ಬೆಂಗಳೂರು: ಕೊರೊನಾ 2 ನೇ ಅಲೆ ವ್ಯಾಪಿಸುತ್ತಿದ್ದಂತೆ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ಇದರ ನಿಯಂತ್ರಣಕ್ಕೆ ನಾಳೆ ರಾತ್ರಿಯಿಂದ 14 ದಿನ ರಾಜ್ಯಾದ್ಯಂತ ಮತ್ತಷ್ಟು ಬಿಗಿ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಏಪ್ರಿಲ್ 27 ರಿಂದ 14 ದಿನ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಇರಲಿದೆ, 15 ದಿನದ ಬಳಿಕವೂ ಪರಿಸ್ಥಿತಿ ಮತ್ತೆ ಹತೋಟಿಗೆ ಬಾರದಿದ್ದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಕೋವಿಡ್- ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಮಹಾರಾಷ್ಟ್ರ ಮೀರಿಸಿ, ಬೆಂಗಳೂರು ಸುತ್ತಮುತ್ತ ಜಾಸ್ತಿಯಾಗುತ್ತಿದೆ. ಸಚಿವ ಸಂಪುಟದ ಸಹೋದ್ಯೋಗಿಗಳು, ತಜ್ಞರೊಂದಿಗೆ ಸಮಾಲೋಚಿಸಿ ಕೆಲವು ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ 18 ರಿಂದ 45 ವಯಸ್ಸಿನೊಳಗಿರುವವರಿಗೆ ಲಸಿಕೆಯನ್ನು ಉಚಿತವಾಗಿ ಪೂರೈಕೆ ನೀಡಲಾಗುವುದು. ನಾಳೆ ರಾತ್ರಿಯಿಂದ ಇಡೀ ರಾಜ್ಯಾದಂತ್ಯ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಬೆಳಿಗ್ಗೆ 6 ರಿಂದ 10 ಗಂಟೆ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ರಾಜ್ಯದಲ್ಲಿ ಎಂದಿನಂತೆ ಕರ್ಫ್ಯೂ ಮುಂದುವರೆಯಲಿದೆ. ಗಾರ್ಮೆಂಟ್ಸ್ ನೌಕರರನ್ನು ಹೊರತುಪಡಿಸಿ, ಉತ್ಪಾದನಾ, ಕ್ಷೇತ್ರ, ಕೃಷಿ, ಕಟ್ಟಡ ವೈದ್ಯಕೀಯ ಚಟುವಟಿಕೆಗಳು ಮುಂದುವರೆಯುತ್ತದೆ.
ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯರೆಗೂ ಕರ್ಫ್ಯೂ ಮುಂದುವರೆಯಲಿದೆ. ತಾಲೂಕ್ ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳಲಾಗಬೇಕು. ರಾಜ್ಯದಲ್ಲಿ ಆಕ್ಸಿಜನ್ 800 ಮೆಟ್ರಿಕ್ ಟನ್ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಸಂದರ್ಭದಲ್ಲಿ ಸಾರಿಗೆ ಸಂಚಾರ ಇರುವುದಿಲ್ಲ. ಸರಕು- ಸಾಗಾಣಿಕೆ ವಾಹನಗಳಿಗೆ ಮಾತ್ರ ಈ ಅವಧಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
Click this button or press Ctrl+G to toggle between Kannada and English