ಪತ್ರಕರ್ತರೇ ಹುಷಾರ್..! : ಡಿಸೆಂಬರ್ ವರೆಗೂ ತಪ್ಪಿದ್ದಲ್ಲ ಡೆಡ್ಲಿ ಕಾಟ..

9:51 PM, Saturday, May 1st, 2021
Share
1 Star2 Stars3 Stars4 Stars5 Stars
(No Ratings Yet)
Loading...

Manjunatha ಬೆಂಗಳೂರು: ಕೊರೊನಾದಿಂದ ಮುಕ್ತಿ ಯಾವಾಗ ಎನ್ನುವವರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಡೆಡ್ಲಿ ಕಾಟ ಡಿಸೆಂಬರ್ ವರೆಗೂ ತಪ್ಪಿದ್ದಲ್ಲ ಹಾಗಾಗಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಸೋಂಕು ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪರಿಪಾಲನೆ ಮಾಡದೆ ಹೋದರೆ, ಸಮಸ್ಯೆ ಇನ್ನೂ ತೀವ್ರವಾಗಿ ಕಾಡಬಹುದು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗಿರಬೇಕಾದ ಮುನ್ನೆಚ್ಚರಿಕೆ ವಿಷಯದ ಬಗ್ಗೆ ಅವರು ವೆಬಿನಾರ್ ಮೂಲಕ ಅವರು ಮಾತನಾಡಿದ್ದಾರೆ. ರಾಜ್ಯದಲ್ಲಿ ಒಂದೂವರೆಯಿಂದ ಎರಡು ಕೋಟಿ ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎನ್ನುವ ಮಾಹಿತಿ ಇದೆ. ಭಾರತದಲ್ಲಿ ಸೋಂಕು ಪ್ರಕರಣಗಳು 4 ಲಕ್ಷ ಹಾಗು ಸಾವಿನ ಸಂಖ್ಯೆ 4 ಸಾವಿರ ದಾಟುವ ಮೂಲಕ ಬ್ರೆಜಿಲ್ ಹಾಗೂ ಅಮೇರಿಕಾವನ್ನೂ ಹಿಂದಿಕ್ಕುವ ಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಎಂದರು.

ಪತ್ರಿಕೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ತಮ್ಮನ್ನೇ ತಾವು ಸ್ಪರ್ಧೆಗೆ ಒಡ್ಡಿಕೊಳ್ಳುವ ಅನಿವಾರ್ಯತೆ ಎದುರಿಸುತ್ತಿರುತ್ತಾರೆ. ಇಂತಹ ಸ್ಪರ್ಧಾತ್ಮಕ ಹಾಗೂ ಒತ್ತಡದ ಕೆಲಸಗಳು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡದಂತೆ ಮಾಡುವುದರಿಂದ ತಮ್ಮನ್ನೇ ತಾವು ಅಪಾಯಕ್ಕೆ ದೂಡಿಕೊಳ್ಳುವ ಸಾಧ್ಯತೆ ಇರುತ್ತದೆ. ಬಹುತೇಕ ಯುವಕರೇ ಇಂತಹ ಅಪಾಯದ ಸ್ಥಿತಿಯಲ್ಲಿ ಕೆಲಸ ಮಾಡುವ ಕಾರಣ ಬಹಳ ಬೇಗ ಸೋಂಕಿಗೆ ಒಳಗಾಗುತ್ತಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ವ್ಯಕ್ತಿಗತ ಅಂತರ ಹಾಗೂ ಮುಂಜಾಗೃತಾ ಕ್ರಮಗಳು ಬಹಳ ಮುಖ್ಯ. ಮಾಸ್ಕ್ ಹಾಕಿಕೊಳ್ಳಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ವ್ಯಾಕ್ಸಿನ್ ತೆಗೆದುಕೊಳ್ಳಬೇಕು, ವಿಶೇಷವಾಗಿ ದೃಶ್ಯ ಮಾಧ್ಯಮದವರು ಒಂದೆಡೆ ಗುಂಪು ಸೇರುವುದನ್ನು ತಪ್ಪಿಸಬೇಕು.

ಸಾರ್ವಜನಿಕ ಪ್ರದೇಶದಲ್ಲಿ ಕೆಲಸ ಮಾಡುವ ವರದಿಗಾರರು ರೋಗ ಲಕ್ಷಣಗಳಿಲ್ಲದಿದ್ದರೂ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದರಿಂದ ಕುಟುಂಬಸ್ಥರಿಗೆ ಅಪಾಯವಾಗುವುದನ್ನು ತಪ್ಪಿಸಲು ಮನೆಯಲ್ಲಿದ್ದಾಗಲೂ ಸಹ ಮಾಸ್ಕ್ ಧರಿಸುವುದು ಸೂಕ್ತ ಎಂದರು.

ಕೋವಿಡ್ ವಿರುದ್ದ ಹೋರಾಟಕ್ಕೆ ಇನ್ನೂ ಮೂರರಿಂದ ನಾಲ್ಕು ತಿಂಗಳು ಪ್ರತೀ ಕ್ಷಣವೂ ಸಜ್ಜಾಗಿರಬೇಕು. ಇದೇ ವೇಳೆ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಅವರು ಶೀಘ್ರವಾಗಿ ಗುಣಮುಖರಾಗಲು ಪ್ರತಿಯೊಬ್ಬರೂ ನೆರವಾಗಬೇಕು ಎಂದರು.

ವ್ಯಾಕ್ಸಿನ್, ಮಾಸ್ಕ್ ಹಾಗೂ ವ್ಯಕ್ತಿಗತ ಅಂತರ ಕಾಪಾಡುವ ಮೂಲಕ ದೇಶದ ಆರೋಗ್ಯ ಕಾಪಾಡುವ ಹೊಣೆಗಾರಿಗೆ ನಮ್ಮೆಲ್ಲರದ್ದು ಜವಾಬ್ದಾರಿ ಅರಿತು ಮುನ್ನಡೆಯಬೇಕು ಎಂದು ಮನವಿ ಮಾಡಿದರು.

ವರದಿ: ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English