ದಕ್ಷಿಣ ಕನ್ನಡ ಜಿಲ್ಲೆಯ ಐವರು ಪೊಲೀಸ್ ಅಧಿಕಾರಿಗಳು ಸೇರಿದಂತೆ 120 ಪೊಲೀಸರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

2:09 AM, Thursday, February 11th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

goldmedal
ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆಯ ಡಿಟಿ ನಾಗರಾಜ್ ಬಂಟ್ವಾಳ ವೃತ್ತ (ಸಿಪಿಐ), ಕಬ್ಬಾಳ್ ರಾಜ್ ಉಳ್ಳಾಲ್ ಪೊಲೀಸ್ ಠಾಣೆ (ಪಿಎಸೈ), ಪುರುಷೋತ್ತಮ ಎ, ಸಿಐಡಿ ಪೊಲೀಸ್ ಅರಣ್ಯ ಘಟಕ ಮಂಗಳೂರು, ವೆಂಕಟೇಶ್ ನಾಯಕ್ (ಸಿಹೆಚ್ ಸಿ) ಬೆಳ್ತಂಗಡಿ ವೃತ್ತ ಸೇರಿದಂತೆ 120 ವಿವಿಧ ವರ್ಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು 2019ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‍ನಲ್ಲಿ ಸೋಮವಾರ  ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ 2019ರ ಮುಖ್ಯಮಂತ್ರಿ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಪದಕ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಪರಾಧ ಕೃತ್ಯಗಳ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ತಮ್ಮ ಜೀವದ ಹಂಗನ್ನು ತೊರೆದು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸರಕಾರ ಬದ್ಧ ಎಂದು  ಭರವಸೆ ನೀಡಿದ್ದಾರೆ.

goldmedalನಾಗರಿಕರು ಶಾಂತಿಯುತ ಜೀವನಕ್ಕೆ ಪೊಲೀಸರ ಕರ್ತವ್ಯನಿಷ್ಠೆ, ಕಾರ್ಯತತ್ಪರತೆ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿನ ಪೊಲೀಸರಿಗೆ ಅಗತ್ಯ ನೆರವು, ಎಲ್ಲ ಸವಲತ್ತುಗಳನ್ನು ಕಲ್ಪಿಸಲು ಸರಕಾರ ಕ್ರಮ ವಹಿಸಿದೆ. ಪೊಲೀಸ್ ಸಿಬ್ಬಂದಿಗೆ ವಸತಿ ಸೌಕರ್ಯ ಕಲ್ಪಿಸಲು 2ಸಾವಿರ ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ 2025ರ ವೇಳೆಗೆ 10,034 ವಸತಿಗೃಹಗಳ ನಿರ್ಮಾಣ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಅಲ್ಲದೆ, ಈಗಾಗಲೇ 11 ಸಾವಿರ ವಸತಿಗೃಹಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿನ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುವ ಮೂಲಕ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಕರೆ ನೀಡಿದ ಅವರು, ಪೊಲೀಸ್ ಇಲಾಖೆ ಮೂಲಸೌಕರ್ಯಗಳ ಉನ್ನತೀಕರಣ, ಆಧುನಿಕ ತಂತ್ರಜ್ಞಾನ ಬಳಕೆಗೂ ಸರಕಾರ ಅಗತ್ಯ ನೆರವು ನೀಡಲಿದೆ ಎಂದು ತಿಳಿಸಿದರು.

purushottam ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತುರ್ತು ಸ್ಪಂದನ ವಾಹನಗಳಿಗೂ ಸಹಾಯ ನೀಡಿದ್ದಾರೆ. ಸಂಕಷ್ಟದಲ್ಲಿರುವವರು ಸಹಾಯವಾಣಿ 112ಕ್ಕೆ ಕರೆ ಮಾಡಿದರೆ ತುರ್ತು ನೆರವು ಸಿಗುತ್ತದೆ. ಹಾಗೆಯೇ ನಿರ್ಭಯ ನಿಧಿಯಡಿ ಸುರಕ್ಷತೆಗಾಗಿ ಕೇಂದ್ರ ಒದಗಿಸಿರುವ 667 ಕೋಟಿ ರೂ.ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ಯಡಿಯೂರಪ್ಪ ವಿವರ ನೀಡಿದರು.

ರಾಜ್ಯದ ಪೊಲೀಸರು ದೇಶದಲ್ಲೇ ವಿಶೇಷ ಹೆಸರು ಪಡೆದಿದ್ದು, ಗಣನೀಯ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿ ಕರ್ತವ್ಯ ನಿಷ್ಠೆ ಮೆರೆದು ಅಸಾಧಾರಣ ಸಾಮಥ್ರ್ಯ ತೋರಿದ ಪೊಲೀಸರಿಗೆ ಪದಕ ನೀಡಿ ಉತ್ತೇಜಿಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಡ್ರಗ್ಸ್ ಜಾಲ, ಸೈಬರ್ ಅಪರಾಧ ಕೃತ್ಯಗಳು, ಸೈಬರ್ ಹ್ಯಾಕ್ ಸೇರಿದಂತೆ ಹೊಸ ರೂಪದ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ಸವಾಲು ಮತ್ತು ಸಾಹಸ ಪೊಲೀಸ್ ಇಲಾಖೆ ಮುಂದಿದ್ದು, ಅಧಿಕಾರಿಗಳು ಈ ಸವಾಲನ್ನು ಎದುರಿಸಲು ಸನ್ನದ್ಧರಾಗಬೇಕು ಮತ್ತು ಕೆಳಹಂತದ ಸಿಬ್ಬಂದಿಯನ್ನು ಈ ಕೃತ್ಯಗಳ ತಡೆಗೆ ಸಜ್ಜುಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಆರಂಭದಲ್ಲಿ 2019ನೆ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕೃತ 118 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಿಎಂ ಪದಕ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

purushottam

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English