ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳು ಸರ್ಕಾರಕ್ಕೆ ನಿಗದಿತ ಹಾಸಿಗೆಗಳನ್ನ ನೀಡದೆ ವಂಚಿಸುತ್ತಿರುವ ಕುರಿತಂತೆ ಕಂದಾಯ ಸಚಿವರಾದ ಆರ್ ಅಶೋಕ್, ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಇನ್ನೂ ಕೂಡಾ ಸರ್ಕಾರಕ್ಕೆ ನಿಗದಿತ ಬೆಡ್ ಗಳನ್ನ ನೀಡದೆ ತಪ್ಪು ಮಾಹಿತಿ ನೀಡುತ್ತಿರುವ ಕುರಿತಂತೆ ಪ್ರಮುಖವಾಗಿ ಚರ್ಚಿಸಲಾಯಿತು. ಈ ನಿಟ್ಟಿನಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು ಅಧಿಕಾರಿಗಳಿಗೆ ವಾಸ್ತವಾಂಶವನ್ನ ಅರಿಯಲು ಕೂಡಲೇ ರಿಯಾಲಿಟಿ ಚೆಕ್ ಮಾಡಲೇಬೇಕು ಎಂಬ ಸೂಚನೆ ನೀಡಿದರು.
“ನಗರ ವ್ಯಾಪ್ತಿಯಲ್ಲಿರುವ 30ಕ್ಕಿಂತ ಕಡಿಮೆ ಬೆಡ್ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಆಸ್ಪತ್ರೆಗಳನ್ನ ಪರಿಶೀಲನೆ ನಡೆಸಿ ಶೇ.50ರಷ್ಟು ಹಾಸಿಗೆಗಳನ್ನ ಕೂಡಲೇ ವಶಕ್ಕೆ ಪಡೆದುಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳು ನೀಡುವ ಮಾಹಿತಿಗಳನ್ನ ನಂಬಬೇಡಿ. ಒಬ್ಬ ವೈದ್ಯರನ್ನ ಆಸ್ಪತ್ರೆಯ ಒಳಗೆ ಕಳುಹಿಸಿ ವಾಸ್ತವವಾಗಿ ಲಭ್ಯವಿರುವ ಬೆಡ್ ಗಳನ್ನ ಖುದ್ದು ಪರಿಶೀಲನೆ ಮಾಡಬೇಕು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗಿ. ಅಂದಾಗ ಮಾತ್ರ ಸರ್ಕಾರಕ್ಕೆ ವಾಸ್ತವ ಸಂಖ್ಯೆ ಲಭ್ಯವಾಗಲು ಸಾಧ್ಯವಿದೆ. ನಿಯಮಾನುಸಾರ ನೀಡಬೇಕಾದ ಹಾಸಿಗೆಗಳನ್ನ ತಕ್ಷಣ ವಶಕ್ಕೆ ಪಡೆದುಕೊಳ್ಳಬೇಕು”, ಎಂದು ಸೂಚನೆ ನೀಡಿದರು.
“ಈಗಾಗಲೇ ಎಲ್ಲಾ ಆಸ್ಪತ್ರೆಗಳಿಗೂ ಸರ್ಕಾರ ಸೂಚಿತ ಹಾಸಿಗೆಗಳನ್ನ ನೀಡಲೇಬೇಕು ಎಂದು ತಿಳಿಸಲಾಗಿದೆ. ಆದಾಗ್ಗ್ಯೂ ಅವರು ಸರ್ಕಾರಕ್ಕೆ ಲಭ್ಯ ಹಾಸಿಗೆಗಳನ್ನ ನೀಡದೆ ಇದ್ದಲ್ಲಿ ಅಂಥಹ ಆಸ್ಪತ್ರೆಗಳ ಒಪಿಡಿಗಳನ್ನ ಬಂದ್ ಮಾಡಿ. ನಗರದಲ್ಲಿನ ಎಲ್ಲಾ ಖಾಸಗಿ ಆಸ್ಪತ್ರೆಗಳ ಸರ್ಕಾರದ ಪಾಲಿನ ಹಾಸಿಗೆಗಳನ್ನ ವಶಕ್ಕೆ ತೆಗೆದುಕೊಳ್ಳುವ ಕೆಲಸ ಇನ್ನೂ 24 ಗಂಟೆಯೊಳಗೆ ನಡೆಯಲೇಬೇಕು”, ಎಂದು ಆದೇಶಿಸಿದರು.
ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ,”ಆಸ್ಪತ್ರೆಗಳಿಂದ ಹಾಸಿಗೆ ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ. ತಪ್ಪು ಮಾಹಿತಿ ನೀಡುವ ಮತ್ತು ಹಾಸಿಗೆ ನೀಡಲು ನಿರಾಕರಿಸುವ ಆಸ್ಪತ್ರೆಗಳ ಮೇಲೆ ಕಾನೂನು ಕ್ರಮ ಜರುಗಿಸಿ. ಹಾಗೆಯೇ ಆಸ್ಪತ್ರೆಗಳ ಸಹಯೋಗದಲ್ಲಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನ ಹೆಚ್ಚಿಸಬೇಕು. ಪ್ರಸ್ತುತ 960 ಹಾಸಿಗೆಗಳಿದ್ದು, ಇದನ್ನು ಕನಿಷ್ಠ 5000 ಹಾಸಿಗೆಗಳಿಗೆ ಹೆಚ್ಚಳ ಮಾಡಬೇಕು”, ಎಂದು ಅಧಿಕಾರಿಗಳಿಗೆ ತಿಳಿಸಿದರು.
ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಮಾತನಾಡಿ,”ಹಾಸಿಗೆಗಳನ್ನು ನೀಡದ ನಗರದಲ್ಲಿನ ಕೆಲ ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. 100ಕ್ಕಿಂತ ಹೆಚ್ಚು ಹಾಸಿಗೆಯುಳ್ಳ ಆಸ್ಪತ್ರೆಗಳಿಗೆ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನ ನೋಡಲ್ ಅಧಿಕಾರಿಗಳನ್ನಾಗಿ ಮಾಡಲಾಗಿದೆ. ಆಯಾ ವಲಯದ ಸಣ್ಣ ಆಸ್ಪತ್ರೆಗಳನ್ನು ಮೇಲುಸ್ತುವಾರಿ ಮಾಡಬೇಕು. ಆಸ್ಪತ್ರೆಗಳನ್ನ ಸರಿಯಾಗಿ ಪರಿಶೀಲನೆ ಮಾಡಿದರೆ ಅಗತ್ಯ ಹಾಸಿಗೆಗಳು ಲಭ್ಯವಾಗಲಿವೆ”, ಎಂದರು.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ರವರು ಮಾತನಾಡಿ, “ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 75 ಹಾಸಿಗೆಗಳನ್ನು ಮೀಸಲಿಡಬೇಕಿದ್ದು, ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ನಿಯಮಾನುಸಾರ ಹಾಸಿಗೆಗಳನ್ನು ವಶಪಡಿಸಿಕೊಳ್ಳಬೇಕು”, ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
Click this button or press Ctrl+G to toggle between Kannada and English