ಬೆಂಗಳೂರು : ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ತನ್ನ ಮಾನವೀಯ ಸೇವೆಯಿಂದ ದೇಶ ವಿದೇಶಗಳಲ್ಲಿ ಮೆಚ್ಚುಗೆ ಪಡೆದಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರನ್ನು ಬಿಜೆಪಿ ಸರ್ಕಾರ ದೆಹಲಿ ಪೊಲೀಸರ ಮೂಲಕ ವಿಚಾರಣೆಗೆ ಒಳಪಡಿಸಿರುವುದು ಖಂಡನೀಯ. ಕೇಂದ್ರದ ಧೋರಣೆಯಿಂದ ಭವಿಷ್ಯದಲ್ಲಿ ಜನ ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ಸಮುದಾಯದಲ್ಲಿ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದಂತಾಗಿದೆ ಎಂದು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಟೀಕಿಸಿದ್ದಾರೆ.
ಕೊರೋನಾ ಎರಡನೇ ಅಲೆ ನಿಯಂತ್ರಿಸಲು ಸಾಧ್ಯವಾಗದೇ ಹತಾಶೆಗೆ ಒಳಗಾಗಿರುವ ಬಿಜೆಪಿ ನಾಯಕರು, ಜನ ವಿರೋಧಿ ಅಲೆ ಎದುರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನರನ್ನು ದಾರಿ ತಪ್ಪಿಸಲು ಪ್ರತಿಪಕ್ಷಗಳನ್ನು ಗುರಿ ಮಾಡಿಕೊಂಡಿದೆ. ಇಂತಹ ಬೆದರಿಕೆಗಳಿಗೆ ನಮ್ಮ ಪಕ್ಷ ಮತ್ತು ನಾಯಕರು ಹೆದರುವುದಿಲ್ಲ ಎಂದಿದ್ದಾರೆ.
ವಿದೇಶಗಳಿಂದ ಆಮ್ಲಜನಕ ಮತ್ತಿತರ ವೈದ್ಯಕೀಯ ಪರಿಕರಗಳು ಭಾರತೀಯ ರೆಡ್ ಕ್ರಾಸ್ ಹೆಸರಿನಲ್ಲಿ ದೇಶಕ್ಕೆ ಬರುತ್ತಿವೆ. ಜಗತ್ತಿನಾದ್ಯಂತ ವ್ಯಾಪಿಸಿರುವ ರೆಡ್ ಕ್ರಾಸ್ ಸಂಸ್ಥೆಗಳು ಭಾರತಕ್ಕೆ ನೆರವು ದೊರಕಿಸುತ್ತಿವೆ. ಆಮ್ಲಜನಕಕ್ಕಾಗಿ ಬೇರೆ ದೇಶಗಳನ್ನು ನೇರವಾಗಿ ಕೇಳಲು ಸಾದ್ಯವಾಗದೇ ಭಾರತೀಯ ರೆಡ್ ಕ್ರಾಸ್ ಮೂಲಕ ಮೋದಿ ಸರ್ಕಾರ ಮನವಿ ಸಲ್ಲಿಸಿದೆ. ಹಗಲಿರುಳು ದುಡಿಯುತ್ತಿರುವ ರೆಡ್ ಕ್ರಾಸ್ ಸ್ವಯಂ ಸೇವಕರ ಹೆಸರನ್ನು ಕೇಂದ್ರ ಸರ್ಕಾರವಾಗಲೀ, ಬಿಜೆಪಿ ನಾಯಕರಾಗಲೀ ಎಲ್ಲಿಯೂ ಹೇಳುತ್ತಿಲ್ಲ. ಉಪಕಾರ ಸ್ಮರಿಸುವ ಸೌಜನ್ಯವೂ ಸಹ ಇವರಿಗೆ ಇಲ್ಲ. ಆದರೆ ಎಲ್ಲವನ್ನೂ ನಾವೇ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಮತ್ತೊಬ್ಬರ ಕೆಲಸವನ್ನು ಮೆಚ್ಚುವುದಿರಲಿ, ಕನಿಷ್ಠ ಸಹಿಸಿಕೊಳ್ಳುವ ಸಹನಾ ಶಕ್ತಿಯೂ ಸಹ ಇವರಲ್ಲಿ ಇಲ್ಲ ಎಂದು ಟೀಕಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಂ.ಎಸ್. ರಕ್ಷಾ ರಾಮಯ್ಯ, ವಿದೇಶಗಳಿಂದ ಬರುವ ನೆರವನ್ನು ರೆಡ್ ಕ್ರಾಸ್ ಪ್ರತಿನಿಧಿಗಳು ಮುಖ್ಯಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸುತ್ತಾರೆ. ಇಲ್ಲಿ ಬಿಜೆಪಿ ನಾಯಕರು ಚಿತ್ರ ತೆಗೆಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಪ್ರಚಾರಕ್ಕಾಗಿ ಎಂದೂ ಹಾತೊರೆಯದೇ ಸೇವೆ ಸಲ್ಲಿಸುತ್ತಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರನ್ನು ಹತ್ತಿಕ್ಕಲು ನಡೆಸಿರುವ ಷಡ್ಯಂತ್ರ ಖಂಡನೀಯ. ಕೊರೋನಾ ಎರಡನೇ ಅಲೆ ಭಾರೀ ಅನಾಹುತ ಸೃಷ್ಟಿಸಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಸೇವೆಯನ್ನು ನಿಯಂತ್ರಿಸಲು ಮುಂದಾಗಿರುವುದು ಸರಿಯಲ್ಲ. ವಿಪತ್ತಿನ ಸಂದರ್ಭದಲ್ಲೂ ಬಿಜೆಪಿ ನಾಯಕರು ರಾಜಕಾರಣ ಮಾಡುತ್ತಿರುವುದು ನಿಜಕ್ಕೂ ಖಂಡನೀಯ ಎಂದು ಹೇಳಿದ್ದಾರೆ.
ಕೊರೋನಾ ಕಷ್ಟಕಾಲದಲ್ಲಿ ಶ್ರೀನಿವಾಸ್ ನಿಜ ಅರ್ಥದಲ್ಲಿ ಆಪತ್ ಬಾಂಧವರಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲ ಅಲೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿಂದೆ, ಮುಂದೆ ಯೋಚಿಸದೇ ಲಾಕ್ ಡೌನ್ ಘೋಷಿಸಿದಾಗಲೂ ದೆಹಲಿಯ ಯುವ ಕಾಂಗ್ರೆಸ್ ಕಚೇರಿಯನ್ನು ಸಂಪೂರ್ಣವಾಗಿ ಅಡುಗೆ ಮನೆಯನ್ನಾಗಿ ಪರಿವರ್ತಿಸಿ ತಿಂಗಳುಗಟ್ಟಲೆ ಹಸಿದವರಿಗೆ ಅನ್ನ-ನೀರು ಕೊಟ್ಟಿದ್ದರು. ದೆಹಲಿಯಲ್ಲಿ ಮಾತ್ರವಲ್ಲ, ದೇಶದ ಬೇರೆ ಬೇರೆ ಭಾಗಗಳಲ್ಲೂ ಯುವ ಕಾಂಗ್ರೆಸ್ ಘಟಕಗಳನ್ನು ತಮ್ಮ ಚಟುವಟಿಕೆಯ ಭಾಗವಾಗಿ ಮಾಡಿಕೊಂಡರು. ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದಾಗಲೂ ಅವರ ನೆರವಿಗೆ ಬಂದಿದ್ದರು. ಹೀಗಾಗಿ ಅವರು ಜನಪ್ರಿಯರಾಗುತ್ತಿದ್ದಾರೆ.
ದೆಹಲಿಯ ಮಾಧ್ಯಮ ಕ್ಷೇತ್ರದಲ್ಲೂ ಬಿ..ವಿ. ಶ್ರೀನಿವಾಸ್ ಅಚ್ಚು ಮೆಚ್ಚು. ಅದೆಷ್ಟೋ ಮಂದಿಗೆ ಹಾಸಿಗೆ, ಆಮ್ಲಜನಕ ಸೇರಿ ಹಲವು ಸೌಕರ್ಯಗಳನ್ನು ಒದಗಿಸಿದ್ದರು. ಇಂತಹ ನೈಜ ಸೇವೆ ಸಲ್ಲಿಸುತ್ತಿರುವ ನಾಯಕನ್ನು ಪೊಲೀಸ್ ಬಲದ ಮೂಲಕ ನಿಯಂತ್ರಿಸುವ ಬಿಜೆಪಿ ನಾಯಕರ ಕನಸು ಎಂದಿಗೂ ನನಸಾಗದು ಎಂದು ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯೂರೋ.
Click this button or press Ctrl+G to toggle between Kannada and English