ಮಂಗಳೂರು: ರಾಯಚೂರು ವಿಶ್ವ ವಿದ್ಯಾನಿಲಯದಲ್ಲಿ ಕುಲಪತಿ ಹುದ್ದೆ ಕೊಡಿಸುವುದಾಗಿ ಮಂಗಳೂರು ವಿವಿಯಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ವಿವೇಕ್ ಆಚಾರ್ಯ ಎಂಬವರನ್ನು ವಂಚಿಸಿದ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಪಡೆದು ವಂಚಿಸಿದ ಆರೋಪದ ಮೇರೆಗೆ ರಾಮ ಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರನನ್ನು ಪೊಲೀಸರು ಬಂಧಿಸಿದ್ದಾರೆ.
ರಾಮಸೇನೆಯ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷನಾಗಿರುವ ಪ್ರಸಾದ್ ಅತ್ತಾವರ ವಿವೇಕ ಆಚಾರ್ಯ ಎಂಬವರಿಗೆ ರಾಯಚೂರು ವಿಶ್ವ ವಿದ್ಯಾನಿಲಯದಲ್ಲಿ ಉಪ ಕುಲಪತಿ ಸ್ಥಾನ ಕೊಡಿಸುತ್ತೇನೆಂದು ಹೇಳಿ 17.5 ಲಕ್ಷ ರೂ. ಹಣವನ್ನು ಪಡೆದಿದ್ದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು ವಿವಿಯಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವಿವೇಕ್ ಆಚಾರ್ಯ ಉಪ ಕುಲಪತಿ ಆಗಲು ಎಲ್ಲ ಅರ್ಹತೆಗಳನ್ನು ಹೊಂದಿದ್ದರು. ಅಲ್ಲದೆ ಅದಕ್ಕಾಗಿ ಲಾಭಿ ನಡೆಸಿದ್ದರು. ಈ ವೇಳೆ, ಪ್ರಸಾದ್ ಅತ್ತಾವರ ತಾನು ಸಿಎಂ ಜೊತೆಗೆ ನಂಟು ಹೊಂದಿರುವುದಾಗಿ ಹೇಳಿಕೊಂಡು 15 ಲಕ್ಷ ಮತ್ತು ತನಗೆ ಅದಕ್ಕಾಗಿ ಓಡಾಡಲೆಂದು ಮತ್ತೆ ಎರಡೂವರೆ ಲಕ್ಷ ರೂ. ಹಣ ಪಡೆದಿದ್ದ. ಹಣ ಪಡೆದು ವರ್ಷದ ಮೇಲಾದರೂ ಕುಲಪತಿ ಹುದ್ದೆ ಕೊಡಿಸದ ಕಾರಣ ವಿವೇಕ್ ಆಚಾರ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಸಾದ್ ಅತ್ತಾವರ ವಿರುದ್ಧ ಈ ಹಿಂದೆ ಕಂಕನಾಡಿ ನಗರ ಠಾಣೆಯಲ್ಲಿ ರೌಡಿಶೀಟ್ ಬುಕ್ ಮಾಡಲಾಗಿತ್ತು. ಬಂದರು, ಕದ್ರಿ ಮತ್ತು ಕಂಕನಾಡಿ ಠಾಣೆಗಳಲ್ಲಿ ಈತನ ವಿರುದ್ಧ ಹಲವು ಕೇಸುಗಳಿವೆ. ಇದೀಗ ಕುಲಪತಿ ಸ್ಥಾನದ ಆಮಿಷವೊಡ್ಡಿ ಹಣ ಪಡೆದ ಆರೋಪದಲ್ಲಿ ಬಂಧಿಸಲಾಗಿದೆ. ಇದೇ ರೀತಿ ಹಲವರಿಂದ ಹಣ ಪಡೆದು ಮೋಸಗೈದಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು ಅದರ ಬಗ್ಗೆ ದೂರು ಬಂದಲ್ಲಿ ತನಿಖೆ ಮಾಡಲಾಗುವುದು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ
Click this button or press Ctrl+G to toggle between Kannada and English