ಬಸವಕಲ್ಯಾಣ : ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಚಂಡ ಜಯಸಾದಿಸಲಿದ್ದಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಇಂದು ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರಕ್ಕೆ ನಡೆದಿರುವ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶರಣು ಸಲಗಾರ ಅವರ ಪರವಾಗಿ ರಾಜ್ಯ ಬಿಜೆಪಿ ಪ್ರಭಾರಿ ಅರುಣ ಸಿಂಗ್ ಹಾಗೂ ಪಕ್ಷದ ಹಿರಿಯ ಮುಖಂಡರು ಹಾಗೂ ಸಚಿವರೊಂದಿಗೆ ನಗರದಲ್ಲಿ ಮತಯಾಚನೆ ಮಾಡಿದ ಕೇಂದ್ರ ಸಚಿವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಬದ್ಧತೆಯನ್ನು ಹೊಂದಿರುವ ಪಕ್ಷ ಭಾರತೀಯ ಜನತಾ ಪಾರ್ಟಿ. ಪ್ರಜಾತಂತ್ರದ ಪ್ರಮುಖ ಆಧಾರ ಸ್ಥಂಭಗಳಾದ ಅಭಿವೃದ್ಧಿ ಹಾಗೂ ಸುಶಾನದಲ್ಲಿ ಬಿಜೆಪಿಗೆ ನಂಬಿಕೆಯಿದೆ. ಭ್ರಷ್ಟಾಚಾರ ಮುಕ್ತ ಆಡಳಿತವಾಗಿರಬಹುದು ಅಥವಾ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯ ರದ್ದತಿಯೇ ಇರಬಹುದು – ಜನರಿಗೆ ನೀಡಿದ ಭರವಸೆಯನ್ನು ನೆರವೇರಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿಯೂ ಅಷ್ಟೆ. ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಸಾಮಾಜದ ಎಲ್ಲ ಸ್ತರಗಳ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿದೆ. ನೀರಾವರಿ, ರೇಲ್ವೆಯಂತಹ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿದೆ. ಇನ್ನೆರಡು ವರ್ಷಗಳಲ್ಲಿ ಬಸವಕಲ್ಯಾಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿ ಮುಖ್ಯಮಂತ್ರಿಯವರೂ ಭರವಸೆ ನೀಡಿದ್ದಾರೆ. ಮತದಾರ ಬಂಧುಗಳು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಹರಸಬೇಕು ಎಂದು ಸದಾನಂದ ಗೌಡ ವಿನಂತಿಸಿದರು.
ಬಿಜೆಪಿ ಸರ್ಕಾರದ ಬಗ್ಗೆ ಸುಖಾಸುಮ್ಮನೆ ಟೀಕಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸದಾನಂದ ಗೌಡ ತರಾಟೆಗೆ ತೆಗೆದುಕೊಂಡರು.
ಕೇವಲ ಟೀಕೆ ಮೂಲಕವೇ ಏನೋ ರಾಜಕೀಯ ಬದಲಾವಣೆ ತರುತ್ತೇವೆ ಎಂಬ ಭ್ರಮೆ ಕಾಂಗ್ರೆಸ್ ನಾಯಕರಿಗಿದೆ. ಅವರಿಗೆ ಟೀಕೆ ಮಾಡುವುದೊಂದು ಚಟ. ವಿಶೇಷವಾಗಿ ಸಿದ್ದರಾಮಯ್ಯ ಅವರಿಗೆ ಈ ಚಟ ವಿಪರೀತವಾಗಿದೆ. ರಚನಾತ್ಮಕ ಸಲಹೆಗಳನ್ನು ಕೊಡುವುದನ್ನು ಬಿಟ್ಟು ಕೀಳುಮಟ್ಟದ ರಾಜಕೀಯದಲ್ಲಿ ತೊಡಗಿದ್ದಾರೆ. ಮೊದಲು ಇವರು ಡಿ ಕೆ ಶಿವಕುಮಾರ್ ಅವರೊಂದಿಗೆ ಇರುವ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡಿಕೊಳ್ಳಲಿ. ಕಾಂಗ್ರಸ್ ಒಂದು ಒಡೆದ ಮನೆ. ಎಂದಿಗೂ ಒಂದಾಗುವುದಿಲ್ಲ. ಬೇರೆಯವರ ತಟ್ಟೆಯಲ್ಲಿ ನೊಣವನ್ನು ಹುಡುಕುವ ಮೊದಲು ಕಾಂಗ್ರಸ್ಸಿಗರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ನೋಡಿಕೊಳ್ಳಲಿ. ಜನ ಕಾಂಗ್ರೆಸ್ ದೊಂಬರಾಟ, ಪುಂಡಾಟಿಕೆ ನೋಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಇಂದು ಯಾವ ಸ್ಥಿತಿಯಲ್ಲಿದೆ? ಅದಕ್ಕೆ ಯಾವುದೇ ತತ್ವಾದರ್ಶವಿಲ್ಲ, ಪ್ರಜಾತಂತ್ರ ಮೌಲ್ಯಕ್ಕೆ ಗೌರವವಿಲ್ಲ. ನಾಯಕತ್ವವೂ ಇಲ್ಲ. ಕಾಂಗ್ರೆಸ್ ಇಂದು ತೀವ್ರ ನಿಗಾ ಘಟಕದಲ್ಲಿ (ಐಸಿಯು) ತನ್ನ ಕೊನೆಕ್ಷಣಗಳನ್ನು ಗಣನೆ ಮಾಡುತ್ತಿದೆ ಎಂದು ಬಿಜೆಪಿ ನಾಯಕ ಅಭಿಪ್ರಾಯಪಟ್ಟರು .
ರಸಗೊಬ್ಬರ ಬೆಲೆಯೇರಿಕೆ ಬಗ್ಗೆ ಪ್ರಸ್ತಾಪಿಸಿದ ಕೇಂದ್ರ ಸಚಿವರು – ಈ ಬಗ್ಗೆ ಚರ್ಚಿಸಲು ನಾಳೆ (ಸೋಮವಾರ) ದೆಹಲಿಯಲ್ಲಿ ಕಾರ್ಖಾನೆ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ರೈತರ ಹಿತ ಕಾಪಾಡಲು ಕೇಂದ್ರವು ಎಲ್ಲ ಕ್ರಮ ಕೈಗೊಳ್ಳುವುದು ಎಂದರು.
Click this button or press Ctrl+G to toggle between Kannada and English