ಉಡುಪಿ : ಮಾಟ ಮಂತ್ರ ಮಾಡಿದ್ದಾರೆ ಎಂದು ನಂಬಿಸಿ ಜೋತಿಷ್ಯ ಹೇಳುವುದಾಗಿ ಮನೆಗೆ ಬಂದ ಮಹಿಳೆಯೊಬ್ಬರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಹೋಗಿರುವ ಘಟನೆ ಶುಕ್ರವಾರ ಬೆಳಗ್ಗೆ ನಿಟ್ಟೂರು ರಾಜೀವನಗರ ಎಂಬಲ್ಲಿ ನಡೆದಿದೆ.
ರಾಜೀವನಗರದ ಲಕ್ಷ್ಮಿ(55) ಎಂಬವರ ಮನೆಗೆ ಸುಮಾರು 30 ವರ್ಷದ ಪ್ರಾಯದ ಅಪರಿಚಿತ ಮಹಿಳೆಯೊಬ್ಬರು ಬಂದು ಜೋತಿಷ್ಯ ಹೇಳುವುದಾಗಿ ನಂಬಿಸಿದರು. ‘ನಿಮ್ಮ ಮನೆಯಲ್ಲಿ ಯಾರೊ ಮಾಟ ಮಂತ್ರ ಮಾಡಿದ್ದಾರೆ, ಕಣ್ಣು ದೃಷ್ಟಿ ಆಗಿದೆ, ಲಕ್ಷ್ಮಿ ಪೂಜೆ ಮಾಡಿಸುತ್ತೇನೆ’ ಎಂದು ಹೇಳಿದ ಆಕೆ, ಪೂಜೆ ಗಾಗಿ ಮನೆಯಲ್ಲಿದ್ದ ಎಲ್ಲಾ ಚಿನ್ನಾಭರಣ ಹಾಗೂ ಹಣವನ್ನು ತರುವಂತೆ ತಿಳಿಸಿದ್ದಳು.
ಅದರಂತೆ ಲಕ್ಷ್ಮಿ ಎಲ್ಲಾ ಚಿನ್ನಾಭರಣಗಳನ್ನು ಮತ್ತು 15,000 ರೂ. ಹಣವನ್ನು ಬಾಕ್ಸ್‌ನಲ್ಲಿ ಹಾಕಿ ಕೊಟ್ಟಿದ್ದರು. ಅಪರಿಚಿತ ಮಹಿಳೆ, ಪೂಜೆ ಮುಗಿಸಿ ಬಾಕ್ಸ್ ವಾಪಾಸು ಕೊಟ್ಟು ಅಲ್ಲಿಂದ ಹೋದರು. ನಂತರ ಲಕ್ಷ್ಮಿ ಬಾಕ್ಸ್ ತೆಗೆದು ನೋಡುವಾಗ ಚಿನ್ನಾಭರಣಗಳು ಮತ್ತು ನಗದು ಹಣ ಇಲ್ಲದಿರುವುದು ಕಂಡು ಬಂದಿದೆ. ಅಪರಿಚಿತ ಮಹಿಳೆ ನಂಬಿಸಿ ಹಣ ಮತ್ತು ಅಭರಣಗಳನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿದ್ದು ಚಿನ್ನಾಭರಣದ ಅಂದಾಜು ಮೌಲ್ಯ 7.36 ಲಕ್ಷ ರೂ. ಮತ್ತು 15ಸಾವಿರ ರೂ. ನಗದು ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English