ಇವಳ ಗಂಡನ ನೀವು ಎಲ್ಲಿಯಾದರೂ ಕಂಡಿರಾ? 

12:37 AM, Friday, May 14th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Ambikaಕೋಲಾರ: ಕೊರೋನಾ ಅಲೆಯಲ್ಲಿ ಬೀದಿ ಬೀದಿಗಳು ನಿರ್ಜನ. ಕಾಲೇಜು, ಕಚೇರಿಗಳೂ ಬಂದಾಗಿ ನಿಂತ ದೃಶ್ಯ. ಒಬ್ಬರನೊಬ್ಬರ ಮುಖ ನೋಡಲೂ ಅಳುಕುವ ಪರಿಸ್ಥಿತಿ. ಸಾರಿಗೆ ಸಂಚಾರವೂ ಇಲ್ಲ. ಮಾತನಾಡಲು ಇನ್ನೊಬ್ಬ ಎದುರು ಕಾಣ ಸಿಗುತ್ತಿಲ್ಲ. ಕೊರೋನಾ ಸೋಂಕಿನ ಭೀತಿಯಲ್ಲಿ ಮನುಜ ತನ್ನ ಸರಿಸಾಟಿ ಮನುಜನನ್ನೇ ದೂರ ಇಟ್ಟು ಬಿಟ್ಟಿರುವ ದುರಂತ ಪರಿಸ್ಥಿತಿ!

ಆದರೆ ಇಂಥ ಅತ್ಯಂತ ಕ್ಲಿಷ್ಟ ದಿನಗಳಲ್ಲಿಯೂ ಇಲ್ಲೊಬ್ಬಾಕೆ ತನ್ನ ಗಂಡನನ್ನು ಹುಡುಕಿಕೊಂಡು ಊರೂರು ಅಲೆಯುತ್ತಿರುವ ಕತೆ ಅತ್ಯಂತ ವಿಧ್ರಾವಕ ಎನಿಸುತ್ತದೆ. ಸ್ವಯಂಕೃತ ಅಪರಾಧಕ್ಕೆ ಶಿಕ್ಷೆಯನ್ನೂ ತಾನೇ ವಿಧಿಸಿಕೊಂಡು ಆಕೆ ದಿನದೂಡುತ್ತಿದ್ದಾಳೆ. ತೀರಾ ಇತ್ತೀಚೆಗೆ ಆತ್ಮಹತ್ಯೆ ಏಕೆ ಮಾಡಿಕೊಳ್ಳಬಾರದು ಎಂದೂ ಆಕೆ ಮಾಡಿರುವ ಅತಿ ಸಣ್ಣ ಆಲೋಚನೆಯು ಮುಂದೊಂದು ದಿನ ಅಥವಾ ಕ್ಷಣ ಆಕೆಯ ಅಷ್ಟು ದೊಡ್ಡ ದೇಹವನ್ನು ನೆಲಕ್ಕೆ ಹರವುದೇನೋ ಎಂದು ತೀರಾ ಬೇಸರವಾಗುತ್ತದೆ. ಆದರೆ ಆಕೆಯ ಪರಿಸ್ಥಿತಿ, ಊರಿನ ಸಧ್ಯದ ಪರಿಸ್ಥಿತಿ, ವ್ಯವಸ್ಥೆಯ ಪರಿಸ್ಥಿತಿಯೂ ಸಂಪೂರ್ಣ ಗ್ರಹಣಗ್ರಸ್ಥವಾಗಿರುವುದರಿಂದ ಅದೊಂದು ಕ್ಷಣ ಆಕೆ ತನ್ನ ಆತ್ಮಹತ್ಯೆ ಆಲೋಚನೆಗೆ ಶರಣಾಗಿಬಿಡುವಳೇನೋ ಅನ್ನಿಸಿದೆ.

ಆಕೆಯೇ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರಿನ ಮುನಿಯಪ್ಪನ ಮಗಳು ಅಂಬಿಕ! ಆಕೆಯನ್ನು ಕಳೆದ 4 ವರ್ಷಗಳ ಹಿಂದೆ ಅದೇ ಗ್ರಾಮದ ಪಿಳ್ಳಪ್ಪನ ಮಗ ಮಹೇಶ್ ಅತ್ಯಾಚಾರ ಮಾಡಿರುತ್ತಾನೆ. ಜೊತೆಗೆ ತನ್ನ ಅತ್ಯಾಚಾರದ ವಿರುದ್ಧ ಪೊಲೀಸರಿಗೆ ದೂರು ನೀಡದಿದ್ದಲ್ಲಿ ತಾನು ಆಕೆಯನ್ನು ವಿವಾಹವಾಗುವುದಾಗಿ ಅವಳನ್ನು ನಂಬಿಸಿರುತ್ತಾನೆ. ಅವನ ಬಣ್ಣದ ಮಾತಿಗೆ ಸಧ್ಯದ ಪರಿಸ್ಥಿತಿಗೆ ಆಕೆ ಮಯರ್ಾಧೆಗೆ ಅಂಜಿ ಯಾರಿಗೂ ಅತ್ಯಾಚಾರದ ವಿಷಯ ತಿಳಿಸದೇ ತನ್ನಲ್ಲೇ ಅಳು ನುಂಗಿಕೊಂಡಳು!

ಅವಳ ಮನಃಸ್ಥಿತಿಯನ್ನು ಕ್ಯಾಚ್ ಮಾಡಿಕೊಂಡ ಹೇಗಿದ್ದರೂ ಮದುವೆಯಾಗುವೆನಲ್ಲಾ ಎಂದು ಅವಳನ್ನು ನಂಬಿಸಿಕೊಂಡೇ ಕಳೆದ ನಾಲ್ಕು ವರ್ಷ ಕಾಲದಿಂದಲೂ ಆಕೆಯನ್ನು ತನ್ನ ಕಾಮತೃಷೆಗೆ ತುಂಬಾ ಚೆನ್ನಾಗಿ ಬಳಸಿಕೊಂಡನು. ತನ್ನ ಕೈಬಿಡುವುದಿಲ್ಲ, ತನ್ನ ಜಾತಿಯವನೇ, ತನ್ನ ಮನೆಯಲ್ಲಿಯೂ ವಿರೋಧಿಸುವುದಿಲ್ಲ ಎಂದು ಆಕೆಯೂ ತನ್ನ ಹಣೆ ಬರಹವನ್ನು ಹಳಿದುಕೊಂಡೇ ಆಕೆ ನಂಬಿಕೊಂಡುಬಿಟ್ಟಿದ್ದಳು. ಅವಳನ್ನು ಹೆದರಿಸಿಕೊಂಡು, ಬೆದರಿಸಿಕೊಂಡು ಆಕೆಯ ಸಂಬಳದ ಹಣವನ್ನೂ, ಆಕೆಯ ಬಂಗಾರದ ಒಡವೆಗಳನ್ನೂ ಅವನು ಖಾಲಿ ಮಾಡಿದ್ದ.

ಕೊನೆಗೊಂದು ದಿನ ಅವನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದ ಪಂಚಾಯಿತಿ ಅಧ್ಯಕ್ಷೆಯ ಮಗಳು ರಜನಿ ರವರೊಡನೆ ವಿವಾಹ ನಿಶ್ಚಯ ಮಾಡಿಕೊಂಡು ಬಂದ ವಿಷಯ ತಿಳಿದು ಆಕೆ ಅಲ್ಲಾಡಿ ಹೋದಳು. ಮಹೇಶ್ ತನ್ನನ್ನು ಬಲಾತ್ಕರಿಸಿರುವುದನ್ನು, ತನ್ನ ಹಣ, ಒಡವೆಗಳನ್ನೂ ವಂಚಿಸಿರುವುದನ್ನು ಆಕೆ ತನ್ನ ತಂದೆಗೆ ತಿಳಿಸಿದಳು. ಆನಂತರ ಒಂದೊಂದರಂತೆ ನಡೆದು ಹೋದ ಘಟನಾವಳಿಗಳಿಂದ ಅವಳ ಇಡೀ ಜೀವನಕ್ಕೆ ವಿಧಿಯ ಏಟು ಬಿತ್ತು.

ಅವಲ ತಂದೆ ಕೋಲಾರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಕಾನೂನು ಕ್ರಮ ಜರುಗಿಸಲೇ ಇಲ್ಲ. ವೇಮಗಲ್ ಪೊಲೀಸರಿಗೆ ದೂರು ನೀಡಿದರು. ಅವರೂ ಯಾವುದೇ ಕ್ರಮ ಜರುಗಿಸಲಿಲ್ಲ. ಕೊನೆಗೆ ಬಸವಳಿದು ಕೋಲಾರದ ಮಹಿಳಾ ಪೊಲೀಸರಿಗೆ ದೂರು ನೀಡಿದರು. ಆದರೆ ಇಲ್ಲಿಯೂ ಪೊಲೀಸರು ಹುಡುಗನ ಪರವಾಗಿಯೇ ನಿಂತು ಆಕೆಯ ದೂರನ್ನು ದಾಖಲಿಸದೇ ನಿರ್ಲಕ್ಷಿಸಿದರು. ಕೊನೆಗೆ ಆಕೆ ಪೊಲೀಸ್ ಠಾಣೆಯ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ನಂತರವಷ್ಟೇ ವಿಷಯ ಬಯಲಾಗಿ ವಿವಿಧ ದಲಿತ ಪರ ಸಂಘಟನೆಗಳು ಆಕೆಯ ಬೆನ್ನಿಗೆ ನಿಂತವು. ಆನಂತರ ಆಕೆಯ ದೂರು ದಾಖಲಾದರೂ ಪೊಲೀಸರು ಅವನನ್ನು ಬಂಧಿಸದೇ ಆಟ ಆಡಿದರು.

ಇದೇ ಮೇ 9 ರಂದು ಅವಳ ಮನೆಗೇ ನೇರವಾಗಿ ತನ್ನ ತಂದೆ-ತಾಯಿ, ಅಣ್ಣನೊಂದಿಗೆ ಕಾರಿನಲ್ಲಿ ಬಂದ ಮಹೇಶ್ ತನ್ನೊಂದಿಗೆ ತಂದಿದ್ದ ತಾಳಿಯನ್ನು ತೋರಿಸಿ, ಕೇಸ್ ವಾಪಸ್ ತೆಗೆದುಕೊಂಡರೆ ಮದುವೆಯಾಗುತ್ತೇನೆ, ಕೇಸ್ ಮುಂದುವರೆಸುತ್ತೇನೆಂದರೆ ಇಲ್ಲೇ ಈಗಲೇ ನಿಮ್ಮೆಲ್ಲರನ್ನೂ ಕತ್ತರಿಸಿ ಸಾಯಿಸಿ, ಸಾಯ್ತೀನಿ ಎಂದು ತನ್ನೊಂದಿಗೆ ಕೈಚೀಲದಲ್ಲಿ ತಂದಿದ್ದ ಮಚ್ಚನ್ನೂ ತೋರಿಸಿದನು. ಇವನ ಇಂಥ ದಾಳಿಯನ್ನೇ ಯಾವತ್ತೂ ಊಹಿಸಿರದ ಅಂಬಿಕ ಮನೆಯವರು ನಡುಗಿಹೋದರು. ಪ್ರಾಣ ಉಳಿದರೆ ಸಾಕೆನಿಸಿತ್ತು. ಭಯದಿಂದ ಆಕೆ ಮದುವೆಗೆ ಒಪ್ಪಿದಳು.

ಕೊರೋನಾ ನೆಪವೊಡ್ಡಿ ಇದೇ ಮೇ 9 ರಂದು ಬೆಳಿಗ್ಗೆ 9 ಗಂಟೆಗೆ ವೇಮಗಲ್ ಕಮ್ಮಗುಟ್ಟದ ಮೇಲಿರುವ ಶ್ರೀಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಬೆರಳೆಣಿಕೆ ಜನ ಸೇರಿ ಮಹೇಶ್-ಅಂಬಿಕ ಮದುವೆ ಆಯಿತು ಎನ್ನಿಸಿಬಿಟ್ಟರು! ನಂತರದ ಕೆಲವೇ ಘಳಿಗೆಗಳಲ್ಲಿ ಅಂಬಿಕ ಹಾಕಿರುವ ಕೇಸ್ನ್ನು ಹಿಂತೆಗೆದುಕೊಳ್ಳಲು ಎಂದು ಕೆಲವು ಕಾಗದಪತ್ರಗಳಿಗೂ ಅವಳ, ಅವಳ ಮನೆಯವರ ಸಹಿಗಳನ್ನೂ ಹಾಕಿಸಿಕೊಳ್ಳಲಾಯಿತು. ಅದೇ ದಿನ ರಾತ್ರಿ 9ಕ್ಕೆ ಅವರಿಗೆ ಶೋಭನವನ್ನೂ ಅವಳ ಮನೆಯಲ್ಲಿಯೇ ಸಜ್ಜುಗೊಳಿಸಲಾಯಿತು. ಆದರೆ ಶೋಭನದಲ್ಲಿಯೇ ಮಹೇಶ್ ಅವಳನ್ನು ಕತ್ತು ಹಿಚುಕಿ ಕೊಲ್ಲಲು ಪ್ರಯತ್ನಿಸಿದ್ದೂ ಆಯಿತು.

ಸಧ್ಯಕ್ಕೆ ಮಹೇಶ್ ಹಾಗೂ ಅವನ ಮನೆಯವರು ಪರಾರಿಯಲ್ಲಿದ್ದಾರೆ. ಏತನ್ಮಧ್ಯೆ ಮಹೇಶ ಇನ್ನೊಂದು ಮದುವೆಯಾಗುವ ತಯ್ಯಾರಿಯಲ್ಲಿರುವ ಸ್ಪಷ್ಟ ಸಂದೇಶವೂ ಇದೆ. ಆದರೆ ಸಬ್ ರಿಜಿಸ್ಟ್ರಾರ್ ಆಫಿಸಿನಲ್ಲಿ ನೋಂದಾಯಿತ ಮದುವೆಯಾಗುವನೋ ಅಥವಾ ಯಥಾ ಪ್ರಕಾರ ಯಾವುದಾದರೂ ದೇವಸ್ಥಾನದ ಮುಂದೆ ಮದುವೆಯಾಗುವನೋ ಎಂಬ ಗೊಂದಲವಿದೆ. ಅಥವಾ ಯಾರದಾದರೂ ಸಂಬಂಧಿಕರ ಮನೆ ಮುಂದೆ ಮದುವೆ ಆದರೂ ಆಗಬಹುದಾದ ಅವಕಾಶವೂ ಇದೆ. ಹೀಗಾಗಿ ಸಧ್ಯಕ್ಕೆ ಅಂಬಿಕಾ ತನ್ನ ಗಂಡನನ್ನು ಹುಡುಕಿಕೊಂಡು ಊರೂರು ಅಲೆಯುತ್ತಿದ್ದಾಳೆ. ತನ್ನ ಗಂಡ ತನಗೆ ದೊರಕದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು ನಿಶ್ಚಿತ ಎಂದು ಆಕೆ ಈಗಾಗಲೇ ಹೇಳಿಯಾಗಿದೆ!

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English