ಮಂಗಳೂರು : ವೀಕೆಂಡ್ ಲಾಕ್ ಡೌನ್ ಬಿಗಿಗೊಳಿಸಲು ಅಗತ್ಯ ವಸ್ತುಗಳ ಖರೀದಿ ಸಮಯ ಮುಗಿಯುತ್ತಿದ್ದಂತೆ ಆಯಾ ಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಅನಗತ್ಯ ವಾಹನ ಸಂಚಾರಕ್ಕೆ ಪೊಲೀಸರು ತಡೆ ಹಾಕಿದ್ದಾರೆ.
ನಗರದ ಕ್ಲಾಕ್ ಟವರ್ ನಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ನೇತೃತ್ವದಲ್ಲಿ ಪೊಲೀಸರು ವಾಹನ ಸಂಚಾರ ತಪಾಸಣೆ ಮಾಡಿದ್ದಾರೆ.
ಗ್ರಾಮಾಂತರ ಪ್ರದೇಶಗಳಿಗೆ ಸರಕಾರಿ ಬಸ್ಸುಗಳು ಸಂಚರಿಸುತ್ತಿದ್ದರೂ ಬಸ್ಸಿನಲ್ಲಿ ಬೆರಳೆಣಿಕೆಯ ಪ್ರಯಾಣಿಕರು ಮಾತ್ರವೇ ಸಂಚರಿಸುತ್ತಿದ್ದಾರೆ. ಹಾಲು, ಮೊಟ್ಟೆ , ತರಕಾರಿ, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಟ ವಾಹನಗಳು ಕೂಡ ಬೆರಳೆಣಿಕೆಯ ಸಂಖ್ಯೆಯಲ್ಲಿ ರಸ್ತೆ ಯಲ್ಲಿ ಕಾಣಿಸಿಕೊಳ್ಳುತ್ತಿವೆ.
ಲಾಕ್ ಡೌನ್ ನಿಯಂತ್ರಣಕ್ಕೆ 35 ಮೊಬೈಲ್ ಸ್ಕಾಡ್ ಗಳು, ಸಾವಿರ ಕ್ಕೂ ಅಧಿಕ ಸಿಬ್ಬಂದಿ ಹಾಗೂ 54 ಚೆಕ್ ಪೋಸ್ಟ್ ಗಳು ಕಾರ್ಯ ನಿರ್ವಹಿಸುತ್ತಿವೆ. 9.30ರ ವೇಳೆಗೆ ಬಹುತೇಕ ಅಗತ್ಯ ಸೇವೆಗಳ ಶಾಪ್, ಮಳಿಗೆಯವರು ತಮ್ಮ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ತೆರಳಿದ್ದಾರೆ. ಹಾಗಿದ್ದೂ ಅನಗತ್ಯವಾಗಿ ರಸ್ತೆಯಲ್ಲಿ ಸುತ್ತಾಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಕಳೆದ ಒಂದು ವಾರದಿಂದ 1400 ಮಾಸ್ಕ್ ಉಲ್ಲಂಘನೆ ಪ್ರಕರಣ ಹಾಗೂ ಶುಕ್ರವಾರ ಒಂದೇ ದಿನ ಸರಕಾರದ ಆದೇಶ ಉಲ್ಲಂಘಿಸಿದ ಮಳಿಗೆಗಳ ವಿರುದ್ಧ 30 ಪ್ರಕರಣ ದಾಖಲಾಗಿದೆ ಎಂದು ಶಶಿಕುಮಾರ್ ಅವರು ಮಾಹಿತಿ ನೀಡಿದರು.
Click this button or press Ctrl+G to toggle between Kannada and English