ಕೇರಳ ವಿಧಾನಸಭಾ ಚುನಾವಣೆ : ಕಾಸರಗೋಡು ಎಲ್‌‌ಡಿಎಫ್ -3 ಯುಡಿಎಫ್ -2 ಕ್ಷೇತ್ರಗಳಲ್ಲಿ ಗೆಲುವು

11:20 PM, Sunday, May 2nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Kasaragodಕಾಸರಗೋಡು : ಕೇರಳ  ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡಿನ ಐದು ಕ್ಷೇತ್ರಗಳಲ್ಲಿ ಮೂರರಲ್ಲಿ ಸಿಪಿಎಂ ನೇತೃತ್ವದ ಎಲ್‌‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್  ಎರಡು  ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ತೀವ್ರ ಪೈಪೋಟಿ ಇದ್ದ ಮಂಜೇಶ್ವರದಲ್ಲಿ ಯುಡಿಎಫ್ ಕ್ಷೇತ್ರವನ್ನು ಉಳಿಸಿಕೊಂಡಿದ್ದು, ಕಾಸರಗೋಡು ಕ್ಷೇತ್ರದಲ್ಲಿ ಯುಡಿಎಫ್ ಅಧಿಪತ್ಯ ಮುಂದುವರಿಸಿದರೆ. ಉದುಮ, ಕಾಞ0ಗಾಡ್ ಮತ್ತು ತೃಕ್ಕರಿಪುರದಲ್ಲಿ ಎಲ್‌ಡಿಎಫ್ ಗೆಲುವು ಸಾಧಿಸಿದೆ.

ಮಂಜೇಶ್ವರದಲ್ಲಿ ಬಿಜೆಪಿಯ ಕೆ.ಸುರೇಂದ್ರನ್ ಅವರನ್ನು 1,143 ಮತಗಳ ಅಂತರದಿಂದ ಸೋಲು ಅನುಭವಿಸಿದರು. ಎಣಿಕೆಯ ಎಲ್ಲಾ ಸುತ್ತುಗಳಲ್ಲೂ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಮುನ್ನಡೆ ಕಾಯ್ದುಕೊಂಡು ಬಂದಿದ್ದು, ಅಂತಿಮವಾಗಿ ಸಣ್ಣ ಅಂತರದ ಗೆಲುವು ಸಾಧಿಸಿದ್ದು, ಎಲ್‌‌ಡಿಎಫ್‌ನ ವಿ.ವಿ ರಮೇಶನ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಮಂಜೇಶ್ವರದಲ್ಲಿ 2016 ರಲ್ಲಿ ಪಿ.ಬಿ ಅಬ್ದುಲ್ ರಜಾಕ್ ವಿರುದ್ಧ ಕೇವಲ 89 ಮತಗಳ ಅಂತರದಿಂದ ಸೋಲು ಕಂಡಿದ್ದ ಕೆ.ಸುರೇಂದ್ರನ್ ಈ ಬಾರಿ ಮತ್ತೆ ಕಣಕ್ಕಿಳಿದಿದ್ದು, ಕ್ಷೇತ್ರವು ಕುತೂಹಲ ಮೂಡಿಸಿತ್ತು.

ಪಿ.ಬಿ ಅಬ್ದುಲ್ ರಜಾಕ್ ರವರ ನಿಧನದ ಹಿನ್ನಲೆಯಲ್ಲಿ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಎಂಟು ಸಾವಿರದಷ್ಟು ಮತಗಳ ಅಂತರದಿಂದ ಯುಡಿಎಫ್‌ನ ಎಂ.ಸಿ ಕಮರುದ್ದೀನ್ ಬಿಜೆಪಿಯ ಕುಂಟಾರು ರವೀಶ ತಂತ್ರಿ ವಿರುದ್ಧ ಗೆಲುವು ಸಾಧಿಸಿದ್ದರು.

ಅದರಂತೆ ಕಾಸರಗೋಡು ಕ್ಷೇತ್ರ ಮತ್ತೆ ಯುಡಿಎಫ್ ಪಾಲಾಗಿದ್ದು, ಮುಸ್ಲಿಂ ಲೀ‌‌ಗ್‌ನ ಎನ್.ಎ ನೆಲ್ಲಿಕುನ್ನು ಹ್ಯಾಟ್ರಿಕ್ ಸಾಧನೆ ಮಾಡಿದರು . ಎನ್.ಎ ನೆಲ್ಲಿಕುನ್ನುರವರು ಬಿಜೆಪಿಯ ಕೆ.ಶ್ರೀಕಾಂತ್ ರವರನ್ನು 13,014 ಮತಗಳ ಅಂತರದಿಂದ ಸೋಲಿಸುವ ಮೂಲಕ ಮೂರನೇ ಬಾರಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. 2016 ರಲ್ಲಿ ಎಂಟು ಸಾವಿರದಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ನೆಲ್ಲಿಕುನ್ನು ಈ ಬಾರಿ ಅಂತರ ಇಮ್ಮಡಿ ಗೊಳಿಸಿದೆ.

ಉದುಮ ಕ್ಷೇತ್ರದಲ್ಲಿ ಮಂಜೇಶ್ವರ ಮಾಜಿ ಶಾಸಕ ಸಿ. ಎಚ್ ಕುಂಞಂಬು ಗೆಲುವು ಸಾಧಿಸಿದ್ದಾರೆ. ಇದರಿಂದ ಎಲ್‌‌ಡಿಎಫ್ ಈ ಕ್ಷೇತ್ರವನ್ನು ಮತ್ತೆ ಉಳಿಸಿಕೊಂಡಿದೆ. ಸಿಪಿಎಂ ಅಭ್ಯರ್ಥಿ ಸಿ.ಎಚ್ ಕುಂಞಂಬುರವರು ಕಾಂಗ್ರೆಸ್‌‌ನ ಬಾಲಕೃಷ್ಣ ಪೆರಿಯರವರನ್ನು 9,286 ಮತಗಳ ಅಂತರದಿಂದ ಸೋಲಿಸಿದರು.

7 ಸುತ್ತುಗಳ ತನಕ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡರೂ ಬಳಿಕ ಕುಂಞಂಬುರವರು ಮುನ್ನಡೆ ಸಾಧಿಸಿದ್ದು, ಅಂತಿಮವಾಗಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಎ.ವೇಲಾಯುಧನ್ ಮೂರನೇ ಸ್ಥಾನ ಪಡೆದರು.

ಕಾಞಂಗಾಡ್ ನಲ್ಲಿ ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಜಯಗಳಿಸಿದ್ದಾರೆ. ಇದರಿಂದ ಎಲ್‌‌ಡಿ ಎಫ್ ಘಟಕ ಪಕ್ಷವರ ಸಿಪಿಐ ಈ ಕ್ಷೇತ್ರವನ್ನು ಗೆದ್ದುಕೊಂಡಿದೆ. ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ವಿ.ವಿ ಸುಮೇಶ್ ರವರನ್ನು ಸೋಲಿಸಿದರು. ಬಿಜೆಪಿ ಅಭ್ಯರ್ಥಿ ಬಾಲರಾಜ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿದ್ದಾರೆ. ಚಂದ್ರಶೇಖರನ್ ಮೂರನೇ ಬಾರಿ ಗೆಲುವು ಸಾಧಿಸಿದ್ದಾರೆ.

ತ್ರಿಕ್ಕರಿಪುರದಲ್ಲಿ ಹಾಲಿ ಶಾಸಕ ಎಲ್‌ಡಿಎಫ್‌‌ನ ಎ.ರಾಜಗೋಪಾಲ್ ಗೆಲುವು ಸಾಧಿಸಿದ್ದಾರೆ. ಅವರು ಯುಡಿಎಫ್ ಅಭ್ಯರ್ಥಿಯನ್ನು ಸೋಲಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English