ಬೆಂಗಳೂರು : ಆಕ್ಸಿಜೆನ್ ಅಭಾವ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಈ ನಿಟ್ಟಿನಲ್ಲಿ ಇಂದು ದೇವನಹಳ್ಳಿಯ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಕೋವಿಡ್ ಆರೈಕೆ ಕೇಂದ್ರಗಳಿಗೆ 160 ಆಕ್ಸಿಜೆನ್ ಕಾನ್ಸ್‍ಂಟ್ರೇಟರ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಆರ್ ಅಶೋಕ್ ಅವರು, ಕೋವಿಡ್ ಸೋಂಕಿತರಿಗೆ ಆಕ್ಸಿಜೆನ್ ಅಭಾವ ಅಧಿಕವಾಗಿ ಕಾಡುತ್ತಿದೆ. ಈ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿ ತಾಲ್ಲೂಕಿಗೆ 40 ರಂತೆ ಒಟ್ಟು 160 ಆಕ್ಸಿಜೆನ್ ಕಾನ್ಸ್‍ಂಟ್ರೇಟರ್ ಗಳನ್ನ ಕೋವಿಡ್ ಆರೈಕೆ ಕೇಂದ್ರಗಳಿಗೆ ವಿತರಿಸಲಾಗಿದೆ. ಈ ಸೌಲಭ್ಯ ಕಾರ್ಯಗತಗೊಳ್ಳಲು, ನಿರಂತರ ಪ್ರಯತ್ನ. ನಡೆಸಿ ಅಮೇರಿಕಾದಿಂದ ಈ ಕಾನ್ಸ್‍ಂಟ್ರೇಟರ್ ಗಳನ್ನು ತರಿಸಲಾಗಿದೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಅವರನ್ನ ಸಚಿವರು ಶ್ಲಾಘಿಸಿದರು.
“ಈ ಕಾನ್ಸ್‍ಂಟ್ರೇಟರ್ ಗಳು ಕೋವಿಡ್ ಸೋಂಕಿತರಿಗೆ ನೆಬ್ಯೂಲೈಜರ್ ಗಳಾಗಿಯೂ ಕಾರ್ಯನಿರ್ವಹಿಸಲಿವೆ. ಎಲ್ಲಾ ಸೋಂಕಿತರು ಮೊದಲು ಆರೈಕೆ ಕೇಂದ್ರಕ್ಕೆ ದಾಖಲಾಗಬೇಕು. ಇವುಗಳು ಸ್ಟೆಪ್ ಡೌನ್ ಆಸ್ಪತ್ರೆಗಳಾಗಿ ಕಾರ್ಯ ನಿರ್ವಹಿಸಲಿವೆ. ಒಂದು ವೇಳೆ ಆರೋಗ್ಯದಲ್ಲಿ ಏರು ಪೇರಾದರೆ ಮಾತ್ರ ಐಸಿಯೂಗೆ ವರ್ಗಾಯಿಸಲಾಗುವುದು. ಹಾಗೆಯೇ ಹೋಮ್ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಉಚಿತವಾಗಿ ವೈದ್ಯಕೀಯ ಕಿಟ್ ಗಳನ್ನ ನೀಡಲಾಗುತ್ತಿದ್ದು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ತಲುಪಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳಲ್ಲಿಯೂ ಜಿಲ್ಲಾಧಿಕಾರಿಗಳು ಆಕ್ಸಿಜನ್ ಕಾನ್ಸ್‍ಂಟ್ರೇಟರ್ ಗಳನ್ನ ಖರೀದಿಸಬೇಕು. ಈಗಾಗಲೇ ಕಂದಾಯ ಇಲಾಖೆಯು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಹೆಚ್ಚುವರಿ ಹಣ ಬಿಡುಗಡೆಗೊಳಿಸಿದೆ. ಅವಶ್ಯಕತೆಯಿದ್ದರೆ ಮತ್ತಷ್ಟು ಹಣವನ್ನ ಕಂದಾಯ ಇಲಾಖೆಯು ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.
Click this button or press Ctrl+G to toggle between Kannada and English