ಶಿರೂರು ಮಠದ ಉತ್ತರಾಧಿಕಾರಿ ಘೋಷಣೆ, ಮೇ.14ರಂದು ಪಟ್ಟಾಭಿಷೇಕ

10:49 PM, Wednesday, April 21st, 2021
Share
1 Star2 Stars3 Stars4 Stars5 Stars
(No Ratings Yet)
Loading...

Anirudha ಉಡುಪಿ : ಶಿರೂರು ಮಠದ ಉತ್ತರಾಧಿಕಾರಿಯಾಗಿ ಅನಿರುದ್ಧ ಸರಳತ್ತಾಯ, ಎಂಬ ವಟುವನ್ನು ಆಯ್ಕೆ ಮಾಡಲಾಗಿದೆ ಎಂದು ಶಿರೂರು ಮಠದ ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರು ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿ ಘೋಷಣೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀವಿಶ್ವವಲ್ಲಭ ತೀರ್ಥರು ವಟು ಅನಿರುದ್ಧ 10ನೇ ತರಗತಿಯಲ್ಲಿ ವ್ಯಾಸಂಗ ಪೂರೈಸಿದ್ದು, ಬಾಲ್ಯದಿಂದಲೇ ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿ ಹೊಂದಿದ್ದರು. ತಾನೇ ಸ್ವತಃ ಶೀರೂರು ಮಠಕ್ಕೆ ಯತಿಯಾಗಿ ತೆರಳುವೆನೆಂದು ತನ್ನ ಅಭಿಪ್ರಾಯವನ್ನು ತಂದೆಯ ಬಳಿ ವ್ಯಕ್ತಪಡಿಸಿದ್ದರು. ಈ ವೇಳೆ ಜಾತಕ ವಿಮರ್ಶಿಸಿದಾಗ ಪೀಠಾಧಿಪತ್ಯದ ಯೋಗ ಇದೆ ಎಂದು ತಿಳಿಯಿತು ಎಂದು ಹೇಳಿದರು.

ಶಿರಸಿ ಬಳಿಯಿರುವ ಸೋಂದೆ ಮೂಲ ಮಠದಲ್ಲಿ ಮೇ11ರಿಂದ 14ರವರೆಗೆ ಸನ್ಯಾಸ ಸ್ವೀಕಾರ, ಪಟ್ಟಾಭಿಷೇಕ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ. ಮೇ.13ರ ಬೆಳಗ್ಗೆ 7.30ರಿಂದ 8 ಗಂಟೆಯೊಳಗಿನ ಮುಹೂರ್ತದಲ್ಲಿ ಸನ್ಯಾಸ ಸ್ವೀಕಾರ ನಡೆಯಲಿದೆ. ಮೇ.14ರಂದು ಮಧ್ಯಾಹ್ನ 12.35ರಿಂದ 12.50ರ ಅಭಿಜಿನ್ ಮುಹೂರ್ತದಲ್ಲಿ ಶೀರೂರು ಮಠದ 31ನೇ ಮಠಾಧಿಪತಿಯಾಗಿ ಪಟ್ಟಾಭಿಷೇಕ ನಡೆಯಲಿದೆ.

ನಮಗೆ ಅನಿರುದ್ಧ ಏಕೈಕ ಪುತ್ರನಾದರೂ, ಆತನ ಜಾತಕ ನೋಡಿದಾಗಲೇ ಆತನಲ್ಲಿ ಯತಿ ಧರ್ಮ ಹಾಗೂ ಶಾಸ್ತ್ರ ಅಧ್ಯಯನ ಇರುವುದು ಕಂಡುಬಂದಿತ್ತು. ಬಹಳಷ್ಟು ಮಂದಿಗೆ ಇದನ್ನು ತೋರಿಸಿದಾಗ ಅವರೂ ಇದೇ ಅಭಿಪ್ರಾಯ ನೀಡಿದರು. ಹೀಗಾಗಿ ಮಗನ ಸನ್ಯಾಸ ಸ್ವೀಕಾರಕ್ಕೆ ನಾವು ಮಾನಸಿಕವಾಗಿ ಸಿದ್ಧರಾಗಿದ್ದೆವು.’ ಎಂದು ಶಿರೂರು ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಉಡುಪಿಯ ಅನಿರುದ್ಧ ಸರಳತ್ತಾಯರ ತಂದೆ ಡಾ.ಎಂ.ಉದಯ ಕುಮಾರ್ ಸರಳತ್ತಾಯ ಹಾಗೂ ತಾಯಿ ಶ್ರೀವಿದ್ಯಾ ನುಡಿದರು.

Anirudha ಚಿಕ್ಕ ವಯಸ್ಸಿನಿಂದಲೂ ಅನಿರುದ್ಧ ದೇವರು ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಉಳ್ಳವನಾಗಿದ್ದು, ಮನೆಯಲ್ಲಿ ಉಳಿದ ಶಿಷ್ಯರೊಂದಿಗೆ ಆತನೂ ವೇದಾಧ್ಯಯನದಲ್ಲಿ ನಿರತನಾಗಿದ್ದ. ಮಠ, ಸಂಪ್ರದಾಯ, ಆಚರಣೆಗಳು, ವಿಧಿವಿದಾನಗಳ ಬಗ್ಗೆ ಆಸಕ್ತನಾಗಿದ್ದ. ಶಿರೂರು ಮಠಕ್ಕೆ ಯತಿಯಾಗಿ ತೆರಳುವ ಬಗ್ಗೆ ಆತನೇ ನಮಗೆ ತಿಳಿಸಿದ್ದ. ಹೀಗಾಗಿ ಮೊದಲ ಬಾರಿ ಆತ ಈ ಮಾತನ್ನು ಹೇಳಿದಾಗಲೇ ನಾವು ಒಪ್ಪಿಗೆ ಸೂಚಿಸಿದೆವು ಎಂದು ಉದಯಕುಮಾರ್ ಸರಳತ್ತಾಯ ನುಡಿದರು.

ತಾಯಿ ಶ್ರೀವಿದ್ಯಾ ಮಾತನಾಡಿ, ಚಿಕ್ಕ ವಯಸ್ಸಿನಿಂದಲೂ ಆತ ಪೂಜೆ, ಉಪವಾಸದ ಬಗ್ಗೆ ಹೆಚ್ಚು ಒಲವು ತೋರುತಿದ್ದ. ಆದ್ಯಾತ್ಮಿಕತೆಯತ್ತ ಆತನ ಒಲವಿನಿಂದಾಗಿ ಆತನಿಗೆ ಸನ್ಯಾಸ ಯೋಗವಿರುವುದು ನಮಗೆ ಖಚಿತವಾಗಿ ಆತನ ಸನ್ಯಾಸ ಸ್ವೀಕಾರ ವನ್ನು ಖುಷಿಯಿಂದಲೇ ಒಪ್ಪಿಕೊಂಡಿದ್ದೇವೆ ಎಂದರು. ಇವರಿಗೆ ಹಿರಣ್ಮಯಿ ಎಂಬ ಮಗಳಿದ್ದಾಳೆ.

ಡಾ.ಉದಯಕುಮಾರ ಸರಳತ್ತಾಯ ಕುಟುಂಬ ಮೂಲತ: ಉಡುಪಿಯದ್ದಾದರೂ, ಅವರ ಪೂರ್ವಜರು ದೇವಸ್ಥಾನದ ಪೂಜೆಗೆಂದು ತೆರಳಿ ಧರ್ಮಸ್ಥಳ ಸಮೀಪದ ನಿಡ್ಲೆಯಲ್ಲಿ ನೆಲೆಸಿದ್ದರು. ಉಡುಪಿಯಲ್ಲಿ ವೇದಾಭ್ಯಾಸ ನಡೆಸಿ, ಉಡುಪಿಯ ಸಂಸ್ಕೃತ ಕಾಲೇಜು, ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ಬಿ.ಎಡ್. ಹಾಗೂ ಪಿಎಚ್‌ಡಿ ಮುಗಿಸಿದ್ದರು.

”ನನಗೆ ಮೊದಲಿನಿಂದಲೂ ಕೃಷ್ಣನ ಪೂಜೆ ಮಾಡುವ ಆಶೆ ಇತ್ತು. ಸನ್ಯಾಸಾಶ್ರಮ ವಿಷಯದ ಬಗ್ಗೆಯೂ ನನಗೆ ತಿಳಿದಿದೆ. ತಂದೆಯವರು ನನಗೆ ಎಲ್ಲವನ್ನೂ ತಿಳಿಸಿದ್ದಾರೆ. ಅವರ ಬಳಿಯೇ ನಾನು ಸಂಸ್ಕೃತದ ಮೂಲ ಅಧ್ಯಯನ, ವೇದಾದ್ಯಯನ ನಡೆಸುತಿದ್ದೇನೆ. ಶಿರೂರು ಮಠದ ಯತಿಯಾಗುವ ಇಚ್ಛೆಯನ್ನು ನಾನೇ ತಂದೆಯವರ ಬಳಿ ಹೇಳಿದ್ದೆ. ಮುಂದೆ ಶಾಸ್ತ್ರಾಭ್ಯಾಸ, ವೇದಾಂತ ಅಧ್ಯಯನವನ್ನು ನಡೆಸುತ್ತೇನೆ. ಅದರೊಂದಿಗೆ ಲೌಕಿಕ ಅಧ್ಯಯನವನ್ನೂ ಮುಂದುವರಿಸುತ್ತೇನೆ’  ವಟು ಅನಿರುದ್ಧ ಎಂದು ವಟು ಅನಿರುದ್ಧ ನುಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English