ನವದೆಹಲಿ: ಮದ್ಯ ಸೇವನೆ ವಯೋಮಿತಿಯನ್ನು25 ರಿಂದ 21 ವರ್ಷಕ್ಕೆ ಇಳಿಸಿದ ಆಪ್ ಸರ್ಕಾರದ ನಡೆಯನ್ನು ಟೀಕಿಸಿದ ಬಿಜೆಪಿಗೆ ಆಮ್ ಆದ್ಮಿ ಪಕ್ಷ ತಿರುಗೇಟು ನೀಡಿದ್ದು, ಮೊದಲು ಬಿಜೆಪಿ ಮದ್ಯ ಸೇವನೆ ವಯೋಮಿತಿಯನ್ನು ತನ್ನ ಆಡಳಿತವಿರುವ ರಾಜ್ಯಗಳಲ್ಲಿ 25ಕ್ಕೆ ಏರಿಸಿದರೆ ನಾವು 30ಕ್ಕೆ ಏರಿಸುತ್ತೇವೆ ಎಂದು ಸವಾಲು ಹಾಕಿದೆ.
ಈ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಆಮ್ ಆದ್ಮಿ ಪಕ್ಷದ ವಕ್ತಾರ ಸೌರಭ್ ಭಾರದ್ವಾಜ್, ‘ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮದ್ಯ ಖರೀದಿಸುವ ಕನಿಷ್ಠ ವಯಸ್ಸನ್ನು 25 ವರ್ಷ ಮಾಡಿದರೆ, ಎಎಪಿ ಅದನ್ನು ದೆಹಲಿಯಲ್ಲಿ 30 ವರ್ಷಕ್ಕೆ ಹೆಚ್ಚಿಸುತ್ತದೆ. ಬಿಜೆಪಿ ಆಳ್ವಿಕೆಯ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಅರುಣಾಚಲ ಪ್ರದೇಶಗಳಲ್ಲಿ ಮದ್ಯಪಾನ ಮಾಡುವ ಕಾನೂನುಬದ್ಧ ವಯಸ್ಸು 21 ವರ್ಷ, ಬಿಜೆಪಿ ಆಡಳಿತದಲ್ಲಿರುವ ಗೋವಾದಲ್ಲಿ 18 ವರ್ಷ ಎಂದು ಅವರು ಹೇಳಿದರು.
ಅಂತೆಯೇ ಬ್ಲ್ಯಾಕ್ ಮಾರುಕಟ್ಟೆಗಳು ಮತ್ತು ಆರ್ಥಿಕ ದುರುಪಯೋಗವನ್ನು ರಕ್ಷಿಸುವ ಸಲುವಾಗಿ ಮದ್ಯ ಸೇವನೆಯ ವಯಸ್ಸನ್ನು ಕಡಿಮೆ ಮಾಡುವ ನಿರ್ಧಾರದ ವಿರುದ್ಧ ಬಿಜೆಪಿ ಮಾತನಾಡುತ್ತಿದೆ. 21 ವರ್ಷದೊಳಗಿನ ಯುವಕರು ರೆಸ್ಟೋರೆಂಟ್‌ಗಳು ಮತ್ತು ಪಬ್‌ಗಳಿಗೆ ಹೋದಾಗ, ಪೊಲೀಸರು ರೆಸ್ಟೋರೆಂಟ್ ಮಾಲೀಕರಿಂದ ಹಣವನ್ನು ಸುಲಿಗೆ ಮಾಡುತ್ತಾರೆ ಮತ್ತು ಅದು ‘ಉನ್ನತ’ ಮಟ್ಟದಲ್ಲಿ ಸಾಗುತ್ತದೆ. ಹೀಗಾಗಿ ‘ನಮ್ಮ ನಿರ್ಧಾರದಿಂದ, ಈ ದುಷ್ಕೃತ್ಯವನ್ನು ನಿಲ್ಲಿಸಲಾಗುವುದು ಮತ್ತು ಅದಕ್ಕಾಗಿಯೇ ಬಿಜೆಪಿ ಅಸಮಾಧಾನಗೊಂಡಿದೆ ಎಂದು ಹೇಳಿದ್ದಾರೆ.
ಇಡೀ ದೇಶದಲ್ಲಿಯೇ ಮದ್ಯ ಸೇವನೆಯ ವಯಸ್ಸನ್ನು 25ಕ್ಕೆ ನಿಗದಿ ಮಾಡುವ ಕಾನೂನನ್ನು ತರಲು ಬಿಜೆಪಿ ನಾಯಕರು ಕೇಂದ್ರ ಸರ್ಕಾರವನ್ನು ಕೇಳಬೇಕು, ಏಕೆಂದರೆ ಇದು ಏಕರೂಪತೆಯನ್ನು ತರುತ್ತದೆ. ಆದರೆ ಬಿಜೆಪಿ ತನ್ನ ಆಡಳಿತವಿರುವ ಯಾವುದೇ ರಾಜ್ಯದಲ್ಲೂ ಈ ನೀತಿ ತಂದಿಲ್ಲ. ಹೀಗಿದ್ದೂ ಆಪ್ ಸರ್ಕಾರದ ನಿರ್ಣಯಗಳನ್ನು ದೂಷಣೆ ಮಾಡುತ್ತಿದೆ. ಬಿಜೆಪಿಯ ಬೂಟಾಟಿಕೆಯನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಇಲ್ಲಿಯವರೆಗೆ ಯಾವುದೇ ರಾಜಕೀಯ ಪಕ್ಷದಲ್ಲಿ ಇಂತಹ ಬೂಟಾಟಿಕೆಗಳನ್ನು ಯಾರೂ ನೋಡಿಲ್ಲ. ಬಿಜೆಪಿಗೆ ನಾಚಿಕೆಯಿಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮದ್ಯ ಸೇವನೆಯ ಕಾನೂನು ಅನೇಕ ವರ್ಷಗಳಿಂದ 21 ವರ್ಷಕ್ಕೆ ಮಿತಿಗೊಳಿಸಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ ಸೇರಿದಂತೆ ಡಜನ್‌ಗಟ್ಟಲೆ ರಾಜ್ಯಗಳಲ್ಲಿ 21 ವರ್ಷವಾಗಿದೆ. ಮದ್ಯ ಸೇವನೆಗೆ ಕಾನೂನಾತ್ಮಕ ವಯಸ್ಸು 18 ವರ್ಷ ಇರುವ ಗೋವಾದಲ್ಲಿ ಬಿಜೆಪಿ 15 ವರ್ಷಗಳ ಕಾಲ ಆಡಳಿತ ನಡೆಸಿದೆ’ ಎಂದು ಹೇಳಿದರು.
‘ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಈ ವಯಸ್ಸನ್ನು 25 ವರ್ಷಕ್ಕೆ ಮರಳಿ ತರಲು ನಾನು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಮತ್ತು ವಿರೋಧ ಪಕ್ಷದ ನಾಯಕ ರಾಮವೀರ್ ಬಿಧುರಿ ಅವರಿಗೆ ಸವಾಲು ಹಾಕುತ್ತೇನೆ. ನಂತರ ನಾವು ಅದನ್ನು 30 ವರ್ಷಗಳನ್ನಾಗಿ ಮಾಡುತ್ತೇವೆ’. ಆದಾಯವನ್ನು ಕದಿಯಲು ಮತ್ತು ಕಪ್ಪು ವ್ಯಾಪಾರೋದ್ಯಮವನ್ನು ರಕ್ಷಿಸಲು ಬಿಜೆಪಿಯ ಪ್ರಯತ್ನ ಇದಾಗಿದೆ ಎಂದು ಅವರು ಆರೋಪಿಸಿದರು.
ಮದ್ಯ ಸೇವನೆಯ ಕನಿಷ್ಠ ವಯಸ್ಸನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸುವ ಹೊಸ ಅಬಕಾರಿ ನೀತಿಯನ್ನು ದೆಹಲಿ ಕ್ಯಾಬಿನೆಟ್ ಸೋಮವಾರ ಅಂಗೀಕರಿಸಿತ್ತು.
Click this button or press Ctrl+G to toggle between Kannada and English