ಹೊಸ ವರುಷದ ಹರುಷ ತಂದ ಯುಗಾದಿ

6:14 PM, Tuesday, April 13th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

ugadi
ಹಿಂದೂ ಧರ್ಮದ ಪ್ರಕಾರ ಚೈತ್ರ ಮಾಸದಿಂದ ಹೊಸವರ್ಷ ಆರಂಭವಾಗುತ್ತದೆ ಚೈತ್ರಮಾಸದ ಮೊದಲ ದಿನವೇ ಯುಗಾದಿ. ಯುಗಾದಿ ಪದದ ಉತ್ಪತ್ತಿಯು ಯುಗ+ಆದಿ ಇಂದ ಆಗಿದ್ದು ಹೊಸ ವರ್ಷದ ಆರಂಭ ಎಂಬ ಅರ್ಥ ನೀಡುತ್ತದೆ.

ಯುಗಾದಿ ಹಬ್ಬವು ಚೈತ್ರಮಾಸದ ಶುಕ್ಲಪಕ್ಷದ ಪಾಡ್ಯದಂದು ಬರುತ್ತದೆ, ಯುಗಾದಿಯನ್ನು ಚಂದ್ರಮಾನ ಮತ್ತು ಸೌರಮಾನ ಹೀಗೆ ಎರಡು ಬಗೆಯಲ್ಲಿ ಆಚರಿಸುವ ಪದ್ಧತಿ ಇದೆ. ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ಧತಿಗೆ ಚಂದ್ರಮಾನ ಯುಗಾದಿಯನ್ನುವರು ಹಾಗೂ ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುವರು, ದಕ್ಷಿಣ ಭಾರತದಲ್ಲಿ ಚಂದ್ರಮಾನವನ್ನು ಅನುಸರಿಸಿ ಚೈತ್ರ ಶುದ್ಧಪಾಡ್ಯಮಿಯಂದು ಯುಗಾದಿ ಆಚರಿಸುವರು.

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತುಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ, ತಮಿಳುನಾಡು, ಕೇರಳದಲ್ಲಿ ಸೌರಮಾನ ಯುಗಾದಿ ಆಚರಿಸುವರು. ಉತ್ತರ ಭಾರತದಲ್ಲಿ ಕಾರ್ತಿಕ ಶುದ್ಧಪಾಡ್ಯಮಿಯನ್ನು ಯುಗಾದಿಯೆನ್ನುವರು. ಈ ಹಬ್ಬವನ್ನು ಭಾರತದಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸುವರು, ಕರ್ನಾಟಕದಲ್ಲಿ ಯುಗಾದಿ ಮಹಾರಾಷ್ಟ್ರದಲ್ಲಿ ಗುಢಿಪಾಡವಾ, ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಲ್ಲಿ ಹೊಸವರ್ಷದ ಹಬ್ಬವೆಂದು ಉತ್ತರ ಭಾರತದಲ್ಲಿ ಬೈಸಾಖಿ ಎಂದು ಆಚರಿಸುವರು.

ಈ ದಿನವು ಐತಿಹಾಸಿಕ ವಿಶೇಷತೆಗಳ ದಿನವಾಗಿದೆ, ಶ್ರೀರಾಮನು ರಾವಣನನ್ನು ಸಂಹರಿಸಿ ಹಿಂದಿರುಗಿದ ನಂತರ ಅಯೋಧ್ಯೆಯಲ್ಲಿ ಆತನಿಗೆ ಪಟ್ಟಾಭಿಷೇಕವಾದ ದಿನ. ಚೈತ್ರ ಶುದ್ಧ ಪಾಡ್ಯದಂದು ಸೂಯರ್ೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದ ಮತ್ತು ಅಂದಿನಿಂದ ಕಾಲಗಣನೆಗಾಗಿ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಗಳನ್ನು ಏರ್ಪಡಿಸಿದ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಯುಗಾದಿ ದಿನದಂದು ಸ್ನಾನದ ನೀರಿನಲ್ಲಿ ಬೇವಿನೆಲೆ ಬೆರೆಸಿ ಸ್ನಾನ ಮಾಡುವುದು, ಹೊಸ ಬಟ್ಟೆ ಧರಿಸುವುದು, ಮನೆಯನ್ನು ತಳಿರು-ತೋರಣಗಳಿಂದ ಅಲಂಕರಿಸುವುದು, ದೇವಸ್ಥಾನಕ್ಕೆ ಹೋಗಿ ಬರುವುದು, ಬೇವು-ಬೆಲ್ಲ ಸೇವಿಸುವುದು ವಿಶೇಷ.

ಬೇವು ಬೆಲ್ಲಗಳನ್ನು ಸಮನಾಗಿ ಸೇವಿಸುವುದರ ಅರ್ಥ ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಸಮವಾಗಿ ತೆಗೆದುಕೊಳ್ಳುತ್ತೇವೆ ಎಂದು ದೃಢನಿಶ್ಚಯ ಮಾಡಿಕೊಂಡಂತೆ. ಬೆಲ್ಲ ನಾಲಿಗೆಗೆ ಸಿಹಿ ನೀಡಿ ದೇಹದಲ್ಲಿ ಉಷ್ಣದ ಪ್ರಮಾಣವನ್ನು ಹೆಚ್ಚಿಸುತ್ತದೆ, ಬೇವು ನಾಲಿಗೆಗೆ ಕಹಿ ಆದರೂ ದೇಹವನ್ನು ತಂಪು ಮಾಡುತ್ತದೆ.

ಯುಗಾದಿ ಹಬ್ಬವನ್ನು ಮಾನವರಷ್ಟೇ ಅಲ್ಲದೆ, ಇಡೀ ಪ್ರಕೃತಿಯು ಆಚರಿಸುವುದನ್ನು ನಾವು ಕಾಣಬಹುದು. ಕೋಗಿಲೆಯ ಇಂಪಾದ ಧ್ವನಿ ಕಿವಿಗೆ ಬೀಳುತ್ತದೆ. ಎಲ್ಲಾ ಗಿಡಮರಗಳು ಚಿಗುರೊಡೆದು ಹಸಿರನ್ನು ಹೊತ್ತು ನಿಲ್ಲುತ್ತವೆ, ಮಾವಿನಹಣ್ಣಿನ ಸ್ವಾಧ ಸವಿಯುವ ಸುಸಂದರ್ಭ ವದಗಿಬರುತ್ತದೆ. ಪ್ರಕೃತಿ ಮಾತೆಯು ಹಸಿರು ಸೀರೆಯುಟ್ಟು ಅತ್ಯಂತ ಸಂಭ್ರಮದಿಂದ ಇರುವಂತೆ ಕಾಣುತ್ತದೆ. ಹಬ್ಬದ ಆಚರಣೆಯ ಸಂಭ್ರಮದಲ್ಲಿ ನಾವು ಪ್ರಕೃತಿಯೊಂದಿಗೆ ಬೆರೆತು, ಪಾಕೃತಿಕ ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕಂಡು ಆನಂದಿಸುವ ಸಮಯ ಇದಾಗಿರುತ್ತದೆ.

ಹಿಂದಿನ ವರ್ಷದ ಕೊನೆ ಹಬ್ಬ ಹೋಳಿ ಎಂದು ಕಾಮಣ್ಣನ ದಹನದಲ್ಲಿ ನಮ್ಮಲ್ಲಿರುವ ಎಲ್ಲಾ ಕೆಟ್ಟ ವಿಚಾರಗಳನ್ನು ಸುಟ್ಟು ಯುಗಾದಿಯ ಹೊಸವರ್ಷದ ಆರಂಭದಂದಯ ಹೊಸ ಜೀವನವನ್ನು ಜೀವಿಸಲು, ಆನಂದದಿಂದ ಹೊಸವರ್ಷವನ್ನು ಸ್ವಾಗತಿಸಿ ಕೊಳ್ಳುವ ಸುದಿನ ಈ ಯುಗಾದಿ.

ಈ ಹೊಸ ವರ್ಷದ ದಿನದಂದು ವಿವಿಧೆಡೆ ದೇವರ ರಥೋತ್ಸವ ಮಾಡಲಾಗುತ್ತದೆ, ಅತ್ಯಂತ ಸುಂದರವಾಗಿ ಕಣ್ಮನ ಸೆಳೆಯುವಂತೆ ಹೂವುಗಳಿಂದ ಇಡೀ ದೇವಾಲಯ ಮತ್ತು ರಥವನ್ನು ಅಲಂಕರಿಸಲಾಗಿರುತ್ತದೆ, ತಿಂಗಳ ಆರಂಭದಿಂದಲೇ ಜಾತ್ರೆಗೆ ಸಕಲ ಸಿದ್ದತೆಗಳು ಜರುಗುತ್ತಿರುತ್ತವೆ, ವಾರಪೂರ್ತಿ ಅನುಭವಿಗಳಾದ ಬೇರೆ-ಬೇರೆ ಮಠಗಳಿಂದ ಪ್ರವಚನ ನೀಡಲು ಗುರುಗಳನ್ನು ಆಹ್ವಾನಿಸಲಾಗಿರುತ್ತದೆ, ಅವರು ಹೇಳುವ ಜೀವನ ಮೌಲ್ಯಗಳು ಮತ್ತು ನೀತಿಗಳನ್ನು ಸರಿಯಾಗಿ ಗ್ರಹಿಸಿ, ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ಯಾಂತ್ರಿಕ ಜೀವನಕ್ಕೆ ಹೊಂದಿಕೊಂಡು ಯಂತ್ರಗಳಂತೆ ಜೀವಿಸುತ್ತಿರುವ ನಮ್ಮನ್ನು ಆಧ್ಯಾತ್ಮಿಕ ಶಾಂತತೆಯಡೆಗೆ ಕರೆದೊಯ್ಯುವುದಲ್ಲದೆ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಲು ಅವರ ಹಿತನುಡಿಗಳು ಸಹಾಯಕವಾಗುತ್ತವೆ.

ಇನ್ನೊಂದು ಕಡೆ ಜಾತ್ರೆಯಲ್ಲಿರುವ ಆಟಿಕೆಗಳು ಮಕ್ಕಳನ್ನು ಸೆಳೆಯುತ್ತವೆ, ಸಂಜೆ ತೇರು ಎಳೆಯುವ ಹೊತ್ತಿಗೆ ತಿರುಗುವ ತೊಟ್ಟಿಲಲ್ಲಿ (ಗಾಣ) ಕುಳಿತು ಸೂರ್ಯಾಸ್ತದ ಸಮಯದಲ್ಲಿ ಅದನ್ನು ನೋಡುವುದು ಎಲ್ಲಕ್ಕಿಂತ ಖುಷಿಯ ವಿಚಾರ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ರಥೋತ್ಸವ ಮಾಡುವ ಪದ್ಧತಿ ರೂಢಿಯಲ್ಲಿದೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ಯುಗಾದಿ ಪಾಡ್ಯಮಿಯ ದಿನದಂದು ಜರುಗುವ ಉಣಕಲ್ ಗ್ರಾಮದ ಸಿದ್ದಪ್ಪಜ್ಜನವರ ರಥೋತ್ಸವವನ್ನು ನೋಡುವುದೇ ಒಂದು ಭಾಗ್ಯ. ಪ್ರತಿವರ್ಷವೂ ಸಾಗರೋಪಾದಿಯಲ್ಲಿ ಭಕ್ತಾದಿಗಳು ನೆರೆದು ವಿಜೃಂಭಣೆಯಿಂದ ಉತ್ಸವದಲ್ಲಿ ಭಾಗಿಯಾಗಿ ಸಿದ್ದಪ್ಪಜ್ಜನವರ ಕೃಪೆಗೆ ಪಾತ್ರರಾಗುತ್ತಾರೆ. ಅಜ್ಜನವರಿಗೆ ಅಭಿಷೇಕ ಮಾಡಿಸಿ, ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಿ, ರಥ ಎಳೆದು ಸಂಭ್ರವಿಸುತ್ತಾರೆ.

ಪ್ರತಿವರ್ಷವೂ ಯುಗಾದಿಯನ್ನು ಅತ್ಯಂತ ಸಂಭ್ರಮ-ಸಂತೋಷಗಳಿಂದ ಬರಮಾಡಿಕೊಳ್ಳುತ್ತಿದ್ದ ನಮ್ಮ ಸಂತೋಷಕ್ಕೆ ಈಗ ಕೊರೋನಾದಿಂದಾಗಿ ಅಲ್ಪವಿರಾಮ ಬಿದ್ದಿರುವುದು ಖಂಡಿತವಾಗಿಯೂ ವಿಷಾದಕರ ಸಂಗತಿ. ಕೊರೋನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯನ್ವಯ ಜಾತ್ರೆ ಮಾಡುವಂತಿಲ್ಲ, ಜನರು ಗುಂಪುಗುಂಪಾಗಿ ಸೇರುವಂತಿಲ್ಲ, ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದೊಂದಿಗೆ ಸರಳವಾಗಿ ಈ ಯುಗಾದಿ ಆಚರಿಸಬೇಕಾಗಿದೆ.

ಮನೆ ಮಂದಿಯೊಂದಿಗೆ ವೈಭವರಹಿತವಾಗಿ ಸರಳವಾಗಿ ಮನೆಯಲ್ಲಿಯೇ ತಯಾರಿಸಿದ ಬೇವು-ಬೆಲ್ಲ, ಹೋಳಿಗೆ ಸವಿದು ಜವಾಬ್ದಾರಿಯುತ ಪ್ರಜೆಗಳಾಗಿ ನಮ್ಮೊಂದಿಗಿರುವವರಿಗೂ ಮಾದರಿಯಾಗಬೇಕಿದೆ. ಕೊರೋನಾ ಮಹಾಮಾರಿಯ ಎರಡನೇ ಅಲೆ ಕಾಣಿಸಿಕೊಳ್ಳುತ್ತಿರುವ ಕಾರಣ ನಾವು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರುವುದು ಅತಿ ಅವಶ್ಯಕವಾಗಿದೆ. ಈ ವರ್ಷ ದೇವರನ್ನು ಮನದಲ್ಲಿಯೇ ಭಕ್ತಿಯಿಂದ ನೆನೆದು ಸಂತೋಷದಿಂದ ಸರಳತೆಯಿಂದ ಹಬ್ಬವನ್ನು ಆಚರಿಸೋಣ.

ಬರುತ್ತಿರುವ ಈ ಹೊಸ ವರ್ಷ ಹೆಚ್ಚು ಸಿಹಿಯನ್ನು ಹೊತ್ತು ತರಲಿ, ಮಹಾಮಾರಿಯು ನೀಡುತ್ತಿರುವ ಕಹಿಯಿಂದ ಮನುಕುಲದ ಪ್ರಾಣ ಕಾಪಾಡಲಿ, ಸಂತಸ-ಸಂಭ್ರಮಗಳಿಂದ ಮುಂಬರುವ ಯುಗಾದಿ ಆಚರಿಸುವಂತಾಗಲಿ, ಮುಂಬರುವ ವರ್ಷಗಳಲ್ಲಿ ವಿಜ್ರಂಭಣೆಯಿಂದ ಜಾತ್ರೆ ಮಾಡಿ, ರಥ ಎಳೆದು, ತಿರುಗುವ ತೊಟ್ಟಿಲಲ್ಲಿ ಕುಳಿತು, ಎಲ್ಲಾ ಆಪ್ತರೂ ಒಟ್ಟುಗೂಡಿ ಖುಷಿಯಿಂದ ಹಬ್ಬ ಆಚರಿಸಲಿ, ಬೇವು ಬೆಲ್ಲದೊಂದಿಗೆ ಹೋಳಿಗೆ ರುಚಿಯನ್ನು ಸವಿಯಲಿ. ಮನಕ್ಕಾವರಿಸಿದ ಕಹಿಯನ್ನು ಶಾಶ್ವತವಾಗಿ ಮರೆಯುವಂತಾಗಲಿ, ಯುಗ-ಯುಗಗಳು ಕಳೆದರೂ ಮರಳಿ ಹೊಸತನವನ್ನು ತರಿತ್ತಿರುವ ಯುಗಾದಿ ಮಾನವಕುಲದ ಕೋರಿಕೆಯನ್ನು ಕಂಡಿತವಾಗಿಯೂ ಈಡೇರಿಸಲಿ.

ಯುಗಾದಿ ಹಬ್ಬ ಎಲ್ಲರಿಗೂ ಒಳಿತನ್ನು ತರಲಿ. ಈಗಿನ ಪರಿಸ್ಥಿತಿಗೆ ಔಷಧಿಯಾಗಲಿ, ಮುಂದಿನ ಸಂತೋಷದ ಕಾಲಕ್ಕೆ ಮುನ್ನುಡಿಯಾಗಲಿ ಎಂದು ಪ್ರಾರ್ಥಿಸುತ್ತಾ ಹೊಸವರ್ಷವನ್ನು ಬರಮಾಡಿಕೊಳ್ಳೋಣ.

ಲೇಖನ : ಮೇಘನಾ ಪಾಟೀಲ

megana

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English