ಬೆಳ್ತಂಗಡಿ ತಾಲೂಕಿನಲ್ಲಿ ಸಂಭ್ರಮದ ಸಿರಿ ಜಾತ್ರೆ

5:00 PM, Monday, February 1st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

siriJatre ಮಂಗಳೂರು: ಅಲ್ಲಿ ಹೋದಾಗ ಅಪರೂಪದ ದೃಶ್ಯವೇ ಕಂಡುಬಂದಿತ್ತು. ಸಾಲು ಸಾಲಾಗಿ ನಿಂತು ಹೊಂಬಾಳೆಯನ್ನು ಹಿಡಿದಿದ್ದ ಮಹಿಳೆಯರನ್ನು ನೋಡಿದ್ರೆ ಕಣ್ಣಲ್ಲಿ ಭಯ ಭಕ್ತಿ ಸೃಷ್ಟಿಸಿತ್ತು. ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಆಲಡೆ ಕ್ಷೇತ್ರ ಮರೋಡಿ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ‌ ಪ್ರಯುಕ್ತ ಆಯನ ಮತ್ತು ಸಿರಿಗಳ ಜಾತ್ರೆ ಸಂಭ್ರಮದಿಂದ ನಡೆಯಿತು. ಹೆಂಗಸರು ಸಾಲಾಗಿ ನಿಂತು ತಮ್ಮ ತಮ್ಮ ಕೈಯಲ್ಲಿ ಅಡಕೆ ಮರದ ಹಿಂಗಾರವನ್ನು ಹಿಡಿದು  ಸಾಮೂಹಿಕವಾಗಿ ಮೈಮೇಲೆ ದೈವವನ್ನು ಆವಾಹಿಸಿಕೊಂಡಿದ್ದರು. ಮಹಿಳೆಯರು‌ ಯುವತಿಯರನ್ನು ‘ಸಿರಿ’ಗಳೆಂದೂ, ಯುವಕರನ್ನು ‘ಕುಮಾರ’ ಎಂದು ಕರೆಯಲಾಗುತ್ತದೆ.

ಅಂದಹಾಗೇ ತುಳುನಾಡಿನ ವಿಶಿಷ್ಟ ಆಚರಣೆಗಳಲ್ಲಿ ಸಿರಿ ಜಾತ್ರೆಯೂ ಕೂಡಾ ಒಂದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇದನ್ನು ಹೆಚ್ಚು ಆಚರಿಸಲಾಗುತ್ತದೆ. ತುಳುನಾಡಿನಲ್ಲಿ ಸುಮಾರು ಎಂಭತ್ತಕ್ಕೂ ಹೆಚ್ಚು ಸಿರಿ ಆಲಡೆಗಳಿವೆ ಎನ್ನುವುದು ಒಂದು ಅಂದಾಜು. ಇದರಲ್ಲಿ ಮರೋಡಿ ಶ್ರೀ ಉಮಾಮಹೇಶ್ವರ ಕೂಡ ಒಂದು. ಇಲ್ಲಿ ಕೂಡ ಸಿರಿ-ಕುಮಾರರಿರುತ್ತಾರೆ. ಸಿರಿ ಮತ್ತು ಕುಮಾರ ಸಹೋದರಿ-ಸಹೋದರರು. ಮನೆಯಲ್ಲಿ ಕಷ್ಟ ಬಂದಾಗ, ಸಹಿಸಲಾಗದಂತಹ ಸಂಕಟ ಬಂದಾಗ, ಸಂತಾನ ಭಾಗ್ಯವಿಲ್ಲದಿದ್ದಾಗ ಹರಕೆ ಹೇಳುವ ಕ್ರಮವಿದೆ. ಸಿರಿ ಜಾತ್ರೆಗೆ ಬಂದು ಸಿರಿಯಾಗಿ, ಕುಮಾರನಾಗಿ ದೇವರ ಸನ್ನಿಧಿಯಲ್ಲಿ ಹರಕೆ ತೀರಿಸುವುದಾಗಿ ಹೇಳಿಕೊಂಡಿರುತ್ತಾರೆ. ಹೀಗೆ ಹರಕೆ ಹೇಳಿಕೊಂಡರೆ ಫಲ ಸಿಗುತ್ತದೆ ಎನ್ನುವುದು ಬಲವಾದ ನಂಬಿಕೆ. ಹೀಗೆ ಹರಕೆ ಹೇಳಿಕೊಂಡವರು ತಮ್ಮ ಮನೆ ಮಂದಿ ಜೊತೆ ಬಂದು ಸಿರಿಜಾತ್ರೆಯಲ್ಲಿ ಹರಕೆ ಸಲ್ಲಿಸಿದರು.

siriJatre

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English