ಬಂಟ್ವಾಳ: ರಾಜ್ಯದ ಕೆಲವೊಂದು ತಾಲ್ಲೂಕು ಮತ್ತು ಜಿಲ್ಲಾ ಘಟಕಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ಖಾಯಂ ಉಳಿಸಿಕೊಳ್ಳಲು ಮತ್ತು ಅನಗತ್ಯ ಬದಲಾವಣೆಗೆ ಏಕಸ್ವಾಮ್ಯ ಮೆರೆಯುತ್ತಿರುವುದು ಕಂಡು ಬಂದಿದೆ. ಇದಕ್ಕಾಗಿ ಮೇ.9ರಂದು ನಡೆಯುವ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನನಗೆ ಬಹುಮತದ ಗೆಲುವು ನೀಡಿದರೆ ಇದನ್ನು ಜನಸಾಮಾನ್ಯರ ಪರಿಷತ್ತಾಗಿ ಪರಿವರ್ತಿಸುವುದಾಗಿ ನಾಡೋಜ ಡಾ.ಮಹೇಶ ಜೋಶಿ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಸಮೀಪದ ಕೈಕುಂಜೆ ಕನ್ನಡ ಭವನಕ್ಕೆ ಶನಿವಾರ ಭೇಟಿ ನೀಡಿ ಅವರು ಮತಯಾಚನೆ ನಡೆಸಿದರು.
ರಾಜ್ಯದ ಒಟ್ಟು 3.10ಲಕ್ಷ ಮತದಾರರ ಪೈಕಿ 30 ಸಾವಿರಕ್ಕೂ ಮಿಕ್ಕಿ ಮಂದಿ ಸದಸ್ಯರ ವಿಳಾಸ ಬದಲಾವಣೆ ಮತ್ತು ನಿಧನರಾದವರ ಹೆಸರು ಇನ್ನೂ ಮತದಾರರ ಪಟ್ಟಿಯಲ್ಲಿದೆ. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಿದೆ ಎಂದರು.
ಈ ಸಂದರ್ಭ ಕಸಾಪ ರಾಜ್ಯಾಧ್ಯಕ್ಷ ಅಭ್ಯರ್ಥಿ ನಾಡೋಜ ಡಾ.ಮಹೇಶ ಜೋಶಿ ಇವರು ಬಂಟ್ವಾಳ ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಇವರನ್ನು ಸನ್ಮಾನಿಸಿ ಅಭಿನಂದಿಸಿದರು.
ಕನ್ನಡ ಭವನಕ್ಕೆ ಅನುದಾನ ಪಡೆಯಲು ಮನೆ ದಾಖಲೆಪತ್ರ ಅಡಮಾನ ಇಡಬೇಕು:
ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಮೋಹನ ರಾವ್ ಮಾತನಾಡಿ, ಇಲ್ಲಿನ ತಾಲ್ಲೂಕು ಕನ್ನಡ ಭವನ ನಿರ್ಮಾಣಕ್ಕೆ ಪರಿಷತ್ತಿನಿಂದ ಮಂಜೂರಾದ ರೂ 10ಲಕ್ಷ ಮೊತ್ತದ ಅನುದಾನಕ್ಕೆ ಕಸಾಪ ಜಿಲ್ಲಾಧ್ಯಕ್ಷರ ಮನೆ ಮತ್ತು ಜಮೀನಿನ ದಾಖಲೆ ಪತ್ರ ಅಡಮಾನ ಇಟ್ಟಿದ್ದಾರೆ. ಇಂತಹ ಅನಾಗರಿಕ ನಿರ್ಣಯ ಕೈಗೊಂಡಿರುವ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಕ್ರಮ ಖಂಡನೀಯವಾಗಿದ್ದು, ಇದಕ್ಕೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.
ಬಂಟ್ವಾಳ ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ಕೋಶಾಧಿಕಾರಿ ಶಿವಶಂಕರ್, ಪ್ರಮುಖರಾದ ಮಾಧವ ರಾವ್, ರವೀಂದ್ರ ,ಗೋಪಾಲಕೃಷ್ಣ ಭಟ್ ಕಟ್ಟತ್ತಿಲ, ಸದಸ್ಯರಾದ ಮಹಾಬಲೇಶ್ವರ ಹೆಬ್ಬಾರು, ಅನಾರು ಕೃಷ್ಣ ಶರ್ಮ, ಪಿ.ಲೋಕನಾಥ ಶೆಟ್ಟಿ, ಬಿ.ರಾಮಚಂದ್ರ ರಾವ್, ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತಿತರರು ಇದ್ದರು.
Click this button or press Ctrl+G to toggle between Kannada and English