್ರಕರ್ತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಉಪಸ್ಥಿತ ಗಣ್ಯರಾದ ಮೋಗವೀರ ಮಂಡಳಿಯ ಟ್ರಸ್ಟಿಗಳಾದ ಹರೀಶ್ ಪುತ್ರನ್, ಲಕ್ಷ ಣ್ ಶ್ರೀಯಾನ್, ದೇವರಾಜ್ ಬಂಗೇರ, ಮೋಗವೀರ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್, ಪ್ರೀತಿ ಹರೀಶ್ ಶ್ರೀಯಾನ್, ಮೋಹನ್ ಮಾರ್ನಾಡ್, ನ್ಯಾ| ಆರ್.ಜಿ ಶೆಟ್ಟಿ, ವಸಂತ್ ಕೆ.ಸುವರ್ಣ, ಜಿ.ಟಿ ಆಚಾರ್ಯ, ಸುಧಾಕರ್ ಕರ್ಕೇರ, ನವೀನ್ ಕೆ.ಇನ್ನ, ಎಸ್.ಕೆ ಸುಂದರ್, ಡಾ| ಭರತ್‌ಕುಮಾರ್ ಪೊಲಿಪು, ಓಂದಾಸ್ ಕಣ್ಣಂಗಾರ್, ಪತ್ರಕರ್ತರ ಸಂಘದ ಸಲಹಾ ಸದಸ್ಯರಾದ ಸುರೇಂದ್ರ ಎ.ಪೂಜಾರಿ, ಸುಧಾಕರ್ ಉಚ್ಚಿಲ್, ವಿಶೇಷ ಆಮಂತ್ರಿತ ಸದಸ್ಯರುಗಳಾದ ನ್ಯಾ| ವಸಂತ ಕಲಕೋಟಿ, ಗೋಪಾಲ್ ತ್ರಾಸಿ, ಸವಿತಾ ಎಸ್.ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಜಯಂತ್ ಕೆ.ಸುವರ್ಣ ಮತ್ತಿತರರಿಗೆ ಸ್ಮರಣಿಕೆ, ಪುಷ್ಫಗಳನ್ನಿತ್ತು ಗೌರವಿಸಲಾಯಿತು.

ಪತ್ರಕರ್ತರ ಸಂಘದ ಗೌ| ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ ಸ್ವಾಗತಿಸಿದರು. ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ವಿಶೇಷ ಆಮಂತ್ರಿತ ಸದಸ್ಯ ಸಾ.ದಯಾ ಪುರಸ್ಕೃತರನ್ನು ಪರಿಚಯಿಸಿದರು. ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ ಪುರಸ್ಕೃತರಿಗೆ ಅಭಿನಂದನಾ ನುಡಿಗಳನ್ನಾಡಿದರು. ಅನಿತಾ ಪಿ.ಪೂಜಾರಿ ತಾಕೋಡೆ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ ವಂದಿಸಿದರು. ಜಿ.ಕೆ ರಮೇಶ್ ಬಂಧುಮಿತ್ರರು ಉಪಸ್ಥಿತರಿದ್ದು ಅಭಿನಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನ ಗೊಂಡಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English