ಮಂಗಳೂರು : ‘ತೌಕ್ತೇ’ ಚಂಡಮಾರುತದ ಪರಿಣಾಮವು ಪಶ್ಚಿಮ ಕರಾವಳಿ ತೀರದ ಮೇಲೆ ಉಂಟಾಗಿದ್ದು ಶನಿವಾರದ ಪೂರ್ಣ ಪ್ರಮಾಣದಲ್ಲಿ ತನ್ನ ಆರ್ಭಟ, ಶಕ್ತಿ ತೋರಿಸಿ ಚಲನೆ ಮುಂದುವರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅರಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಕಾಣಿಸಿಕೊಂಢಿರುವ ಚಂಡಮಾರುತವು ಲಕ್ಷ ದ್ವೀಪವನ್ನು ಕೇಂದ್ರೀಕರಿಸಿದೆ. ಮಧ್ಯಾಹ್ನ ವೇಳೆಗೆ ಕೇರಳದ ಕಣ್ಣೂರಿನಿಂದ 360 ಕಿ.ಮೀ. ಪಶ್ಚಿಮ ಮತ್ತು ನೈರುತ್ಯ ಭಾಗದಲ್ಲಿ ಚಂಡಮಾರುತ ತನ್ನ ಚಲನೆ ಮುಂದುವರಿಸಿದೆ. ಗಂಟೆಗೆ 90-100 ಕಿ.ಮೀ.ವೇಗದಲ್ಲಿ ಉತ್ತರ ದಿಕ್ಕಿನತ್ತ ಸಂಚರಿಸಲಿರುವ ಈ ಚಂಡಮಾರುತ ಮೇ 18ರ ವೇಳೆಗೆ ಗುಜರಾತ್ ತೀರಕ್ಕೆ ತಲುಪುವ ಸಾಧ್ಯತೆ ಇದೆ.
ಇನ್ನೂ ಎರಡ್ಮೂರು ದಿನ ಕಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ‘ತೌಕ್ತೇ’ ಚಂಡಮಾರುತವು ಪರಿಣಾಮ ಬೀರಲಿದ್ದು, ಗುಡುಗು, ಮಿಂಚು ಸಹಿತ ಭಾರಿ ಗಾಳಿ ಮಳೆಯಾಗಲಿದೆ ಎಮದು ಹವಾಮಾನ ಇಲಾಖೆ ತಿಳಿಸಿದೆ.
ಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ತೀರ ಪ್ರದೇಶದಲ್ಲಿ ಅಲೆಗಳ ಅಬ್ಬರವೂ ಬಿರುಸು ಪಡೆದಿದೆ. ಉಳ್ಳಾಲ, ಸೋಮೇಶ್ವರ, ಪಣಂಬೂರು, ಮೀನಕಳಿಯ ಮತ್ತಿತರ ತೀರದಲ್ಲಿ ಕಡಲು ಪ್ರಕ್ಷುಬ್ಧವಾಗಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.
ಮುಂದಿನ ದಿನಗಳಲ್ಲಿ 2.9ರಿಂದ 4.2 ಮೀ. ಎತ್ತರದ ಅಲೆಗಳು ತೀರದತ್ತ ಅಪ್ಪಳಿಸಲಿವೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ತೀರದಿಂದ ಕೆಲವು ಮೀಟರ್‌ಗಳಷ್ಟು ದೂರವಿದ್ದ ಕಡಲು, ಇದೀಗ ತೀರಕ್ಕೆ ಸಮೀಪವಾಗುತ್ತಿದೆ. ಈ ಮಧ್ಯೆ ಕಡಲ್ಕೊರೆತದ ಭೀತಿಯೂ ಎದುರಾಗಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ.
ಈಗಾಗಲೇ ನಗರದ ಹಳೆ ದಕ್ಕೆ ಸಹಿತ ಬಂದರು ಪ್ರದೇಶದಲ್ಲಿ ಮೀನುಗಾರಿಕಾ ಬೋಟ್‌ಗಳು ಲಂಗರು ಹಾಕಿವೆ. ಮೀನುಗಾರರು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಶುಕ್ರವಾರ ಅಪರಾಹ್ನದ ಬಳಿಕ ಗಾಳಿಯ ಅಬ್ಬರ ಹೆಚ್ಚಳವಾಗಿದ್ದು, ಬಲವಾದ ಗಾಳಿಯೂ ಬೀಸತೊಡಗಿವೆ. ದಟ್ಟ ಮೋಡಗಳ ಚಲನೆಯೂ ಕಂಡು ಬಂದಿದೆ. ಶನಿವಾರ ಗಂಟೆಗೆ 50-60 ಕಿ.ಮೀ. ನಿಂದ 70 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Click this button or press Ctrl+G to toggle between Kannada and English