1 ಟನ್‌ಗೆ 100 ರೂ. ನಂತೆ ಮರಳು ವಿತರಿಸಲು ಯೋಜನೆ : ಸಚಿವ ಮುರುಗೇಶ ನಿರಾಣಿ

12:21 AM, Friday, April 9th, 2021
Share
1 Star2 Stars3 Stars4 Stars5 Stars
(No Ratings Yet)
Loading...

niraniಮಂಗಳೂರು : ರಾಜ್ಯದಲ್ಲಿ ಹೊಸ ಗಣಿ ನೀತಿಯ ಕರಡು ಸಿದ್ಧವಾಗಿದ್ದು ಅತ್ಯಂತ ಕಡಿಮೆ ದರದಲ್ಲಿ ಮರಳು ದೊರಕಿಸುವ ಉದ್ದೇಶದಿಂದ  1 ಟನ್‌ಗೆ 100 ರೂ. ನಂತೆ ಮರಳು ವಿತರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಗುರುವಾರ ಇಲಾಖೆಯ ಪ್ರಗತಿ ಪರಿಶೀಲನೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಈ ಬಗ್ಗೆ ವಿವಿಧ ಕ್ಷೇತ್ರದ ತಜ್ಞರ ಅಭಿಪ್ರಾಯ ಪಡೆದು ಈ ತಿಂಗಳಾಂತ್ಯದೊಳಗೆ ಬಿಡುಗಡೆಗೊಳಿಸಲು ಉದ್ದೇಶಿಸಲಾಗಿದೆ. ಈ ನೀತಿಯಲ್ಲಿ ದ.ಕ., ಉಡುಪಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗ ಇರಲಿದೆ. 10 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ನಿರ್ಮಾಣ ಕಾರ್ಯಗಳಿಗೆ ಮತ್ತು  10 ಲಕ್ಷ ರೂ. ಗಿಂತ ಕಡಿಮೆ ಖರ್ಚಿನ ಮನೆ, ನಿರ್ಮಾಣ ಕಾರ್ಯಗಳಿಗೆ,  ಸರಕಾರಿ ಕಾಮಗಾರಿಗಳಿಗೆ ಪ್ರತ್ಯೇಕ ರಾಯಲ್ಟಿ ನಿಗದಿಪಡಿಸಲಾಗುವುದು. ಇದಕ್ಕೆ ಸಂಬಂಧಿಸಿದ ವಿಚಾರಗಳನ್ನು ಈ ಗಣಿ ನೀತಿಯಲ್ಲಿ ಸೇರಿಸಲಾಗಿದೆ ಎಂದು ಮುರುಗೇಶ್ ನಿರಾಣಿ ನುಡಿದರು.

ಶಿವಮೊಗ್ಗ, ಚಿಕ್ಕಬಳ್ಳಾಪುರ ಗಣಿಗಾರಿಕೆ ಪ್ರದೇಶದೊಳಗೆ ಸಾಗಾಟದ ವೇಳೆ ಸ್ಪೋಟ ನಡೆದ ಕಾರಣ ಸ್ಥಗಿತಗೊಳಿಸಲಾಗಿದ್ದ ಇತರ ಗಣಿಗಾರಿಕೆಗಳ ಕಾರ್ಯಾರಂಭಕ್ಕೆ ಆದೇಶಿಸಲಾಗಿದೆ ಎಂದ ಸಚಿವರು, ಗಣಿಗಾರಿಕೆಗೆ ಪರವಾನಗಿ ನೀಡುವಾಗ ಎನ್‌ಒಸಿ ಪಡೆಯಲು ಹಲವು ಕಚೇರಿಗಳಿಗೆ ಹೋಗುವುದನ್ನು ತಪ್ಪಿಸಲು ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಲಾಗುವುದು ಎಂದರು.

ಗಣಿಗಾರಿಕೆ ಕ್ಷೇತ್ರದ ಸಮಸ್ಯೆ ಮತ್ತು ಇದರಿಂದ ಜನರಿಗೆ ಆಗುವ ಸಮಸ್ಯೆಗಳನ್ನು ನಿವಾರಿಸಲು ರಾಜ್ಯದ ಐದು ಕಡೆಗಳಲ್ಲಿ ಗಣಿ ಅದಾಲತ್ ನಡೆಸಲಾಗುವುದು. ಎ.30ರಂದು ಬೆಂಗಳೂರಿನಲ್ಲಿ ಅದಾಲತ್ ನಡೆಸಲಾಗುತ್ತಿದ್ದು, ಬಳಿಕ ರಾಜ್ಯದ ನಾಲ್ಕೂ ವಿಭಾಗಗಳಲ್ಲಿ ನಡೆಯಲಿದೆ. ಸಮಸ್ಯೆಗಳ ಬಗ್ಗೆ ಮನವಿ ನೀಡಿದರೆ ಅದಾಲತ್‌ನಲ್ಲಿ ಸ್ಥಳದಲ್ಲೇ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನಿರಾಣಿ ತಿಳಿಸಿದರು.

ಚಿನ್ನದ ನಾಣ್ಯ: ಹಟ್ಟಿಯಲ್ಲಿರುವ ಚಿನ್ನದ ಗಣಿಯನ್ನು ಕರ್ನಾಟಕ ರಾಜ್ಯ ಹಟ್ಟಿ ಚಿನ್ನದ ಕಂಪೆನಿ ಎಂದು ಮರುನಾಮಕರಣ ಮಾಡಿ ರಾಜ್ಯದ್ದೇ ಆದ ಚಿನ್ನದ ಬ್ರಾಂಡ್ ರೂಪಿಸಲು ಉದ್ದೇಶಿಸಲಾಗಿದೆ. ಚಿನ್ನದ ಗಟ್ಟಿಯ ಬದಲಾಗಿ ರಾಷ್ಟ್ರ ಲಾಂಛನ, ವಿವಿಧ ಕ್ಷೇತ್ರಗಳ ಮಹಾಪುರುಷರ ಭಾವ ಚಿತ್ರಗಳುಳ್ಳ ಚಿನ್ನದ ನಾಣ್ಯಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ನಿರಾಣಿ ಹೇಳಿದರು.

ನೌಕರರಿಗೆ ಸಮವಸ್ತ್ರ: ಗಣಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಗಣಿಗಾರಿಕೆ ಪ್ರದೇಶಗಳಿಗೆ ಕಾರ್ಯಾಚರಣೆಗೆ ತೆರಳುವಾಗ ಅವರನ್ನು ಗುರುತಿಸದೆ ಸಮಸ್ಯೆಯಾಗುತ್ತದೆ. ಅದಕ್ಕಾಗಿ ಗಣಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಪೊಲೀಸ್, ಅರಣ್ಯ ಇಲಾಖೆಯಂತೆ ರ್ಯಾಂಕ್ ಆಧರಿಸಿಕೊಂಡು ಸಮವಸ್ತ್ರ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಕೇಂದ್ರೀಕೃತ ಜಿಪಿಎಸ್, ವಾಕಿಟಾಕಿ ನೀಡುವುದಕ್ಕೂ ತೀರ್ಮಾನಿಸಲಾಗಿದೆ ಎಂದು ಮುರುಗೇಶ್ ನಿರಾಣಿ ಹೇಳಿದರು.

ದ.ಕ. ಉಡುಪಿ ಜಿಲ್ಲೆಯಲ್ಲಿ ಕಲ್ಲು ಗಣಿಗಳು ಬಹುತೇಕ 2 ಎಕರೆಗಿಂತ ಕಡಿಮೆ ಪ್ರದೇಶದಲ್ಲಿರುವ ಕಾರಣ ಅಂತಹ ಕಡೆಗೆ ಸ್ಫೋಟಕ ಲೈಸೆನ್ಸ್ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಹಾಗಾಗಿ ಜಲ್ಲಿಕಲ್ಲು ಸಮಸ್ಯೆ ಉಂಟಾಗದು. ರಾಜ್ಯದಲ್ಲಿ ಜೆಲಟಿನ್ ಸ್ಪೋಟ ಉಂಟಾದ ಕಾರಣ ದೊಡ್ಡ ಗಣಿಗಳು ಕಡ್ಡಾಯವಾಗಿ ಡಿಜಿಎಂಎಸ್ ಲೈಸೆನ್ಸ್ ಪಡೆದುಕೊಳ್ಳಬೇಕೆಂದು ಸೂಚಿಸಲಾಗಿದೆ. ಅದರಲ್ಲಿ 2 ಎಕ್ರೆ ಕೆಳಗಿನ ಗಣಿಗಳಿಗೆ ವಿನಾಯಿತಿ ಇದೆ. ಇತರರು 90 ದಿನದೊಳಗೆ ಲೈಸೆನ್ಸ್ ಪಡೆದುಕೊಳ್ಳಬೇಕಾಗುತ್ತದೆ ಎಂದು ನಿರಾಣಿ ಹೇಳಿದರು.

ವಿಷನ್ 2050: ವಿವಿಧ ಕ್ಷೇತ್ರದ ತಜ್ಞರನ್ನು ಒಳಗೊಂಡ ಸಮಿತಿಯ ಮೂಲಕ ಮುಂದಿನ 30 ವರ್ಷಗಳಲ್ಲಿ ಗಣಿ ನಿರ್ವಹಣೆ ಹೇಗಿರಬೇಕು? ಹೂಡಿಕೆಯನ್ನು ಹೇಗೆ ಆಕರ್ಷಿಸಬೇಕು? ಅಭಿವೃದ್ಧಿ, ಪರಿಸರ ರಕ್ಷಣೆ, ಪರ್ಯಾಯದ ಬಗ್ಗೆ ‘ವಿಷನ್-2050’ ಅನ್ನು ಸಿದ್ಧಪಡಿಸಲಾಗುವುದು ಎಂದರು.

ಕೇಂದ್ರ ಗಣಿ ಮಹಾವಿದ್ಯಾಲಯವನ್ನು ಸಂಡೂರು ಅಥವಾ ಚಿತ್ರದುರ್ಗದಲ್ಲಿ ಸ್ಥಾಪಿಸುವ ಚಿಂತನೆ ಇದೆ. ಇಲ್ಲಿ ಗಣಿ ಕುರಿತ ಸಮಗ್ರ ಅಧ್ಯಯನ, ತರಬೇತಿ, ಕೋರ್ಸ್‌ಗಳು ಇರಲಿವೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English