ಅರಣ್ಯ ನಾಶಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ : ಸಚಿವ ಅರವಿಂದ ಲಿಂಬಾವಳಿ

8:49 PM, Monday, March 15th, 2021
Share
1 Star2 Stars3 Stars4 Stars5 Stars
(No Ratings Yet)
Loading...

Limbavaliಶಿರಹಟ್ಟಿ : ಅರಣ್ಯಕ್ಕೆ ಬೆಂಕಿ ಬೀಳಲು ಮತ್ತು ಅರಣ್ಯ ನಾಶಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶೆಟ್ಟಿಕೆರಿ, ಸಸ್ಯಪಾಲನಾಲಯ ಹಾಗೂ ಅದರ ಸುತ್ತಮುತ್ತಲ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಬೆಂಕಿ ಬಿದ್ದು ನಾಶವಾದ ಅರಣ್ಯ ಪ್ರದೇಶವನ್ನು ವೀಕ್ಷಿಸಿ ಮಾತನಾಡಿದರು. ಈಗಾಗಲೇ ಅರಣ್ಯ ನಾಶಕ್ಕೆ ಕಾರಣ ಆದ 13 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣವಾದ ಕ್ರಮ ಜರುಗಿಸಲಾಗುವದು ಎಂದರು.

ಶೆಟ್ಟಿಕೆರೆ ಹಾಗೂ ಮಾಗಡಿ ಕೆರೆಗಳಿಗೆ ವಿದೇಶಗಳಿಂದ ವಿಶೇಷ ಪಕ್ಷಿಗಳ ಆಗಮನವಾಗುತ್ತಿದ್ದು, ಅವುಗಳಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಅಗತ್ಯದ ಕ್ರಮ ಜರುಗಿಸುವುದರೊಂದಿಗೆ ಕಪ್ಪತಗುಡ್ಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಔಷದಿಯ ಸಸ್ಯಗಳ ಪ್ರಬೇಧಗಳಿದ್ದು ಇಲ್ಲಿಯ ವಾತಾವರಣಕ್ಕೆ ಅನುಗುಣವಾಗಿ ಬೆಳೆಯುವ ಹಾಗೂ ಬೆಳೆಯಬಹುದಾದ ಔಷಧಿಯ ಸಸ್ಯಗಳ ಕುರಿತು ಅಧ್ಯಯನ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕುರಿಗಾಹಿಗಳು ತಮ್ಮ ಕುರಿಗಳಿಗಾಗಿ ಹುಲ್ಲು ಸಂಗ್ರಹಿಸಲು ಬರುತ್ತಾರೆ ಅಂತಹವರನ್ನು ಕ್ರಿಮಿನಲ್ ಎಂದು ಹೇಳಲು ಬರುವುದಿಲ್ಲ, ಇಂತಹ ಕುರಿಗಾಹಿಗಳು ಬೇಸಿಗೆಯಲ್ಲಿ ಇಲಾಖೆಯೊಂದಿಗೆ ಕೈಜೋಡಿಸಿ ಅರಣ್ಯ ಸ್ವಚ್ಛಗೊಳಿಸಲು ಸಹಕರಿಸಬೇಕು ಎಂದರು. ಶೆಟ್ಟಿಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಬೆಳೆಸಲು ಆದ್ಯತೆ ನೀಡಲಾಗುತ್ತದೆ, ಇದಕ್ಕೆ ಅಗತ್ಯವಾದ ಸೂಚನೆಯನ್ನು ಅರಣ್ಯಾಧಿಕಾರಿಗಳಿಗೆ ನೀಡಲಾಗಿದೆ.

ಜಿಲ್ಲೆಯಲ್ಲಿರುವ ಅರಣ್ಯ ಸಂಬಂಧಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು ಸಿಬ್ಬಂದಿಗಳಿಗೆ ಇರುವ ಸಮಸ್ಯೆ ಬಗ್ಗೆಯೂ ಚರ್ಚಿಸಿ ಅವುಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದರು. ಅರಣ್ಯ ಉಳಿಯಬೇಕಾದರೆ ಜನರು ಅರಣ್ಯ ಇಲಾಖೆಯ ಜೊತೆ ಕೈಜೋಡಿಸಿ ಅರಣ್ಯ ರಕ್ಷಣೆಗೆ ಸಹಕರಿಸಬೇಕು ಎಂದು ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ರಾಮಣ್ಣ ಲಮಾಣಿ, ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ವಿ.ಸೂರ್ಯಸೇನ್, ಆರ್.ಎಸ್.ನಾಗಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪರಿಮಳ ವಿ.ಎಚ., ಮನೋಹರ ಚಿತ್ತವಾಡಗಿ, ಶಿರಹಟ್ಟಿ ವಲಯ ಅರಣ್ಯಾಧಿಕಾರಿ ಎ.ಎಚ್.ಮುಲ್ಲಾ, ಮುಂಡರಗಿ ವಲಯ ಅರಣ್ಯಾಧಿಕಾರಿ ಪ್ರದೀಪ ಪವಾರ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English