ಬೆಂಗಳೂರು : “ಹಾಸಿಗೆ ನೀಡದೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾದ ತಕ್ಷಣ ಹಲವು ಆಸ್ಪತ್ರೆಗಳು ತಮ್ಮ ಬಳಿಯಿರುವ ಹಾಸಿಗೆಗಳನ್ನ ನೀಡಲು ಮುಂದೆ ಬರುತ್ತಿವೆ. ಇದರಿಂದ ಲಭ್ಯ ಬೆಡ್ ಗಳ ಸಂಖ್ಯೆ ಹೆಚ್ಚಾಗಲಿದೆ,” ಎಂದು ಕಂದಾಯ ಸಚಿವರಾದ ಆರ್ ಅಶೋಕ್ ಅವರು ತಿಳಿಸಿದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಹೊಸಕೆರೆಹಳ್ಳಿ ವಾರ್ಡ್‍ನ ರೆಫೆರೆಲ್ ಆಸ್ಪತ್ರೆಯಲ್ಲಿ ಸಿದ್ಧಗೊಂಡಿರುವ ಕೋವಿಡ್ ಆರೈಕೆ ಕೇಂದ್ರ ಹಾಗೂ ಇದೇ ವಾರ್ಡ್‍ನಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯಭವನ ಸ್ಥಳಕ್ಕೆ ಬೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
“ರೆಮ್ಡೆಸಿವಿರ್ ಕುರಿತಂತೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಆದರೆ ಸಧ್ಯ ನಮ್ಮಲ್ಲಿ ರೆಮ್ಡೆಸಿವಿರ್ ಕೊರತೆ ಇಲ್ಲ. ಔಷಧಿ ಕಂಪನಿಯವರು ಅಗತ್ಯವಿರುವಷ್ಟು ನೀಡದೆ ಸಮಸ್ಯೆ ಉಂಟು ಮಾಡಿದ್ದವು. ಅವರಿಗೆ ನೋಟೀಸ್ ನೀಡಿದ ನಂತರ ಈಗ ಅವರಿಂದ ಮೆಡಿಸಿನ್ ಪೂರೈಕೆ ಆಗುತ್ತಿದೆ,” ಎಂದರು.
ಕೋವಿಡ್ ಪರೀಕ್ಷೆಗಳನ್ನ ಯಾವುದೇ ಕಾರಣಕ್ಕೂ ನಿಲ್ಲಿಸಿಲ್ಲ. ಆದರೆ ಯಾರಿಗೆ ಪರೀಕ್ಷೆ ನಡೆಸಬೇಕು ಎಂಬುದರ ಕುರಿತು ಅಧಿಸೂಚನೆ ಹೊರಡಿಸಿದ್ದೇವೆ. ಆ ಪ್ರಕಾರ ಸೋಂಕಿನ ಲಕ್ಷಣಗಳಿರುವ ಐ ಎಲ್ ಐ, ಎಸ್‍ಎಆರ್ ಐ ಹಾಗೂ ಸೋಂಕಿತರ ಮನೆಯಲ್ಲಿರುವ ಎಲ್ಲರಿಗೂ ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದೆ.
ಸೋಂಕಿನಿಂದ ಸಾವನ್ನಪ್ಪಿರುವವರಿಗೆ ಗೌರವಯುತವಾದ ಶಸವಸಂಸ್ಕಾರವಾಗಬೇಕು ಎಂಬ ಕಾಳಜಿಯಿಂದ ಸರ್ಕಾರ ಇದಕ್ಕಾಗಿ ಒಂದು ಸಹಾಯವಾಣಿ ತೆರೆಯಲಿದೆ. ಈ ಸಹಾಯವಾಣಿ ದಿನದ 24 ತಾಸು ಕಾರ್ಯನಿರ್ವಹಿಸಲಿದ್ದು, ನಗರದಲ್ಲಿ ಸೋಂಕಿತರು ಸಾವನ್ನಪ್ಪಿದ ಸಮಯದಲ್ಲಿ ಈ ಸಹಾಯವಾಣಿ 8495998495ಗೆ ಕರೆ ಮಾಡಿದರೆ ಚಿತಾಗಾರಕ್ಕೆ ಕೊಂಡೊಯ್ಯಲು ಉಚಿತ ಶವ ವಾಹನ ನೀಡಲಾಗುವುದು. ಇದಕ್ಕಾಗಿ ಸಹಾಯವಾಣಿಯೇ ಸಮಯ ನಿಗದಿಪಡಿಸಿ ವಾಹನ ವ್ಯವಸ್ಥೆ ಮಾಡಲಿದೆ. ಇದರಿಂದ ಚಿತಾಗಾರಗಳ ಮುಂದೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ”, ಎಂದು ತಿಳಿಸಿದರು.
“ಕೋವಿಡ್ ಪಾಸಿಟಿವ್ ಎಂದ ತಕ್ಷಣ ಆಕ್ಸಿಜೆನ್ ಬೆಡ್ ಗಳನ್ನ ಹುಡುಕುವ ಪ್ರಯತ್ನ ಬೇಡ. ಮೊದಲು ಆರೈಕೆ ಕೇಂದ್ರಕ್ಕೆ ಭೇಟಿ ಕೊಡಿ. ನಗರದಲ್ಲಿ ಒಟ್ಟು 17 ಆರೈಕೆ ಕೇಂದ್ರಗಳಿವೆ. ಅವುಗಳಲ್ಲಿ ಸಾವಿರಕ್ಕಿಂತಲೂ ಹೆಚ್ಚು ಬೆಡ್ ಗಳಿವೆ. ಹೀಗಾಗಿ ಮೊದಲು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಿ. ಅಲ್ಲಿನ ವೈದ್ಯರು ನಿಮ್ಮ ಆರೋಗ್ಯ ಸ್ಥಿತಿಯನ್ನ ಪರಿಶೀಲನೆ ಮಾಡುತ್ತಾರೆ. ನಗರದ ಪ್ರತಿ ಕೋವಿಡ್ ಕೇರ್ ಸೆಂಟರ್ ನಲ್ಲಿಯೂ 20 ರಿಂದ 30 ಆಕ್ಸಿಜೆನ್ ಕಾನ್ಸ್ಂಟ್ರೇಟರ್ ಗಳನ್ನ ಅಳವಡಿಸಲಾಗುತ್ತಿದೆ. ಇದರಿಂದ ಸೋಂಕಿತರಿಗೆ ಆಕ್ಸಿಜೆನ್ ಅಗತ್ಯ ಬಂದರೆ ಕೂಡಲೇ ವೈದ್ಯರು ಅಲ್ಲೇ ಲಭ್ಯವಿರುವ ಕಾನ್ಸ್ಂಟ್ರೇಟರ್ ಗಳ ಮೂಲಕ ಚಿಕಿತ್ಸೆ ನೀಡುತ್ತಾರೆ. ಎರಡ್ಮೂರು ದಿನಗಳಲ್ಲಿ ಇನ್ನೂ 500 ಕಾನ್ಸ್ಂಟ್ರೇಟರ್ ಗಳು ಲಭ್ಯವಾಗಲಿವೆ. ಒಟ್ಟು 1200 ರಿಂದ 1300 ಆಕ್ಸಿಜೆನ್ ಕಾನ್ಸ್ಂಟ್ರೇಟರ್ ಗಳನ್ನ ಅಳವಡಿಸಲಾಗುತ್ತದೆ,” ಎಂದು ತಿಳಿಸಿದರು.
“ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿನ ಹೊಸಕೆರೆಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನವನ್ನ 50 ಹಾಸಿಗೆಗಳ ಮಕ್ಕಳ ಆಸ್ಪತ್ರೆಯಾಗಿ ಬದಲಾವಣೆ ಮಾಡಲು ಸೂಚಿಸಿದ್ದು, ಇದಕ್ಕಾಗಿ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ,” ಎಂದು ಹೇಳಿದರು.
Click this button or press Ctrl+G to toggle between Kannada and English