ಧರ್ಮಸ್ಥಳ : ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಜನೋತ್ಸವ ಸಮಾರಂಭವನ್ನು ಧರ್ಮಸ್ಥಳದಲ್ಲಿ ಭಾನುವಾರ ಉದ್ಘಾಟಿಸಿದರು. ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಹೇಮಾವತಿ ವಿ. ಹೆಗ್ಗಡೆಯವರು, ಮಾಣಿಲದ ಮೋಹನದಾಸ ಸ್ವಾಮೀಜಿ ರಾಜ್ಯ ಸರಕಾರ ಅಪರ ಮುಖ್ಯ ಕಾರ್ಯದರ್ಶಿ ಜೈರಾಜ್, ಚಲನಚಿತ್ರ ನಟ ಟೆನಿಸ್ ಕೃಷ್ಣ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಭಕುತ ಜನ ಮುಂದೆ, ನೀನವರ ಹಿಂದೆ, ಇಂದಿನ ವಾರ ಶುಭವಾರ, ಇಂದಿನ ದಿನವೇ ಶುಭ ದಿನವು ಧರ್ಮಸ್ಥಳಾಧೀಶ ಶರಣಂ, ಜಗದೀಶ, ಪರಮೇಶ, ಕೃಷ್ಣ, ಕೃಷ್ಣ, ಬಾಲಕೃಷ್ಣ, ಸಪ್ತಗಿರಿವಾಸ, ವೆಂಕಟೇಶ ಗೋವಿಂದ,
ಧರ್ಮಸ್ಥಳದಲ್ಲಿ ಭಾನುವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ಸಾವಿರಾರು ಭಜಕರು ಮಾಡಿದ ಭಜನೆ ಮುಗಿಲು ಮುಟ್ಟುವಂತಿತ್ತು, ಶಿಸ್ತುಬದ್ದವಾಗಿ ರಾಗ, ತಾಳ, ಲಯದಿಂದ ಎಲ್ಲರೂ ಭಕ್ತಿ ಪರವಶರಾಗಿ ಹಾಡಿದರು.
ಹೊರಗೆ ಜಡಿಮಳೆ, ಗುಡುಗು, ಮಿಂಚಿನ ಅಬ್ಬರವನ್ನೂ ಭಜನೆಯ ಧ್ವನಿ ಮೀರಿಸುವಂತ್ತಿತ್ತು, ಭಜಕರರ ಸ್ವರಸ್ಥಾಯಿ ಕಡಿಮೆಯಾಗದಂತೆ ನೀರೆಯರು ಒಳ್ಳೆಮೆಣಸು ಮತ್ತು ಶುಂಠಿ ಕಷಾಯವನ್ನು ನೀಡುತ್ತಿದ್ದರು. ಬೆಂಗಳೂರಿನ ಶಂಕರ್ ಶ್ಯಾನ್ ಬಾಗ್, ಎಮ್.ಎಸ್. ಗಿರಿಧರ, ರಾಮಕೃಷ್ಣ ಕಾಟುಕುಕ್ಕೆ, ಮನೋರಮಾ ತೋಳ್ಪಡಿತ್ತಾಯ, ದೇವದಾಸ ಪ್ರಭು, ಮಂಗಳೂರಿನ ಮಂಗಲದಾಸ ಗುಲ್ವಾಡಿ, ರಮೇಶ ಕಲ್ಮಾಡಿ ಮತ್ತು ಉಡುಪಿ ಶಂಕರ್ ನೇತ್ರತ್ವದಲ್ಲಿ ಭಜನೆಯನ್ನು ನಿಂತು ಹಾಡಿದರು. ಕುಳಿತು ಹಾಡಿದರು, ಕುಣಿದು ಹಾಡಿದರು ಹಾಗೂ ನೃತ್ಯ ಭಜನೆ ಮಾಡಿದರು.
ಹನ್ನೆರಡನೆಯ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ ಭಾನುವಾರ ಅಮೃತವರ್ಷಿಣಿ ಸಭಾಭವನದಲ್ಲಿ, ಭಜನೆ ದೇವರನ್ನು ತಲುಪಲು ಇರುವ ಅತಿ ಸರಳ ಹಾಗೂ ಸನಿಹದ ದಾರಿ, ವೇದಮಂತ್ರಗಳ ಪ್ರಾದೇಶಿಕ ರೂಪವೇ ಭಜನೆ ಭಜನೆಯ ಕಲಾಪ್ರಕಾರ ಗಾಢವಾಗಿದ್ದು ಶಕ್ತವಾಗಿದೆ, ಮುಕ್ತವಾಗಿದೆ. ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಧರ್ಮಸ್ಥಳದಲ್ಲಿ ಭಾನುವಾರ ನಡೆದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಭಕ್ತರು ಮೈತುಂಬಿ, ಪರಿಶುದ್ಧ ಮನಸ್ಸಿನಿಂದ ಭಜನೆ ಹಾಡಿದಾಗ ಭಗವಂತನ ದರ್ಶನವಾಗುತ್ತದೆ. ಭಗವಂತನ ಕಲಾಪ್ರಕಾರವು ಹನ್ನೆರಡನೇ ಶತಮಾನದಲ್ಲಿ ಶರಣ ಸಂಸ್ಕೃತಿಯ ರೂಪದಲ್ಲಿದ್ದರೆ, ಹದಿನಾಲ್ಕನೇ ಶತಮಾನದಲ್ಲಿ ಭಕ್ತಿ ಪಂಥದ ರೂಪದಲ್ಲಿ ಜನರನ್ನು ಭಗವಂತನ ಕಡೆಗೆ ಕೊಂಡೊಯ್ಯುವ ರಹದಾರಿಯಾಗಿತ್ತು. ಜಾಗತೀಕರಣದ ನೆಲೆಯಲ್ಲಿ ನಾವು ನಮ್ಮ ಸಂಸ್ಕೃತಿಯ ಜೀವಾಳವನ್ನು ಕಡೆಗಣಿಸಬಾರದು ಭಜನೆಯು ಸಾರ್ಥಕ ಬದುಕಿಗೆ ಅಗತ್ಯವಾಗಿದ್ದು ಪ್ರತಿಹಳ್ಳಿಯ
ಲ್ಲಿಯೂ ಭಜನಾಕಲಾವಿದರು ಮೂಡಿಬರಬೇಕು ಎಂದು ಅವರು ಆಶಿಸಿದರು.
ಮುಂದಿನ ವರ್ಷ ತಾನು ಸ್ವ-ಇಚ್ಚೆಯಿಂದ ಭಜನಾ ತರಬೇತಿ ಕಮ್ಮಟದಲ್ಲಿ ಭಾಗವಹಿಸುವುದಾಗಿ ತಿಳಿಸಿದ ಹಂಸಲೇಖ ತಾನು ರೂಪಿಸಿದ ನೂತನ ಕಂಕಣಕ ವಾದ್ಯವನ್ನು ಧರ್ಮಸ್ಥಳದಲ್ಲಿ ಉದ್ಘಾಟಿಸುವುದಾಗಿ ಪ್ರಕಟಿಸಿದರು. ಶಿಬಿರಾರ್ಥಿಗಳ ಪರವಾಗಿ ಕುಂದಾಪುರದ ಕು. ಪೂರ್ಣಿಮಾ ಮತ್ತು ದೇವೇಂದ್ರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಭಜನೆಯಿಂದ ಗ್ರಾಮ ಸ್ವಾಸ್ಥ್ಯದೊಂದಿಗೆ ಸಂಘಟನೆ, ಸೌಹಾರ್ದಯುತ ವಾತಾವರಣ ಉಂಟಾಗಬೇಕು. ದೇವರ ಬಳಿ ಹೋಗುವಾಗ ನಮ್ಮ ಮದ, ಮತ್ಸರವನ್ನು ಹಾಗೂ ಅರಿಷಡ್ವರ್ಗಗಳನ್ನು ತ್ಯಜಿಸಬೇಕು. ಭಜನೆಯಿಂದ ಸಾರ್ಥಕ ಬದುಕು ಸಾಧ್ಯ ಎಂದು ಡಾ. ಹೆಗ್ಗಡೆಯವರು ಅಭಿಪ್ರಾಯ ಪಟ್ಟರು.
ತರಬೇತಿ ಶಿಬಿರದ ವರದಿ ಸಾದರ ಪಡಿಸಿದ ವಸಂತ ಸಾಲಿಯಾನ್, 87 ಭಜನಾ ಮಂಡಳಿಗಳ 161 ಸದಸ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. ಭಜನೋತ್ಸವದಲ್ಲಿ 1836 ಭಜಕರು ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಹೇಮಾವತಿ ವಿ. ಹೆಗ್ಗಡೆಯವರು ಮಾಣಿಲದ ಮೋಹನದಾಸ ಸ್ವಾಮೀಜಿ, ರಾಜ್ಯ ಸರಕಾರ ಅವರ ಮುಖ್ಯ ಕಾರ್ಯದರ್ಶಿ ಜೈರಾಜ್, ಚಲನ ಚಿತ್ರ ನಟ ಟೆನಿಸ್ ಕೃಷ್ಣ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English