ಕಾಂಗ್ರೆಸ್ ಜಿಲ್ಲೆಗೆ ಕೆಟ್ಟ ಹೆಸರು ತರುವುದಲ್ಲದೆ, ಸರಕಾರಿ ಆಸ್ಪತ್ರೆಗೆ ಬರದಂತೆ ಜನರಲ್ಲಿ ಭಯ ತುಂಬುತ್ತಿದೆ

11:08 AM, Saturday, May 8th, 2021
Share
1 Star2 Stars3 Stars4 Stars5 Stars
(No Ratings Yet)
Loading...

vedavyas kamath ಮಂಗಳೂರು : ವೆನ್ಲಾಕ್ ಆಸ್ಪತ್ರೆಯ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿ ಜಿಲ್ಲೆಗೆ ಕೆಟ್ಟ ಹೆಸರು ತರುವುದಲ್ಲದೆ, ಜನತೆ ವೆನ್ಲಾಕ್‌ಗೆ ಬರಲು ಭಯಪಡುವ ವಾತಾವರಣವನ್ನು ಕಾಂಗ್ರೆಸ್ ನಿರ್ಮಿಸುತ್ತಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೆನ್ಲಾಕ್ ಆಸ್ಪತ್ರೆಯಲ್ಲಿ ಬಡವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳಿವೆ. ಆದರೆ ಕಾಂಗ್ರೆಸ್ ಜನತೆಯ ದಿಕ್ಕು ತಪ್ಪಿಸುತ್ತಿದ್ದು, ಬಡವರು ಸರಕಾರಿ ಆಸ್ಪತ್ರೆಗೆ ಬರದಂತೆ ಭಯ ತುಂಬುತ್ತಿದೆ. ಆರೋಗ್ಯ ವಿಷಯದ ಈ ರೀತಿಯ ರಾಜಕಾರಣ ಕಾಂಗ್ರೆಸ್‌ಗೆ ಶೋಭೆಯಲ್ಲ ಎಂದರು.

ಬಿಜೆಪಿ ಒಂದೇ ವರ್ಷದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದೆ. ಯು.ಟಿ.ಖಾದರ್ ರಾಜ್ಯದ ಆರೋಗ್ಯ ಸಚಿವರಾಗ್ದಿರೂ ವೆನ್ಲಾಕ್‌ಗೆ ಯಾವುದೇ ಲಾಭವಾಗಿಲ್ಲ. ವೆನ್ಲಾಕ್‌ನಲ್ಲಿ ಇದುವರೆಗೆ ಕೇವಲ 12 ಇಂಟೆನ್‌ಸಿವ್ ಕೇರ್ ಇತ್ತು. ಆದರೆ ಕೊರೋನ ಜಿಲ್ಲೆಯನ್ನು ಕಾಡಿದ ಬಳಿಕ ಒಂದೇ ವರ್ಷದಲ್ಲಿ ಸಂಸದ ನಳಿನ್ ಕುಮಾರ್ ಮತ್ತು ಬಿಜೆಪಿ ಸರಕಾರದ ಮುತುವರ್ಜಿಯಿಂದಾಗಿ 70 ವೆಂಟಿಲೇಟರ್‌ಗಳು ಸದ್ಯ ವೆನ್ಲಾಕ್‌ನಲ್ಲಿವೆ. ಅಲ್ಲದೆ 20 ವೆಂಟಿಲೇಟರ್‌ಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗಾಗಿ ಮೀಸಲಿರಿಸಲಾಗಿದೆ. ಒಟ್ಟು 90 ವೆಂಟಿಲೇಟರ್‌ಗಳು ಬಡವರಿಗೆ ಸುಲಭವಾಗಿ ದೊರೆಯುತ್ತಿವೆ. ವೆನ್ಲಾಕ್‌ನಲ್ಲಿ ಇದ್ದ 6 ಟನ್ ಸಾಮರ್ಥ್ಯದ ಆಕ್ಸಿಜನ್ ಸಿಲಿಂಡರ್ ಈಗ 12 ಟನ್‌ಗೆ ಏರಿಕೆಯಾಗಿದೆ. ಇವೆಲ್ಲವೂ ಬಡವರಿಗಾಗಿ ಮೀಸರಿಸಲಾಗಿದೆ ಎಂದರು.

ಮುಂದಿನ 30-40 ದಿನದೊಳಗೆ ವೆನ್ಲಾಕ್‌ನಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಸಲಾಗುವುದು. 10 ದಿನದೊಳಗೆ 50 ವೆಂಟಿಲೇಟರ್‌ಗಳು ಬರಲಿದೆ. ಅಲ್ಲದೆ 250 ಆಕ್ಸಿಜನೇಟೆಡ್ ಬೆಡ್ ಅಳವಡಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಪ್ಲಾಂಟ್ ಮಾಡುವ ಬಗ್ಗೆಯೂ ಕೆಲಸ ಕಾರ್ಯಗಳಾಗುತ್ತಿವೆ. ಉಳ್ಳಾಲದಲ್ಲಿ ಈಗಾಗಲೇ 50 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಆಗುತ್ತಿದೆ. ಖಾದರ್ ಆರೋಗ್ಯ ಸಚಿವರಾಗಿದ್ದರೂ ತಮ್ಮ ಊರಿಗೆ ಏನೂ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದ ಶಾಸಕ ಕಾಮತ್, ಕಾಂಗ್ರೆಸ್‌ಗೆ ಅಭಿವೃದ್ಧಿ ಬೇಕಿಲ್ಲ. ಅಭಿವೃದ್ಧಿಯ ವಿಷಯ ಮಾತನಾಡುವುದನ್ನು ಬಿಟ್ಟು ಟೀಕೆ ಟಿಪ್ಪಣಿ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದೆ ಎಂದು ಟೀಕಿಸಿದರು.

ಸಲಹೆ ಸೂಚನೆ ನೀಡುವುದಿದ್ದರೆ ನೇರವಾಗಿ ಅಥವಾ ಸಭೆಯಲ್ಲಿ ನೀಡಬಹುದು. ಆದರೆ ಕಾಂಗ್ರೆಸ್ ನಾಯಕರು ಸಭೆಗೇ ಹಾಜರಾಗುತ್ತಿಲ್ಲ. ಪ್ರಧಾನಿಯವರ ನೇತೃತ್ವದಲ್ಲಿ ಬಹರೈನ್‌ಗೆ ಪತ್ರ ಬರೆದು ಆಕ್ಸಿಜನ್ ತರಿಸಿಕೊಳ್ಳಲಾಗಿದೆ. ಆದರೆ ಈ ವಿಷಯದಲ್ಲೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿರುವುದು ದುರದೃಷ್ಟಕರ ಎಂದವರು ಹೇಳಿದರು

ವೆನ್ಲಾಕ್‌ಗೆ ಕೋವಿಡ್ ಪರೀಕ್ಷೆ ನಡೆಸಲು ಬರುವ ಮಂದಿ ಅಪ್ಲಿಕೇಶನ್‌ನಲ್ಲಿ ಸರಿಯಾದ ವಿವರ ದಾಖಲಿಸದೇ ಇರುತ್ತಿದ್ದುದರಿಂದ ಅಪಲೋಡ್ ಮಾಡಲು ತೊಡಕಾಗುತ್ತಿತ್ತು. ವಾರದೊಳಗೆ ಈ ಸಮಸ್ಯೆ ಬಗೆಹರಿಯಲಿದ್ದು, ಬಳಿಕ 24 ಗಂಟೆಯೊಳಗೆ ಪರೀಕ್ಷಾ ವರದಿ ಲಭ್ಯವಾಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English