ಮಂಗಳೂರು : ಕೊರೋನ ಲಾಕ್ ಡೌನ್ ಸಂದರ್ಭ ಸಂಘಟನೆ, ಪಕ್ಷ ಅಥವಾ ಇನ್ಯಾವುದೋ ಪಾಸ್ ಬಳಸಿ ಸುತ್ತಾಡಿದರೆ ಅಂತಹವರ ವಾಹನಗಳನ್ನು ನಿರ್ದಾಕ್ಷಿಣ್ಯವಾಗಿ ಮುಟ್ಟುಗೋಲು ಹಾಕಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ರವಿವಾರ ಸಾಮಾಜಿ ಜಾಲತಾಣಗಳ ಲೈವ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ನಾಗರಿಕರ ಹಿತದೃಷ್ಟಿಯಿಂದ ಕೋವಿಡ್, ವೀಕೆಂಡ್ ಕರ್ಫ್ಯೂವನ್ನು ಜಾರಿ ಮಾಡಲಾಗಿದೆ. ಮೆಡಿಕಲ್, ವೈದ್ಯಕೀಯ, ಪತ್ರಿಕೆ ಸಹಿತ ತುರ್ತು ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಆದರೆ ಕೆಲವರು ನಿರ್ಗತಿಕರಿಗೆ ಊಟದ ವ್ಯವಸ್ಥೆ ನೀಡುತ್ತಿದ್ದೇವೆ ಎಂದು ಹೇಳಿಕೊಂಡು ಜನಪ್ರತಿನಿಧಿಗಳು, ಸಂಘಟನೆ, ಪಕ್ಷದ ಪಾಸ್ ಬಳಸಿ ಸುತ್ತಾಡುತ್ತಿರುವುದು ಕಂಡು ಬಂದಿದೆ. ಕರ್ಫ್ಯೂ ವಿನಾಯಿತಿ ನೀಡಿದ ಸಂಸ್ಥೆಗಳ ಐಡಿ ಇದ್ದರೆ ಪೊಲೀಸರು ಪರಿಶೀಲನೆ ನಡೆಸಿ ಅವಕಾಶ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಈತನಕ ಯಾವುದೇ ಪಾಸ್ ಜಿಲ್ಲಾಡಳಿತ ನೀಡಿಲ್ಲ. ಕೆಲವರು ನಕಲಿ ಪಾಸ್ ಪ್ರದರ್ಶನ ಮಾಡಿ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಇದರ ವಿರುದ್ಧ ಕ್ರಮಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಕಮಿಷನರ್ ಸ್ಪಷ್ಟಪಡಿಸಿದರು.
ಕೊರೋನ ಕರ್ಫ್ಯೂ ಅವಧಿಯಲ್ಲಿ ಬೆಳಗ್ಗೆ 6ರಿಂದ 9ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ ಬೆಳಗ್ಗೆ ಬೇಗ ಯಾವುದೇ ಅಂಗಡಿ, ಮಾರ್ಕೆಟ್ ಮುಂದೆ ಜನ ನೋಡಲು ಸಿಗಲ್ಲ. ವಿನಾಯಿತಿ ಅವಧಿ ಮುಗಿಯುವಾಗ ಜನ ಸೇರುತ್ತಾರೆ. ಆದುದರಿಂದ ಕೆಲವು ದಿನಗಳ ಕಾಲ ಬೆಳಗ್ಗೆ ಬೇಗ ಎದ್ದು ಅಗತ್ಯ ವಸ್ತು ಖರೀದಿಸಿದರೆ ಸಮಯದ ಅಭಾವ ಬರುವುದಿಲ್ಲ. ಸದ್ಯಕ್ಕೆ ಸಮಯ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಕೊರೋನ ಕರ್ಫ್ಯೂ ಅವಧಿಯಲ್ಲಿ ನಿಯಮ ಉಲ್ಲಂಘನೆ ಆರೋಪದಲ್ಲಿ 8 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಶೇ.95ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. ಇನ್ನು ಕೆಲವರು ಆರೋಗ್ಯ ಸಮಸ್ಯೆಯಿಂದ ತೆಗೆದುಕೊಂಡಿಲ್ಲ. ಲಸಿಕೆ ತೆಗೆದುಕೊಂಡವರು ದೊಡ್ಡ ಮಟ್ಟದ ಅಪಾಯದಿಂದ ಪಾರಾಗಿದ್ದಾರೆ. ಆದುರಿಂದ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಲಸಿಕೆ ತೆಗೆದುಕೊಳ್ಳಿ ಎಂದರು.
Click this button or press Ctrl+G to toggle between Kannada and English