ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಪರಿಚಯ ಪ್ರೇಮಕ್ಕೆ ತಿರುಗಿದ ನಂತರ ಹುಡುಗಿ ಆತನಿಂದ ದೂರವಾಗಲು ನಿರ್ಧರಿದ್ದಳು ಆತ ಕೊಟ್ಟ ಗಿಫ್ಟ್ ಗಳನ್ನೂ ಹಿಂತಿರುಗಿಸಿದ್ದಳು ಇದರಿಂದ ಕೋಪಗೊಂಡ ಮಾಜಿ ಪ್ರಿಯಕರ ಮತ್ತು ಆತನ ಸ್ನೇಹಿತರ ತಂಡ ನಗರದ ರೆಸ್ಟೋರೆಂಟ್‌ವೊಂದರಲ್ಲಿ ಯುವತಿಯ ಮೇಲೆ ದಾಳಿ ಮಾಡಿತ್ತು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಬೊಕ್ಕಪಟ್ಣದ ತ್ರಿಶೂಲ್ ಸಾಲ್ಯಾನ್ (19), ಕೋಡಿಕಲ್‌ನ ಸಂತೋಷ್ ಪೂಜಾರಿ (19) ಮತ್ತು ಅಶೋಕ್ ನಗರದ ಡ್ಯಾನಿಷ್ ಅ್ಯರೋನ್ ಡಿಕ್ರೂಸ್ (18) ಬಂಧಿತ ಆರೋಪಿಗಳು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತರು, ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಪ್ರಮುಖ ಆರೋಪಿ ತ್ರಿಶೂಲ್ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ. ಈ ಪರಿಚಯ ಪ್ರೇಮಕ್ಕೆ ತಿರುಗಿತ್ತು. ನಂತರ ವೈಷಮ್ಯ ಉಂಟಾಗಿ ಯುವತಿ ಆತನಿಂದ ದೂರವಾಗಲು ನಿರ್ಧರಿಸಿದ್ದಳು. ಅದರಂತೆ ಆತ ನೀಡಿದ್ದ ಎಲ್ಲ ಗಿಫ್ಟ್‌ಗಳನ್ನು ಮರಳಿಸಲು ಕೆಲ ದಿನಗಳ ಹಿಂದೆ ನಗರದ ಬಂಟ್ಸ್ ಹಾಸ್ಟೆಲ್ ಸಮೀಪ ಬರುವಂತೆ ತ್ರಿಶೂಲ್ ಗೆ ಹೇಳಿದ್ದಳು. ಈ ವೇಳೆಯೂ ತ್ರಿಶೂಲ್ ಯುವತಿಯ ಮೇಲೆ ದಾಳಿಗೆ ಯತ್ನಿಸಿದ್ದ. ಇದಾದ ನಂತರವೂ ತ್ರಿಶೂಲ್ ಆಕೆಯ ವಿರುದ್ಧ ವೈರತ್ವ ಸಾಧಿಸಿದ್ದ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಕಳೆದ ಜ.30ರಂದು ಬೆಂದೂರ್‌ವೆಲ್‌ನ ನಗರದ ರೆಸ್ಟೋರೆಂಟ್‌ನಲ್ಲಿ ಯುವತಿ ತನ್ನ ಸ್ನೇಹಿತರೊಂದಿಗೆ ‘ಬರ್ತ್ ಡೇ ಪಾರ್ಟಿ’ ಆಚರಿಸುತ್ತಿದ್ದ ವೇಳೆ ಪ್ರಮುಖ ಆರೋಪಿಯು ತನ್ನ ಸ್ನೇಹಿತರೊಂದಿಗೆ ಆಗಮಿಸಿ ಆಕೆಯ ಮೇಲೆ ದಾಳಿ ಮಾಡಲು ಯತ್ನಿಸಿದ್ದ. ಈ ವೇಳೆ ಜೊತೆಗಿದ್ದ ಸ್ನೇಹಿತರು ಆಕೆಯನ್ನು ಕಾಪಾಡಲು ಯತ್ನಿಸಿದಾಗ ಓರ್ವ ಸ್ನೇಹಿತ ಚೂರಿ ಇರಿತಕ್ಕೆ ಒಳಗಾಗಿ ಗಾಯಗೊಂಡಿದ್ದ. ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English