ಬೆಳ್ತಂಗಡಿ : ತನ್ನ ತಂದೆಯೇ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿ ಸಿಲುಕಿ ಎಂಟು ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಮೂಡುಬಿದಿರೆಯಲ್ಲಿ ನಡೆದಿದೆ.
ಉಜಿರೆ ಅತ್ತಾಜೆ ನಿವಾಸಿ ಇಬ್ರಾಹಿಂ ಇಬ್ಬಿ ಅವರ ಪುತ್ರ, ಉಜಿರೆ ಹಳೆಪೇಟೆ ಬದ್ರುಲ್ ಹುದಾ ಮದರಸದ ಮೂರನೇ ತರಗತಿ ವಿದ್ಯಾರ್ಥಿ ಮುರ್ಷಿದ್ (8) ಮೃತಪಟ್ಟ ಬಾಲಕ.
ಉಜಿರೆ ಅತ್ತಾಜೆ ಇಬ್ರಾಹಿಂ ಮತ್ತು ರಹಿಮತ್ ದಂಪತಿಯ ಇಬ್ಬರು ಮಕ್ಕಳಲ್ಲಿ ಮುರ್ಷಿದ್ ಮೊದಲನೆಯವನಾಗಿದ್ದ. ತಂದೆ ಮೂಡುಬಿದಿರೆಯ ಕಲ್ಲಿನಕೋರೆಗೆ ಹೋಗುವಾಗ ಬಾಲಕನೂ ಜತೆಗೆ ತೆರಳಿದ್ದನೆಂದು ಹೇಳಲಾಗಿದೆ.
ತಂದೆಯೇ ಚಾಲಕನಾಗಿ ಲಾರಿ ಚಲಾಯಿಸಿದ ವೇಳೆ ಬಾಲಕ ಆಕಸ್ಮಿಕವಾಗಿ ಅದರ ಚಕ್ರದಡಿ ಸಿಲುಕಿ ಮೃತರಾಗಿದ್ದಾನೆ ಎಂದು ತಿಳಿದುಬಂದಿದೆ.
ಪ್ರಸ್ತುತ ಉಜಿರೆಯ ಕೊಟ್ರೋಡಿ ಕಾಂಪೌಂಡ್ ನ ರೈಫಾ ಗಾರ್ಡನ್ ಫ್ಲಾಟ್‌ನಲ್ಲಿ ನೆಲೆಸಿದ್ದ ದಂಪತಿಗೆ ನಾಲ್ಕು ವರ್ಷ ಪ್ರಾಯದ ಸಫಾ ಎಂಬ ಪುತ್ರಿ ಇದ್ದಾಳೆ.
ಘಟನೆ ನಡೆದ ತಕ್ಷಣ ಮೂಡುಬಿದಿರೆ ಆಸ್ಪತ್ರೆಗೆ ಬಾಲಕನ್ನು ಸಾಗಿಸಲಾಗಿತ್ತಾದರೂ ಅದಾಗಲೇ ಮೃತಪಟ್ಟಿದ್ದ. ಅಲ್ಲೇ ಮರಣೋತ್ತರ ಪರೀಕ್ಷೆ ಕೈಗೊಂಡು ರಾತ್ರಿ 12.30ರ ವೇಳೆಗೆ ಉಜಿರೆ ಮಸ್ಜಿದ್ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English