ʼಕೊವಿಡ್‌ ಲಸಿಕೆ, ಸರ್ಕಾರಿ ವ್ಯವಸ್ಥೆ ಬಗ್ಗೆ ನಂಬಿಕೆ ಇರಲಿʼ – ಡಾ. ಅಣ್ಣಯ್ಯ ಕುಲಾಲ್

4:09 PM, Wednesday, March 24th, 2021
Share
1 Star2 Stars3 Stars4 Stars5 Stars
(No Ratings Yet)
Loading...

UCM ಮಂಗಳೂರು: ಕೊವಿಡ್‌ ಲಸಿಕೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಮನಸ್ಸಿಂದ ಹೊರಹಾಕಿ ಅರ್ಹರು ಲಸಿಕೆ ಹಾಕಿಸಿಕೊಳ್ಳೋಣ. ಸಾಂಕ್ರಾಮಿಕ ಕಲಿಸಿರುವ ಪಾಠದಿಂದ ಎಚ್ಚೆತ್ತು ಎರಡನೇ ಅಲೆಯನ್ನು ತಡೆಯೋಣ, ಎಂದು ಶ್ರೀನಿವಾಸ ವಿಶ್ವವಿದ್ಯಾನಿಲಯದ ಮುಖ್ಯ ಆರೋಗ್ಯಾಧಿಕಾರಿ ಮತ್ತು ಪ್ರಾಧ್ಯಾಪಕ ಡಾ. ಅಣ್ಣಯ್ಯ ಕುಲಾಲ್‌ ಕರೆ ನೀಡಿದ್ದಾರೆ.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್‌ಕ್ರಾಸ್‌, ಎನ್‌ಸಿಸಿ, ಎನ್‌ಎಸ್‌ಎಸ್‌ ಮತ್ತು ಇತರ ಸಂಘಗಳ ಆಶ್ರಯದಲ್ಲಿ ರವೀಂದ್ರ ಸಭಾಭವನದಲ್ಲಿ ಬುಧವಾರ ನಡೆದ ಕೊವಿಡ್‌- 19 ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಶಿಕ್ಷಕರು, ಎನ್‌ಸಿಸಿ, ಎನ್‌ಎಸ್‌ಎಸ್‌ ಸ್ವಯಂ ಸೇವಕರು ಮತ್ತು ಸಮಾಜ ಸೇವಕರು ಈಗ ಕೊವಿಡ್‌ ಯೋಧರಾಗಬೇಕು. ತಿಳುವಳಿಕೆ ಪಡೆದು ನಾವು ಮಾನಸಿಕವಾಗಿ ಬಲಿಷ್ಠರಾಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುತ್ತಿರುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಕೊವಿಡ್‌ ನಿಯಮಾವಳಿ ಪಾಲನೆ ಮೂಲಕ ಹಿರಿಯರನ್ನು ರಕ್ಷಿಸಿಕೊಳ್ಳಬೇಕು, ಎಂದರು.

ಕಂಪ್ಯೂಟರ್‌ ವಿಜ್ಞಾನದ ವಿಭಾಗದ ಮುಖ್ಯಸ್ಥ ಡಾ. ವೀರಭದ್ರಪ್ಪ ಮತ್ತು ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ. ಎನ್‌ ಕೆ ರಾಜಲಕ್ಷ್ಮಿ ಅವರು ಮಾತನಾಡಿ ಕೊವಿಡ್‌ ಎದುರಿಸಲು ಮಾನಸಿಕ ಸ್ಥೈರ್ಯ ಬೇಕು. ಒಂದು ಕ್ಷಣದ ಅಜಾಗರೂಕತೆಯೂ ಕೊವಿಡ್‌ ಆಹ್ವಾನ ನೀಡಬಹುದು ಎಂದ ಅವರು, ಕೊವಿಡ್‌ನ ಸಾಮಾಜಿಕ ಪರಿಣಾಮಗಳನ್ನು ವಿವರಿಸಿದರು. ಸೂಕ್ಷ್ಮಾಣುಜೀವಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಭಾರತಿ ಪ್ರಕಾಶ್‌, ಕೊವಿಡ್‌ ನಿಯಮಗಳನ್ನು ಪಾಲಿಸುವುದು ಎಲ್ಲರ ಜವಾಬ್ದಾರಿ, ಎಂದರು. ಪ್ರಾಂಶುಪಾಲ ಡಾ. ಎ ಹರೀಶ ಅಧ್ಯಕ್ಷತೆ ವಹಸಿದ್ದರು.

ಸಭಾ ಕಾರ್ಯಕ್ರಮ ನಿರ್ವಹಿಸಿದ ಕಾಲೇಜಿನ ಯುವ ರೆಡ್‌ಕ್ರಾಸ್‌ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಕುಮಾರಸ್ವಾಮಿ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಕೊವಿಡ್‌ ಲಸಿಕೆ ಬಗ್ಗೆ ಸ್ವಾನುಭವ ಹಂಚಿಕೊಂಡರು. ಬಳಿಕ ಯುವ ರೆಡ್‌ಕ್ರಾಸ್‌, ಎನ್‌ಸಿಸಿ, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಕೇಂದ್ರ ರೈಲ್ವೇ ನಿಲ್ದಾಣದವರೆಗೆ ಜಾಗೃತಿ ಜಾಥಾ ನಡೆಸಿ, ಮಾಸ್ಕ್‌ ವಿತರಿಸಿದರು.

ಎನ್‌ಸಿಸಿ ಅಧಿಕಾರಿಗಳಾದ ಡಾ. ಜಯರಾಜ್‌ ಎನ್‌ (ಭೂದಳ), ಡಾ. ಯತೀಶ್‌ ಕುಮಾರ್‌ (ನೌಕಾದಳ), ಎನ್‌ಎಸ್‌ಎಸ್‌ ಅಧಿಕಾರಿಗಳಾದ ಡಾ ಸುರೇಶ್‌, ಡಾ. ಗಾಯತ್ರಿ ಎನ್‌, ಮಂಗಳೂರು ವಿಶ್ವವಿದ್ಯಾನಿಲಯದ ರೆಡ್‌ಕ್ರಾಸ್‌ ನೋಡಲ್‌ ಅಧಿಕಾರಿ ಡಾ. ಗಣಪತಿ ಗೌಡ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English