ಮಂಗಳೂರು :ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಮಿಕರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜೈಲ್ ಭರೋ ಚಳವಳಿ ನಡೆಸಿದರು. ಸಿಐಟಿಯು, ಎಐಟಿಯುಸಿ, ಬಿಎಂಎಸ್, ಎಐಸಿಸಿಟಿಯು, ಇಂಟಕ್, ಎಚ್‌ಎಂಎಸ್ ಮೊದಲಾದ ವಿವಿಧ ಸಂಘಟನೆಗಳಿಗೆ ಸೇರಿದ ಕಾರ್ಮಿಕರು ಹಾಗು ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಿಪಿಐಎಂ ಜಿಲ್ಲಾಧ್ಯಕ್ಷ ಹಾಗೂ ಸಿಐಟಿಯು ರಾಜ್ಯಾಧ್ಯಕ್ಷ ಬಿ.ಮಾದವ ರವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಜತೆ ಸೇರಿಕೊಂಡು ದಿನಬಳಕೆ ವಸ್ತುಗಳ ಬೆಳೆಗಳನ್ನು ಹೆಚ್ಚು ಮಾಡುತ್ತಿರುವುದರಿಂದ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ. ಕಾರ್ಮಿಕರಿಗೆ ಕನಿಷ್ಠ ವೇತನ ತಿಂಗಳಿಗೆ 10,000 ರೂ. ನಿಗದಿ ಗೊಳಿಸಬೇಕು ಎಂದು ಕಳೆದ 1 ವರ್ಷದಿಂದ ಒತ್ತಾಯಿಸುತ್ತಾ ಬಂದಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ. ಕಾರ್ಮಿಕರ ಪರವಾಗಿ ಇರುವ ಕಾನೂನುಗಳನ್ನು ಜಾರಿಗೊಳಿಸುತ್ತಿಲ್ಲ ಮುಂದೆಯೂ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸರಕಾರವನ್ನು ಎಚ್ಚರಿಸಿದರು.
ಬಿ.ಎಂ.ಎಸ್. ಮುಖಂಡ ವಿಶ್ವನಾಥ ಶೆಟ್ಟಿ, ಎಐಟಿಯುಸಿ ಮುಖಂಡ ಶೇಖರ್ ಅವರು ಮಾತನಾಡಿದರು. ಸಿಐಟಿಯು ಮುಖಂಡರಾದ ಕೆ.ಆರ್. ಶ್ರೀಯಾನ್, ಜೆ. ಬಾಲಕೃಷ್ಣ ಶೆಟ್ಟಿ, ಯು.ಬಿ. ಲೋಕಯ್ಯ, ರಮಣಿ, ಪದ್ಮಾವತಿ ಶೆಟ್ಟಿ, ಎಐಟಿಯುಸಿ ಮುಖಂಡರಾದ ಸೀತಾರಾಮ ಬೇರಿಂಜ, ಶಿವಪ್ಪ, ಎಚ್.ವಿ. ರಾವ್, ಬಿ.ಎಂ.ಎಸ್. ಮುಖಂಡರಾದ ವಿನೋದ್ ಕುಮಾರ್, ಪುರಂದರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English