ಹುಬ್ಬಳ್ಳಿ : 17ನೇ ರಾಷ್ಟ್ರೀಯ ಮೌಂಟೇನ್ ಸಿನಿಯರ್, ಜ್ಯೂನಿಯರ್ ಮತ್ತು ಸಬ್ ಜ್ಯೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಶಿಫ್ ಸ್ಪರ್ಧೆಯನ್ನು ಫೆ.18 ರಿಂದ 21 ರವರೆಗೆ ಗದಗ ಜಿಲ್ಲೆಯ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಏರ್ಪಡಿಸಲಾಗಿದೆ ಎಂದು ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರು ರವಿವಾರ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ರಾಷ್ಟೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಶಿಫ್ ಸ್ಪರ್ಧೆಯ ಲೋಗೊ ಬಿಡುಗಡೆಗೊಳಿಸಿ ಮಾತನಾಡಿದರು. 17ನೇ ರಾಷ್ಟೀಯ ಮೌಂಟೇನ್ ಸಿನಿಯರ್, ಜ್ಯೂಜಿಯರ್ ಮತ್ತು ಸಬ್ ಜ್ಯೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಶಿಫ್ ಸ್ಪರ್ಧೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ, ರಾಜ್ಯ ಸೈಕ್ಲಿಂಗ್ ಸಂಸ್ಥೆ, ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದೆ.
ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಶಿಫ್ ಸ್ಪರ್ಧೆಯನ್ನು ಗದಗ ಜಿಲ್ಲೆಯಲ್ಲಿ ನಡೆಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಫೆ.18 ರಂದು ಬೆಳಿಗ್ಗೆ 8 ಗಂಟೆಗೆ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೈಕಲ್ ಜಾಥಾ ಸಮಾವೇಷಗೊಂಡು ಆರಂಭವಾಗಿ, ಅಸುಂಡಿಯ ಕುವೆಂಪು ಮಾದರಿ ಶಾಲೆಯಲ್ಲಿ ಮುಕ್ತಾಯಗೊಳ್ಳಲಿದೆ. ಅದೇ ದಿನ ಸಂಜೆ 5 ಗಂಟೆಗೆ ನಗರದ ಕಳಸಪೂರ ರಸ್ತೆಯ ಒಳಕ್ರೀಡಾಂಣಗದಲ್ಲಿ ಉದ್ಘಾಟನೆ ನೆರವೇರಲಿದೆ. ಫೆ.19 ರಿಂದ 21 ರವರೆಗೆ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಬಿಂಕದಕಟ್ಟೆ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಸೈಕ್ಲಿಂಗ್ ಸ್ಪರ್ದೆಗಳು ನಡೆಸಲಾಗುವುದು ಎಂದರು.
ದೇಶದ 26 ಹೊರರಾಜ್ಯಗಳಿಂದ 400 ರಿಂದ 600 ಜನ ಕ್ರೀಡಾಪಟುಗಳು ಆಗಮಿಸುತ್ತಿದ್ದು, ರಾಜ್ಯದಿಂದ 38 ಜನ ಹಾಗೂ ಜಿಲ್ಲೆಯ 7 ಜನ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೈಕ್ಲಿಂಗ್ ಸ್ಪರ್ದೆ ಆಯೋಜನೆ ಬಗ್ಗೆ ಪೂರ್ವಭಾವಿ ಸಭೆಗಳನ್ನು ನಡೆಸಿ, ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಅದರ ಅನ್ವಯ ಸ್ಪರ್ಧಿಗಳಿಗೆ ಊಟೋಪಚಾರ, ವಸತಿ, ಸಾರಿಗೆ ವ್ಯವಸ್ಥೆಯಲ್ಲಿ ಕೊರತೆಯುಂಟಾಗದಂತೆ ಜವಾಬ್ದಾರಿಯನ್ನು ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ. ವಹಿಸಿದ ಜವಾಬ್ದಾರಿಗಳನ್ನು ನಿಯೋಜಿತ ಅಧಿಕಾರಿಗಳು ನಿರ್ವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲೆಯ ಕ್ರೀಡಾಶಾಲೆಯ ವಿಧ್ಯಾರ್ಥಿಗಳಾದ ಹನಮಂತ ಮಾರನೂರ, ಸಭಿಶೇಕ್ ಹಿರೇಕುರುಬರ, ಪವಿತ್ರಾ ಕುರ್ತಕೋಟಿ, ಅಂಜಲಿ ಹರಿಜನ, ಗಾಯತ್ರಿ ಕಿತ್ತೂರ ಇವರು ಈ ಸ್ಪರ್ದೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ ಅವರು ತಿಳಿಸಿದರು.
ಇದೇ ವೇಳೆ “ರೈಡ್ ಸೈಕಲ್ ಸ್ಟೇ ಹೆಲ್ದಿ” ಎಂಬ ಪರಿಸರ ಹಾಗೂ ಆರೋಗ್ಯ ಸಂದೇಶವುಳ್ಳ ಸೈಕ್ಲಿಂಗ್ ಸ್ಪರ್ಧೆಯ ಲೋಗೋವನ್ನು ಸಚಿವರು ಬಿಡುಗಡೆ ಮಾಡಿದರು.
ವರದಿ: ಶಂಭು, ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ.
Click this button or press Ctrl+G to toggle between Kannada and English