ವಿಟ್ಲ : ವಿಟ್ಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರ್ತವ್ಯದಲ್ಲಿ ಬಂದಿದ್ದ ಶ್ರವಣ ತಪಾಸಣಾ ಶಿಬಿರದ ಮಹಿಳಾ ಸಿಬ್ಬಂದಿಗಳ ಜೊತೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗುಮಾಸ್ತನ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದಾರೆ.
ಆರೋಗ್ಯ ಕೇಂದ್ರದಲ್ಲಿ ಕಳೆದ ಕೆಲವರ್ಷಗಳಿಂದ ಗುಮಾಸ್ತನಾಗಿರುವ ಫೌಲ್ ಮಸ್ಕರೇನಸ್ ವಿರುದ್ಧ ಮಹಿಳಾ ಸಿಬ್ಬಂದಿಗಳು ದೂರು ನೀಡಿದ್ದಾರೆ.
ಆಸ್ಪತ್ರೆಯಲ್ಲಿ ನಡೆಯುತ್ತಿರುವ ಶ್ರವಣ ತಪಾಸಣಾ ಶಿಬಿರಕ್ಕಾಗಿ ದಕ್ಷಿಣ ಕನ್ನಡ ಎನ್.ಪಿ.ಪಿ.ಸಿ.ಡಿ. ಕಾರ್ಯಕ್ರಮದ ಸಿಬ್ಬಂದಿಗಳು ವಿಟ್ಲಕ್ಕೆ ಆಗಮಿಸಿದ್ದರು. ಮಹಿಳಾ ಸಿಬ್ಬಂದಿಗಳು ಬಂದ ಕೆಲಕ್ಷಣದಲ್ಲೇ ಗುಮಾಸ್ತ ಫೌಲ್ ಮಸ್ಕರೇನಸ್ ಉದ್ದಟತನದಿಂದ ವರ್ತಿಸುತ್ತಿದ್ದ ಕಾರಣ ಸಿಬ್ಬಂದಿಗಳಾದ ಶೋಭಿತಾ ಮತ್ತು ಕಾವ್ಯಶ್ರೀ ಪ್ರಶ್ನಿಸಿದ್ದರೆನ್ನಲಾಗಿದೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಫೌಲ್, ಮಹಿಳಾ ಸಿಬ್ಬಂದಿಗಳನ್ನು ಮನಬಂದಂತೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹೊರಹೋಗುವಂತೆ ತಾಕೀತು ಮಾಡಿದ್ದನೆನ್ನಲಾಗಿದೆ. ನಾವು ಕರ್ತವ್ಯದಲ್ಲಿ ಬಂದಿರುವುದಾಗಿಯೂ ಗುಮಾಸ್ತನಾಗಿರುವ ನಿಮಗೆ ನಮ್ಮನ್ನು ಹೊರಹೋಗುವಂತೆ ಹೇಳುವ ಅಧಿಕಾರವಿಲ್ಲ. ಸಂಸ್ಕಾರ ಹೀನರಂತೆ ವರ್ತಿಸಬೇಡಿ ಎಂದು ಸಿಬ್ಬಂದಿಗಳು ಎಚ್ಚರಿಸಿದ್ದರೂ ಈತನ ಪಿತ್ತ ಕೆಳಗಿಳಿದಿಲ್ಲವೆಂದು ದೂರುದಾರರು ಹೇಳಿದ್ದಾರೆ. ಈ ಹಿಂದೆಯೂ ಈತ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗಳ ಜೊತೆ, ವೈದ್ಯರ ಜೊತೆ ಹಾಗೂ ವಾಹನ ಚಾಲಕರ ಜೊತೆ ಇದೇ ರೀತಿ ವರ್ತಿಸಿದ್ದ ಕಾರಣಕ್ಕಾಗಿ ಮೂರು ಬಾರಿ ದೂರು ನೀಡಿದ್ದರು. ಆದರೆ ಹಿರಿಯ ಅಧಿಕಾರಿಗಳು ಸೌಜನ್ಯದಿಂದ ವರ್ತಿಸುವಂತೆ ಹೇಳಿದ್ದಲ್ಲದೇ ಇದೇ ರೀತಿ ಮುಂದುವರಿದರೆ ವರ್ಗಾವಣೆ ಮಾಡುವ ಎಚ್ಚರಿಕೆ ನೀಡಿದ್ದರು. ಈ ಮಧ್ಯೆ ಒಂದಿಷ್ಟು ರಾಜಕೀಯ ಪ್ರಭಾವ ಬಳಸಿ ಮತ್ತೆ ಅದೇ ಆಸ್ಪತ್ರೆಯಲ್ಲಿ ಮುಂದುವರಿದಿರುವ ಫೌಲ್ ಇದೀಗ ಮಹಿಳಾ ಸಿಬ್ಬಂದಿಗಳ ಜೊತೆ ಹಿಂದಿನಚಾಳಿಯನ್ನೇ ಮುಂದುವರಿಸಿದ ಆರೋಪ ಕೇಳಿಬಂದಿದೆ. ಒಬ್ಬ ಸಿಬ್ಬಂದಿಯ ಅನಾಗರಿಕ ವರ್ತನೆಯಿಂದಾಗಿ ಸಾರ್ವಜನಿಕರಿಗೆ ಸಿಗುವ ಸರಿಯಾದ ಸವಲತ್ತುಗಳು ಸಿಗುತ್ತಿಲ್ಲವೆಂದು ದಾಖಲಾಗಿರುವ ರೋಗಿಗಳು ಹಾಗೂ ಆಸ್ಪತ್ರೆಯ ಇತರ ಸಿಬ್ಬಂದಿಗಳು ಅಲವತ್ತುಕೊಂಡಿದ್ದಾರೆ. ಈತನ ವಿರುದ್ಧ ನೊಂದ ಮಹಿಳಾ ಸಿಬ್ಬಂದಿಗಳಾದ ಶೋಭಿತಾ ಮತ್ತು ಕಾವ್ಯಶ್ರೀ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದಾರೆ.
ಡಿಹೆಚ್‍ಒ ಪ್ರತಿಕ್ರಿಯೆ,
ಬುಧವಾರದಂದು ವಿಟ್ಲ ಸಮುದಾಯ ಆಸ್ಪತ್ರೆಗೆ ಕರ್ತವ್ಯದ ನಿಮಿತ್ತ ಆಗಮಿಸಿದ್ದ ಮೆಡಿಕಲ್ ಟೀಮ್ ಜೊತೆ ಗುಮಾಸ್ತ ಘರ್ಷಣೆ ನಡೆಸಿದ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುತ್ತೇನೆಂದು ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
Click this button or press Ctrl+G to toggle between Kannada and English