ದಾವಣಗೆರೆ: ಸಚಿವ ಸಿ. ಪಿ. ಯೋಗೇಶ್ವರ್ ವಿರುದ್ಧ ವಾಗ್ದಾಳಿ ಮತ್ತೆ ಮುಂದುವರೆಸಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸೋತರೂ ಮಂತ್ರಿ ಮಾಡಿದ್ದಕ್ಕೆ ದೆಹಲಿಯಲ್ಲಿ ಲಾಬಿ ಮಾಡ್ತೀಯಾ. ಯಾರೋ ಒಬ್ಬರು ಲಾಬಿ ಮಾಡಿದಾಕ್ಷಣ ಸಿಎಂ ಬದಲಾವಣೆ ಮಾಡ್ತಾರಾ. ಕೊರೊನಾ ಸಂಕಷ್ಟ ಇರುವ ಕಾರಣಕ್ಕೆ ರಾಜಕಾರಣ ಬೇಡ ಅಂತಾ ಸುಮ್ಮನಿದ್ದೇನೆ. ಇದೆಲ್ಲಾ ಮುಗಿದ ಮೇಲೆ ಮಾತನಾಡ್ತೇನೆ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಚನ್ನಪಟ್ಟಣದ ಜನರು ಕುಡಿಯಲು ನೀರಿಲ್ಲ, ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಹತ್ತು ಹಲವು ಸಮಸ್ಯೆ ಅನುಭವಿಸುತ್ತಿದ್ದಾರೆ. ಇಂತ ಸಮಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಜನರ ಹಿತ ಕಾಪಾಡುವುದನ್ನು ಬಿಟ್ಟು ಲಾಬಿ ಮಾಡಲು ಹೋಗುವುದು ಎಷ್ಟರ ಮಟ್ಟಿಗೆ ಸರಿ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಸಿಎಂ ಬದಲಾವಣೆ ಯಾವುದೇ ಕಾರಣಕ್ಕೂ ಆಗಲ್ಲ. ಇದು ಕೇವಲ ಊಹಾಪೋಹ. ಈ ಅವಧಿಯನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪೂರೈಸುವುದು ನೂರಕ್ಕೆ ನೂರರಷ್ಟು ಸತ್ಯ. ಸೂರ್ಯ ಚಂದ್ರರು ಇರುವುದು ಹೇಗೇ ಸತ್ಯವೋ ಯಡಿಯೂರಪ್ಪ ಸಿಎಂ ಆಗಿ ಅವಧಿ ಪೂರ್ಣಗೊಳಿಸುತ್ತಾರೆ. ಈಗಾಗಲೇ ಪಕ್ಷದ ವರಿಷ್ಠರು ಹಾಗೂ ರಾಜ್ಯಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ನಮ್ಮ ನಾಯಕರು ಯಡಿಯೂರಪ್ಪ ಅವರೇ ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿ ಹೇಳಿಕೆಯಿಂದ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರವಾಗಿದೆ. ಕೊರೊನಾದಂತಹ ಸಂಕಷ್ಟದ ವೇಳೆಯಲ್ಲಿ ಈ ರೀತಿ ಮಾತನಾಡಬಾರದಿತ್ತು. ಯಡಿಯೂರಪ್ಪ ಅವರು 5 ಕೆಜಿ ಅಕ್ಕಿಯನ್ನು ಬಿಪಿಎಲ್ ಕಾರ್ಡ್ ದಾರರಿಗೆ ನೀಡಲು ಒಪ್ಪಿದ್ದಾರೆ. ಇದರಲ್ಲಿ ಸಂದೇಹ ಇಲ್ಲ ಎಂದು ತಿಳಿಸಿದರು.
Click this button or press Ctrl+G to toggle between Kannada and English