ಮುಡಿಪುವಿನಲ್ಲಿ ನಿರ್ಮಿಸಲಾಗುತ್ತಿರುವ ಜಿಲ್ಲಾ ಕೇಂದ್ರ ಕಾರಾಗೃಹದ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣ : ಅಲೋಕ್‌ ಮೋಹನ್‌

11:23 PM, Tuesday, March 2nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Alok Mohan ಮಂಗಳೂರು: ಬಂಟ್ವಾಳ ತಾಲೂಕಿನ ಮುಡಿಪುವಿನಲ್ಲಿ ನಿರ್ಮಿಸಲಾಗುತ್ತಿರುವ ಜಿಲ್ಲಾ ಕೇಂದ್ರ ಕಾರಾಗೃಹದ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣವಾಗಲಿದೆ ಎಂದು ಬಂದೀಖಾನೆ ಡಿಜಿಪಿ ಅಲೋಕ್‌ ಮೋಹನ್‌ ಹೇಳಿದರು.

ಮಂಗಳವಾರ ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಟ್ವಾಳದಲ್ಲಿ ನಿರ್ಮಿಸುತ್ತಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಸುರಕ್ಷತೆಯ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದರು.

ಈಗಿರುವ ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹ ಚಿಕ್ಕದಾಗಿದ್ದು, ಸುಮಾರು 300 ಕೈದಿಗಳನ್ನು ಇರಿಸಬಹುದಾಗಿದೆ. ವಿಚಾರಣಾಧೀನ ಕೈದಿಗಳನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದರು.

ಜೈಲಿನಲ್ಲಿ ಮೊಬೈಲ್‌ ಫೋನ್‌, ಗಾಂಜಾ ಪತ್ತೆಯಾಗುತ್ತಿರುವುದು ಗಂಭೀರ ವಿಚಾರ. ಹಲವಾರು ಬಾರಿ ದಾಳಿಯ ಸಂದರ್ಭದಲ್ಲಿ ಗಾಂಜಾ, ಮೊಬೈಲ್‌ ಪತ್ತೆಯಾಗಿವೆ. ಈ ವಿಷಯದಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದ ಅವರು, ಜೈಲಿನಲ್ಲಿ ಗುಂಪುಗಳ ಮಧ್ಯೆ ಹೊಡೆದಾಟ ಪ್ರಕರಣಗಳೂ ನಡೆಯುತ್ತಿದ್ದು, ಅಂತಹ ಸಂದರ್ಭದಲ್ಲಿ ಆ ಗುಂಪುಗಳನ್ನು ಬೇರ್ಪಡಿಸಿ, ಪ್ರತ್ಯೇಕ ಜೈಲಿನಲ್ಲಿ ಇರಿಸಲಾಗುತ್ತಿದೆ ಎಂದರು.

ಕೋವಿಡ್–19 ನಿಂದಾಗಿ ಕೈದಿಗಳು ಕುಟುಂಬದವರ ಜೊತೆಗೆ ಮಾತನಾಡಲು ಇ–ಮುಲಾಖಾತ್‌ ಆರಂಭಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 170 ಕೈದಿಗಳು ಈ ಯೋಜನೆಯ ಮೂಲಕ ತಮ್ಮ ಕುಟುಂಬದವರ ಜೊತೆಗೆ ಮಾತನಾಡಿದ್ದಾರೆ. ಇ–ಮುಲಾಖಾತ್‌ನಲ್ಲಿ ಕೆಲವು ಶಿಷ್ಟಾಚಾರಗಳನ್ನು ಪಾಲಿಸಲಾಗುತ್ತದೆ. ಕೈದಿಗಳಿಗೆ ನಿಗದಿತ ಲಿಂಕ್‌ಗಳನ್ನು ಕೇಂದ್ರ ಕಾರಾಗೃಹದಿಂದ ಒದಗಿಸಲಾಗುತ್ತಿದೆ. ಈ ಲಿಂಕ್‌ ಬಳಸಿ ಅವರು ತಮ್ಮ ಕುಟುಂಬದವರ ಜೊತೆಗೆ ಮಾತನಾಡಬಹುದು ಎಂದು ವಿವರಿಸಿದರು.

ಜೈಲಿನಲ್ಲಿ ಕೈದಿಗಳಿಗೆ ಎಲ್ಲ ಸೌಕರ್ಯಗಳುಳ್ಳ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನು ಜೈಲಿನ ಸಿಬ್ಬಂದಿಯೇ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕೈದಿಗಳಿಗೆ ಕೊಠಡಿ ನಿಗದಿಪಡಿಸುವ ಸಂದರ್ಭದಲ್ಲಿ ಸಿಬ್ಬಂದಿಯನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್‌, ಡಿಸಿಪಿ ಹರಿರಾಂ ಶಂಕರ್‌ ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English